ಸಾರಾಂಶ
ಕನ್ನಡಪ್ರಭ ವಾರ್ತೆ ಬಳ್ಳಾರಿ
ಬೆಂಗಳೂರಿನ ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ಹಾಗೂ ಲೋಹಿಯಾ ಪ್ರಕಾಶನ ಸಹಯೋಗದಲ್ಲಿ ಆ. 10ರಂದು ಭಾನುವಾರ ಕಥೆಗಾರ ಡಾ. ರಾಜಶೇಖರ ನೀರಮಾನ್ವಿ ನೆನಪು ಹಾಗೂ ನೀರಮಾನ್ವಿಯವರ ಕಥೆಗಳ ಕುರಿತ ಮಾತುಕತೆ ಮತ್ತು ಸಂವಾದ ಕಾರ್ಯಕ್ರಮ ನಡೆಯಲಿದೆ.ಗುರುವಾರ ಸುದ್ದಿಇಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಲೋಹಿಯಾ ಪ್ರಕಾಶನದ ಮುಖ್ಯಸ್ಥ ಸಿ.ಚನ್ನಬಸವಣ್ಣ, ಈ ನಾಡಿನ ಅತ್ಯಂತ ಶ್ರೇಷ್ಠ ಬರಹಗಾರ ಎನಿಸಿದ್ದ ಡಾ. ರಾಜಶೇಖರ ನೀರಮಾನ್ವಿ ಅವರು ಬರೆದಿದ್ದು ಬರೀ 12 ಕಥೆಗಳನ್ನು ಮಾತ್ರ. ಆದರೆ, ಅವು ಇಂದಿಗೂ ನಮ್ಮನ್ನು ಮತ್ತೆಮತ್ತೆ ಕಾಡುವ ಕಥೆಗಳಾಗಿವೆ ಎಂದರು.
ಕನ್ನಡದ ಕಥೆಗಳನ್ನು ಅವಲೋಕಿಸುವಾಗ ನೀರಮಾನ್ವಿಯವರ ಕಥೆಗಳನ್ನು ಬಿಟ್ಟು ಚರ್ಚಿಸಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಅವರ ಕಥೆಗಳು ಗಟ್ಟಿತನದಿಂದ ಕೂಡಿವೆ. ಸಂಖ್ಯಾ ದೃಷ್ಟಿಯಿಂದ ಕಡಿಮೆ ಎನಿಸಿದರೂ ನೀರಮಾನ್ವಿಯವರ ಕಥೆಗಳ ಸತ್ವದ ದೃಷ್ಟಿಯಿಂದ ಹೊಸ ಕಥೆಗಾರರಿಗೆ ಮಾದರಿ. ವೈಚಾರಿಕೆ ನೆಲೆಯ ಕೃತಿಗಳ ಮೂಲಕ ಇಂದು ನಾಡಿಗೆ ಲೋಹಿಯಾ ಪ್ರಕಾಶನ ಪರಿಚಿತವಾಗಿದ್ದರೆ ಅದು ಡಾ.ರಾಜಶೇಖರ ನೀರಮಾನ್ವಿಯವರೇ ಕಾರಣರು ಎಂದು ಸ್ಮರಿಸಿದರು.ಅವರ ಹಂಗಿನ ಅರಮನೆ ಹೊರಗೆ ಕಥೆಗೆ 1978ರಲ್ಲಿ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಬಂದಿದೆ. ಪ್ರಶಸ್ತಿ, ಪ್ರಸಿದ್ಧಿಗಳಿಂದ ದೂರವಿದ್ದರೂ ಡಾ. ಬೆಟಗೇರಿ ಕೃಷ್ಣಶರ್ಮ ಕಥಾ ಪ್ರಶಸ್ತಿ, ರಾಯಚೂರು ಜಿಲ್ಲಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗುವ ಅವಕಾಶಗಳು ಅವರನ್ನು ಹುಡುಕಿಕೊಂಡು ಬಂದಿವೆ. ನಮ್ಮ ಭಾಗದ ಶ್ರೇಷ್ಠ ಕಥೆಗಾರರಾಗಿದ್ದ ಡಾ. ರಾಜಶೇಖರ ನೀರಮಾನ್ವಿಯವರನ್ನು ಸ್ಮರಿಸಿಕೊಳ್ಳುವುದರ ಜೊತೆಗೆ ಇಂದಿನ ಯುವ ಕಥೆಗಾರರ ಮೂಲಕ ಅವರ ಕಥೆಗಳನ್ನು ಜೀವಂತವಾಗಿರಿಸುವ ಆಶಯ ನಮ್ಮದು ಎಂದರು.
