ಪುರಸಭೆ ವ್ಯಾಪ್ತಿಯ ಸಂಸ್ಥೆಗಳಿಗೆ ನೋಟಿಸ್‌ ನೀಡಿ ನಾಯಿಗಳ ಸಂಖ್ಯೆಯನ್ನು ಸಂಗ್ರಹಿಸಿದೆ. ಈಗಾಗಲೇ 70 ನಾಯಿಗಳನ್ನು ಗುರುತಿಸಲಾಗಿದೆ. ಉಳಿದಂತೆ ಒಟ್ಟು 700 ನಾಯಿಗಳು ಇರಬಹುದು ಎಂದು ಅಂದಾಜಿಸಲಾಗಿದೆ.

ಹೂವಿನಹಡಗಲಿ: ಪಟ್ಟಣದ ಪುರಸಭೆ ವ್ಯಾಪ್ತಿಯ ಬೀದಿ ನಾಯಿಗಳನ್ನು, ನಾಯಿ ನಿರಾಶ್ರಿತ ಕೇಂದ್ರಕ್ಕೆ ಸ್ಥಳಾಂತರ ಮಾಡುವ ಕಾರ್ಯಕ್ಕೆ ಪುರಸಭೆ ಮುಂದಾಗಿದೆ.

ಸರ್ವೋಚ್ಚ ನ್ಯಾಯಾಲಯ ಬೀದಿ ನಾಯಿಗಳ ಹಾವಳಿ ಕುರಿತು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು, ನ. 7, 2025ರಂದು ಸ್ಥಳೀಯ ಸಂಸ್ಥೆಗಳಿಗೆ ಬೀದಿ ನಾಯಿಗಳ ಹಾವಳಿ ತಡೆಗಟ್ಟಲು ಕೆಲ ನಿರ್ದೇಶನ ನೀಡಿತ್ತು. ಈ ಹಿನ್ನೆಲೆಯಲ್ಲಿ ಪುರಸಭೆ ವ್ಯಾಪ್ತಿಯ ಸಂಸ್ಥೆಗಳಿಗೆ ನೋಟಿಸ್‌ ನೀಡಿ ನಾಯಿಗಳ ಸಂಖ್ಯೆಯನ್ನು ಸಂಗ್ರಹಿಸಿದೆ. ಈಗಾಗಲೇ 70 ನಾಯಿಗಳನ್ನು ಗುರುತಿಸಲಾಗಿದೆ. ಉಳಿದಂತೆ ಒಟ್ಟು 700 ನಾಯಿಗಳು ಇರಬಹುದು ಎಂದು ಅಂದಾಜಿಸಲಾಗಿದೆ.

ಈಗಾಗಲೇ ಶಾಲಾ ಆವರಣ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆ, ಕ್ರೀಡಾಂಗಣ, ಬಸ್‌ ನಿಲ್ದಾಣ ಸೇರಿದಂತೆ ಸಾರ್ವಜನಿಕರು ಸಂಚರಿಸುವ ರಸ್ತೆಯಲ್ಲಿ ನಾಯಿಗಳು ಕಚ್ಚಿ ರೇಬೀಸ್‌ ರೋಗ ಬಂದು ಮೃತಪಟ್ಟ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಈ ಕ್ರಮಕ್ಕೆ ಮುಂದಾಗಿದ್ದಾರೆ.

ಘನತ್ಯಾಜ್ಯ ನಿರ್ವಹಣೆ ಘಟಕದಲ್ಲಿ ನಾಯಿ ನಿರಾಶ್ರಿತ ಕೇಂದ್ರದಲ್ಲಿ, ಒಂದೊಂದು ನಾಯಿಯನ್ನು ಪ್ರತ್ಯೇಕವಾಗಿ ಇಡಲು ಕೇನಾಲ್‌ಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಅವುಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ, ರೇಬೀಸ್‌ ಚಿಕಿತ್ಸೆ ನೀಡುವ ಜತೆಗೆ ಅವುಗಳ ಆರೋಗ್ಯದಲ್ಲಿ ಏರುಪೇರು ಉಂಟಾಗದಂತೆ ಪಶು ಇಲಾಖೆಯ ವರೆಗೂ ನಿರಂತರವಾಗಿ ಅವುಗಳ ಮೇಲೆ ನಿಗಾ ಇಡಬೇಕಿದೆ. ಪುರಸಭೆ ವತಿಯಿಂದ ನಿತ್ಯ ನಾಯಿಗಳಿಗೆ ಅವುಗಳ ಗಾತ್ರಕ್ಕೆ ಅನುಗುಣವಾಗಿ ಆಹಾರ, ನೀರು ಹಾಕಿ ಪಾಲನೆ, ಪೋಷಣೆ ಮಾಡಬೇಕಿದೆ.

ಪಟ್ಟಣದಲ್ಲಿರುವ ಎಲ್ಲ ನಾಯಿಗಳನ್ನು ಸೆರೆ ಹಿಡಿದ ನಂತರದಲ್ಲಿ ಮತ್ತೆ ಬೇರೆ ಕಡೆಯಿಂದ ನಾಯಿಗಳು ಬರದಂತೆ ಆಯಾ ಇಲಾಖೆಯಲ್ಲಿ ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗಿದೆ.

ಸಾರ್ವಜನಿಕರು ಬೀದಿ ನಾಯಿಗಳಿಗೆ ಕಂಡಲ್ಲಿ ಆಹಾರ ಹಾಕುವಂತಿಲ್ಲ, ಅವುಗಳಿಗೆ ನಿರ್ಜನ ಪ್ರದೇಶದ 10 ಕಡೆಗಳಲ್ಲಿ ಆಹಾರ ಹಾಕಲು ಗುರುತು ಮಾಡಲಾಗಿದೆ. ಬೀದಿ ನಾಯಿಗಳ ಕುರಿತಂತೆ ಸಾರ್ವಜನಿಕರು ಸಲಹೆ ಹಾಗೂ ದೂರುಗಳನ್ನು 9110608170 ಈ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು ಎಂದು ಪುರಸಭೆ ಪೌರಾಯುಕ್ತ ಎಚ್‌.ಇಮಾಮ್‌ ಸಾಹೇಬ್‌ ತಿಳಿಸಿದ್ದಾರೆ.