ಅಡ್ಡಾದಿಡ್ಡಿ ಪಾರ್ಕಿಂಗ್‌, ಸಂಚಾರಕ್ಕೆ ಸರ್ಕಸ್‌!

| Published : Jul 08 2024, 12:31 AM IST

ಸಾರಾಂಶ

ಪಾರ್ಕಿಂಗ್ ಸ್ಥಳ ಎಂದು ಗುರುತು ಮಾಡಿರುವ ಜಾಗದಲ್ಲಿ ಅಂಗಡಿಗಳನ್ನು ಹಾಕಿಕೊಂಡಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

ಶಿರಸಿ: ವಾಣಿಜ್ಯ ನಗರ ಎಂದು ಕರೆಯಲ್ಪಡುವ ಶಿರಸಿಯ ಸದಾ ಜನಜಂಗುಳಿ ಇರುವ ನಗರದ ಪ್ರಮುಖ ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.

ಪಾರ್ಕಿಂಗ್ ಸ್ಥಳ ಎಂದು ಗುರುತು ಮಾಡಿರುವ ಜಾಗದಲ್ಲಿ ಅಂಗಡಿಗಳನ್ನು ಹಾಕಿಕೊಂಡಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.ನಗರದ ಅಶ್ವಿನಿ ಸರ್ಕಲ್, ಸಾಮ್ರಾಟ್ ಹೋಟೆಲ್ ಎದುರು, ಮರಾಠಿಕೊಪ್ಪ ಕ್ರಾಸ್, ಭಗತ್‌ಸಿಂಗ್ ರಸ್ತೆ, ಎಪಿಎಂಸಿ ಕ್ರಾಸ್, ಸಿಪಿ ಬಜಾರ್, ನಟರಾಜ ರಸ್ತೆ, ದೇವಿಕೆರೆ, ಹೊಸಪೇಟೆ ರಸ್ತೆ, ಶಿವಾಜಿ ಚೌಕ್, ಮಾರಿಕಾಂಬಾ ದೇವಾಲಯದ ಬನವಾಸಿ ರಸ್ತೆ, ಕೋಟೆಕೆರೆ ಸೇರಿದಂತೆ ಇನ್ನಿತರ ಜನದಟ್ಟಣೆಯಿಂದ ಕೂಡಿರುವ ರಸ್ತೆಯ ಅಕ್ಕಕ್ಕಗಳಲ್ಲಿ ಬೇಕಾಬಿಟ್ಟಿಯಾಗಿ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಇದರಿಂದ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆಯುಂಟಾಗಿ ವಾಹನ ಸವಾರರು ಸುಸ್ತಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪೊಲೀಸರು ಸಹ ನಗರ ಭಾಗಗಳಲ್ಲಿ ವಾಹನ ಸಂಚಾರ, ರಸ್ತೆ ನಿಯಮಗಳನ್ನು ಪಾಲಿಸದವರಿಗೆ ಎಚ್ಚರಿಕೆಯನ್ನು ಸಹ ನೀಡುತ್ತಿಲ್ಲ. ಪೊಲೀಸರ ನಿರ್ಲಕ್ಷ್ಯದಿಂದ ರಸ್ತೆ ಪಕ್ಕದಲ್ಲಿ ಬೇಕಾಬಿಟ್ಟಿಯಾಗಿ ಕಾರು, ಬೈಕ್‌ಗಳನ್ನು ಪಾರ್ಕಿಂಗ್ ಮಾಡುತ್ತಿದ್ದಾರೆ. ಪೊಲೀಸರು ವಾರದಲ್ಲಿ ಒಂದೆರಡು ದಿನ ಕಾರ್ಯಾಚರಣೆ ನಡೆಸಿ, ನೋ ಪಾಕಿಂಗ್ ಸ್ಥಳದಲ್ಲಿ ವಾಹನ ನಿಲುಗಡೆ ಮಾಡಿದ ಸವಾರರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಿದರೆ, ಸುಗಮ ಸಂಚಾರಕ್ಕೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಪೊಲೀಸರು ಕ್ರಮ ಕೈಗೊಂಡು ಶಿರಸಿ ನಗರದಲ್ಲಿ ವಾಹನಗಳ ಸುಗಮ ಸಂಚಾರ ವ್ಯವಸ್ಥೆಗೆ ಅನುಕೂಲ ಕಲ್ಪಿಸಬೇಕೆಂದು ಪ್ರಜ್ಞಾವಂತ ನಾಗರಿಕರು ಆಗ್ರಹಿಸುತ್ತಿದ್ದಾರೆ.ನಗರದ ಸಾಮ್ರಾಟ್‌ ಎದುರಿನ ಎರಡೂ ಬದಿಯಲ್ಲಿ ರಸ್ತೆಯ ಮೇಲೆ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಸಾಕಷ್ಟು ಸಮಸ್ಯೆ ಎದುರುತ್ತಿದ್ದಾರೆ. ರಸ್ತೆಯು ಅರ್ಧಂಬರ್ಧವಾಗಿರುವುದರಿಂದ ಅಪಘಾತ ವಲಯವಾಗಿಯೂ ಮಾರ್ಪಟ್ಟಿದೆ.