ಈ ಕಾರಣಕ್ಕಾಗಿಯೇ ಆ. 10 ರಂದು ಬೆಳಗ್ಗೆ ೧೦.೩೦ಕ್ಕೆ ಇಲ್ಲಿನ ಡಾ. ರಾಜಕುಮಾರ್ ರಸ್ತೆಯಲ್ಲಿರುವ ಬಸವರಾಜೇಶ್ವರಿ ಪಬ್ಲಿಕ್ ಶಾಲೆಯಲ್ಲಿ (ಬಿಪಿಎಸ್‌ಸಿ) ಡಾ. ರಾಜಶೇಖರ ನೀರಮಾನ್ವಿ ನೆನಪು ಕಾರ್ಯಕ್ರಮ ಸಂಘಟಿಸಲಾಗಿದ್ದು ನೀರಮಾನ್ವಿಯವರ ಕಥೆಗಳ ಕುರಿತು ಮಾತುಕತೆ ಮತ್ತು ಸಂವಾದ ಇರುವುದರಿಂದ ಇಂದಿನ ಯುವ ಕಥೆಗಾರರಿಗೆ ಹೆಚ್ಚು ಪೂರಕವಾಗಲಿದೆ ಎಂದು ತಿಳಿಸಿದರು.ಹಿರಿಯ ಲೇಖಕಿ ಸವಿತಾ ನಾಗಭೂಷಣ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಲೋಹಿಯಾ ಪ್ರಕಾಶನದ ಸಿ.ಚನ್ನಬಸವಣ್ಣ ಉಪಸ್ಥಿತರಿರುವರು. ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದ ಅಧ್ಯಕ್ಷೆ ಎಚ್.ಆರ್. ಸುಜಾತಾ ಅಧ್ಯಕ್ಷತೆ ವಹಿಸುವರು. ಬೆಳಗಿನ ಮಾತುಕತೆಯಲ್ಲಿ ಹಿರಿಯ ಲೇಖಕ ಡಾ. ರಾಜೇಂದ್ರ ಚೆನ್ನಿ ಹಾಗೂ ಡಾ. ಪಿ.ಭಾರತಿದೇವಿ ಭಾಗವಹಿಸುವರು. ಮಧ್ಯಾಹ್ನದ ಮಾತುಕತೆಯಲ್ಲಿ ಲೇಖಕರಾದ ಡಾ. ಅಮರೇಶ ನುಗಡೋಣಿ ಹಾಗೂ ಡಾ. ಚಿದಾನಂದ ಸಾಲಿ ಪಾಲ್ಗೊಳ್ಳುವರು. ಸಂಜೆ 4.30ಕ್ಕೆ ಜರುಗುವ ಸಮಾರೋಪ ಸಮಾರಂಭದಲ್ಲಿ ಸಮಾಜಮುಖಿ ಪತ್ರಿಕೆಯ ಸಂಪಾದಕ ಚಂದ್ರಕಾಂತ ವಡ್ಡು ಭಾಗವಹಿಸುವರು.
ಲೇಖಕರಾದ ಅಜಯ ಬಣಕಾರ, ವೀರೇಂದ್ರ ರಾವಿಹಾಳ, ಡಾ. ದಸ್ತಗೀರಸಾಬ್ ದಿನ್ನಿ ಹಾಗೂ ರಂಗತೋರಣ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ಸುದ್ದಿಗೋಷ್ಠಿಯಲ್ಲಿದ್ದರು.