- ಜಗಳೂರಲ್ಲಿ ₹3 ಕೋಟಿ ವೆಚ್ಚದಲ್ಲಿ ನಿರ್ಮಾಣ । ಕಳಪೆ ಕಾಮಗಾರಿಗೆ ಜನರ ಆಕ್ರೋಶ - - -
ಕನ್ನಡಪ್ರಭ ವಾರ್ತೆ ಜಗಳೂರುಪಟ್ಟಣದ ಸಾಂಸ್ಕೃತಿಕ ಕಲಾ ಕೇಂದ್ರ ಆಗಬೇಕಿದ್ದ ಬಯಲು ರಂಗಮಂದಿರದ ಮೇಲ್ಚಾವಣೆ (ಟಾಪ್‌ಸೀಲ್) ಶನಿವಾರ ಸಂಜೆ ಬೀಸಿದ ಭಾರಿ ಬಿರುಗಾಳಿಗೆ ಇದ್ದಕ್ಕಿದ್ದಂತೆ ಕುಸಿದುಬಿದ್ದಿದೆ. ಸುಮಾರು ₹3 ಕೋಟಿ ಅನುದಾನದಲ್ಲಿ ನಿರ್ಮಾಣಗೊಂಡಿದ್ದ ಈ ರಂಗಮಂದಿರದ ಮೇಲ್ಛಾವಣಿ ನೆಲಸಮವಾಗಿದ್ದು, ಕಳಪೆ ಕಾಮಗಾರಿ ಎಂಬುದು ಬಟಾಬಯಲಾಗಿದೆ. ಸಾರ್ವಜನಿಕ ವಲಯದಲ್ಲಿಯೂ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಶನಿವಾರ ಸಂಜೆ ಜಗಳೂರು ಪಟ್ಟಣದಾದ್ಯಂತ ಗುಡುಗು, ಸಿಡಿಲು ಹಾಗೂ ಬಿರುಗಾಳಿ ಸಹಿತ ಮಳೆಯ ಆರ್ಭಟ ಶುರುವಾಗಿತ್ತು. ಈ ವೇಳೆ ಇದ್ದಕ್ಕಿದ್ದಂತೆ ಬೀಸಿದ ಭಾರಿ ಬಿರುಗಾಳಿಗೆ ರಂಗಮಂದಿರದ ಮೇಲ್ಚಾವಣಿಯಲ್ಲಿ ಬಿರುಕು ಕಾಣಿಸಿಕೊಂಡಿತು. ಕ್ಷಣಾರ್ಧದಲ್ಲಿ ಇಡೀ ಮೇಲ್ಚಾವಣಿ ಭಾರಿ ಶಬ್ದದೊಂದಿಗೆ ನೆಲಕ್ಕೆ ಅಪ್ಪಳಿಸಿತು. ರಂಗಮಂದಿರ ಕುಸಿದಾಗ ಉಂಟಾದ ವಿಕಟ ಶಬ್ದಕ್ಕೆ ಸುತ್ತಮುತ್ತಲಿನ ನಿವಾಸಿಗಳು ಭೂಕಂಪವಾಯಿತೇನೋ ಎಂದು ಭಯಭೀತರಾಗಿ ಮನೆಯಿಂದ ಹೊರಗೆ ಓಡಿಬಂದಿದ್ದಾರೆ. ಬಳಿಕ ಅದು ರಂಗಮಂದಿರದ ಮೇಲ್ಚಾವಣಿ ಎಂದು ತಿಳಿದು ನಿಟ್ಟುಸಿರು ಬಿಟ್ಟಿದ್ದಾರೆ. ಅದೃಷ್ಟವಶಾತ್, ಮೇಲ್ಚಾವಣಿ ಕುಸಿದ ಸಮಯದಲ್ಲಿ ಅಲ್ಲಿ ಯಾರೂ ಇಲ್ಲದಿದ್ದ ಕಾರಣಕ್ಕೆ ದೊಡ್ಡ ಅನಾಹುತ ತಪ್ಪಿದೆ.₹3 ಕೋಟಿ ನೀರಿನಲ್ಲಿ ಹೋಮ:
ಶಾಸಕ ಎಸ್.ವಿ. ರಾಮಚಂದ್ರ ಅವಧಿಯಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ, ಜಿ.ಎಂ. ಸಿದ್ದೇಶ್ವರ ಸಂಸದರಾಗಿದ್ದ ಅವಧಿಯಲ್ಲಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಸೇರಿದಂತೆ ಸರ್ಕಾರದ ವಿವಿಧ ಪ್ರಮುಖ ಯೋಜನೆಗಳ ಅಡಿಯಲ್ಲಿ ಸುಮಾರು ₹3 ಕೋಟಿ ವೆಚ್ಚದಲ್ಲಿ ಈ ಬಯಲು ರಂಗಮಂದಿರವನ್ನು ಅತ್ಯಂತ ಸುಸಜ್ಜಿತವಾಗಿ ನಿರ್ಮಿಸಲಾಗಿತ್ತು. ಆದರೆ, ಪ್ರಕೃತಿಯ ಸಣ್ಣದೊಂದು ಸವಾಲನ್ನೂ ತಡೆದುಕೊಳ್ಳದಷ್ಟು ಕಳಪೆ ಕಾಮಗಾರಿ ನಡೆಸಲಾಗಿದೆ. ಮಳೆ-ಗಾಳಿಯಿಂದ ಬೃಹತ್ ಕಟ್ಟಡದ ಮೇಲ್ಚಾವಣಿ ತರಗೆಲೆಯಂತೆ ಉದುರಿಬಿದ್ದಿದೆ.