ಜಿಲ್ಲಾಧಿಕಾರಿಗಳು ೨೦೨೧ರಲ್ಲಿ ಶಿರಸಿ ನಗರದಲ್ಲಿ ವಾಹನಗಳ ದಟ್ಟಣೆ ನಿವಾರಿಸಿ, ಸುಗಮ ಸಂಚಾರ ಮತ್ತು ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ದ್ವಿಚಕ್ರ ವಾಹನಗಳಿಗೆ ಮತ್ತು ಕಾರುಗಳ ನಿಲುಗಡೆಗೆ ಪ್ರತ್ಯೇಕ ಸ್ಥಳ ನಿಗದಿಗೊಳಿಸಿದ್ದರು. ಅವುಗಳನ್ನು ಬೀದಿ ಬದಿಯ ವ್ಯಾಪಾರಿಗಳು ಅತಿಕ್ರಮಣಗೊಂಡಿರುವುದರಿಂದ ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡುವ ಸ್ಥಿತಿಯುಂಟಾಗಿದೆ. ನೂತನವಾಗಿ ಆಗಮಿಸಿದ ಜಿಲ್ಲಾಧಿಕಾರಿ ವ್ಯವಸ್ಥೆ ಸರಿದಾರಿಗೆ ತರುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸಬೇಕಾಗಿದೆ.ವ್ಯರ್ಥವಾದ ಒನ್ ವೇ: ವಾಹನ ದಟ್ಟಣ ನಿಯಂತ್ರಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ಸಿಪಿ ಬಜಾರ್ ಮತ್ತು ನಟರಾಜ ರಸ್ತೆಯಲ್ಲಿ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಆದರೆ ದ್ವಿಚಕ್ರ ವಾಹನ ಸವಾರರು ಏಕಮುಖ ಸಂಚಾರ ವ್ಯವಸ್ಥೆಯನ್ನು ಗಾಳಿಗೆ ತೂರಿ, ಎರಡೂ ಬದಿಯಿಂದ ಆಗಮಿಸುತ್ತಿದ್ದಾರೆ. ಇದರಿಂದ ಅಪಘಾತ ಉಂಟಾಗುತ್ತಿದೆ. ಅಲ್ಲದೇ, ಪಾದಚಾರಿಗಳು ನಡೆದಾಡಲು ತೀವ್ರ ತೊಂದರೆ ಉಂಟಾಗುತ್ತಿದೆ ಎಂದು ಪಾದಚಾರಿಗಳು ಆರೋಪಿಸುತ್ತಿದ್ದಾರೆ.ಫುಟ್‌ಪಾತ್ ಅತಿಕ್ರಮಣ: ನಗರದಲ್ಲಿ ಕೆಲವೇ ಕೆಲವು ರಸ್ತೆಗಳಿಗೆ ಫುಟ್‌ಪಾತ್‌ಗಳಿದ್ದರೂ ಅವುಗಳೆಲ್ಲವೂ ಬೀದಿಬದಿ ವ್ಯಾಪಾರಿಗಳ ಪಾಲಾಗಿದೆ. ಇದರಿಂದ ಪಾದಚಾರಿಗಳು ರಸ್ತೆಯ ಮೇಲೆ ಓಡಾಡುವಂತಾಗಿದ್ದು, ಫುಟ್‌ಪಾತ್ ಹೆಸರಿಗೆ ಮಾತ್ರ ಮಾಡಲಾಗಿದೆ. ಇದ್ದು ಜನರ ಉಪಯೋಗಕ್ಕೆ ಇಲ್ಲದಂತಾಗಿದೆ. ನಗರದ ಹೃದಯಭಾಗ ಮತ್ತು ಸದಾ ಜನಜಂಗುಳಿಯಿಂದ ಕೂಡಿರುವ ಸಿಪಿ ಬಜಾರ್ ಮತ್ತು ನಟರಾಜ ರಸ್ತೆಯಲ್ಲಿ ಭಾರೀ ವಾಹನಗಳ ಓಡಾಟ ಸ್ಥಗಿತಗೊಳಿಸಲಾಗಿದೆ. ಅಂಗಡಿ- ಮುಂಗಟ್ಟುಗಳ ವ್ಯಾಪಾರದ ವಸ್ತುಗಳನ್ನು ತಲುಪಿಸುವ ಲಾರಿಗಳಿಗೆ ಬೆಳಗ್ಗೆ ೬ ಗಂಟೆಯಿಂದ ೧೧ ಗಂಟೆ ಮತ್ತು ೨ ಗಂಟೆಯಿಂದ ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಈ ಸಮಯವನ್ನು ಹೊರತಾಗಿ ಸಾಮಗ್ರಿಗಳನ್ನು ಹೊತ್ತ ಲಾರಿಯನ್ನು ಸಿಪಿ ಬಜಾರ್ ಮತ್ತು ನಟರಾಜ ರಸ್ತೆಯಲ್ಲಿ ನಿಲ್ಲಿಸಿ, ಇಳಿಸುವುದರಿಂದ ವಾಹನಗಳ ಓಡಾಟಕ್ಕೆ ತೀವ್ರ ಸಮಸ್ಯೆಯಾಗುತ್ತಿದೆ.