ಕೋಟ್ಯಂತರ ರು. ವೆಚ್ಚದ ಸರ್ಕಾರಿ ಕಟ್ಟಡಗಳು ದಶಕಗಳ ಕಾಲ ಸುಭದ್ರವಾಗಿರಬೇಕು. ಆದರೆ, ಕೇವಲ ನಾಲ್ಕೇ ವರ್ಷಗಳಲ್ಲಿ ರಂಗಮಂದಿರದ ಮೇಲ್ಚಾವಣಿ ಕುಸಿದಿರುವುದು ಕಾಮಗಾರಿಯ ಗುಣಮಟ್ಟವನ್ನು ಅಣಕಿಸುವಂತಿದೆ. ಬಿರುಗಾಳಿಯ ನೆಪವೊಡ್ಡಿ ಅಧಿಕಾರಿಗಳು ಕೈ ತೊಳೆದುಕೊಳ್ಳಲು ಮುಂದಾಗಬಾರದು. ಈ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸಿ, ತಪ್ಪಿತಸ್ಥ ಗುತ್ತಿಗೆದಾರರು ಹಾಗೂ ಅಧಿಕಾರಿಗಳನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಜಗಳೂರು ಪಟ್ಟಣದ ಸಾರ್ವಜನಿಕರು ಒತ್ತಾಯಿಸಿದ್ದಾರೆ.
- - -(ಕೋಟ್) ಬಯಲು ರಂಗಮಂದಿರ ಕಾಮಗಾರಿ ಜವಾಬ್ದಾರಿ ನಿರ್ಮಿತಿ ಕೇಂದ್ರದ್ದು. ಇಲ್ಲಿನ ಅಧಿಕಾರಿಗಳ ನಿರ್ಲಕ್ಷ್ಯವೇ ಮೇಲ್ಚಾವಣಿ ಕುತಿತದ ದುರಂತಕ್ಕೆ ನೇರಕಾರಣ. ಕಟ್ಟಡ ಕಟ್ಟಿ ಕೇವಲ 4 ವರ್ಷಗಳು ಕಳೆಯುವ ಮುನ್ನವೇ ಹೀಗೆ ಮೇಲ್ಚಾವಣಿ ಧರಾಶಾಹಿ ಆಗಿರುವುದು ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಹಿಡಿದ ಕನ್ನಡಿಯಾಗಿದೆ. ಇಂತಹ ಕಳಪೆ ಕಾಮಗಾರಿ ನಡೆಸಿ ಸರ್ಕಾರದ ಹಣ ಲೂಟಿ ಮಾಡಿದ ಅಧಿಕಾರಿಗಳ ವಿರುದ್ಧ ತಕ್ಷಣವೇ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು.
- ಮಹಾಲಿಂಗಪ್ಪ, ಹೋರಾಟಗಾರ, ಎಸ್‌ಎಫ್ಐ.- - -
-16 ಜೆ.ಜಿ.ಎಲ್.1:ಜಗಳೂರು ಪಟ್ಟಣದಲ್ಲಿ ₹3 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ರಂಗಮಂದಿರ ಮೇಲ್ಚಾವಣಿ ಮಳೆ-ಗಾಳಿಯಿಂದ ನೆಲಸಮವಾಗಿರುವುದು.