ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರನಗರದ ಬೀದಿ ಬದಿ ವ್ಯಾಪಾರಿಗಳನ್ನು ಜಾಗೃತಗೊಳಿಸಲು ನಗರಸಭೆ ಬಳಿ ಬೀದಿ ನಾಟಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ನಗರಸಭೆ, ಜಿಲ್ಲಾ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಡೇ ನಲ್ಮ್ ಯೋಜನೆ, ಸಮಷ್ಠಿ ಸಮಗ್ರ ಅಭಿವೃದ್ಧಿ ಟ್ರಸ್ಟ್ ಇವರ ಸಹಯೋಗದಲ್ಲಿ ಬೀದಿ ಬದಿ ವ್ಯಾಪಾರಿಗಳನ್ನು ಜಾಗೃತಗೊಳಿಸುವ ಉದ್ದೇಶದಿಂದ ಬೀದಿ ನಾಟಕ ಕಾರ್ಯಕ್ರಮವನ್ನು ಬುಧವಾರ ಆಯೋಜಿಸಲಾಗಿತ್ತು.ನಗರಸಭೆ ಪೌರಾಯುಕ್ತ ರಾಮದಾಸ್ ಕಾರ್ಯಕ್ರಮವನ್ನು ತಮಟೆ ಬಡಿಯುವ ಮೂಲಕ ಉದ್ಘಾಟಿಸಿ ಮಾತನಾಡಿ, ದೇಶ ಕೋವಿಡ್‌ನಿಂದ ಸಂಕಷ್ಟಕ್ಕೆ ಒಳಗಾಗಿದ್ದ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಬೀದಿ ಬದಿ ವ್ಯಾಪಾರಿಗಳಿಗಾಗಿ ಪಿಎಂ ಸ್ವನಿಧಿ ಯೋಜನೆಯಡಿ ಮೊದಲನೆ ಹಂತದಲ್ಲಿ ೧೦ ಸಾವಿರ, ಎರಡನೇ ಹಂತದಲ್ಲಿ ೨೦ ಸಾವಿರ, ೩ನೇ ಹಂತದಲ್ಲಿ ೫೦ ಸಾವಿರ ಹೀಗೆ ಮೂರು ಹಂತಗಳಲ್ಲಿ ಸಾಲ ಸೌಲಭ್ಯದ ವ್ಯವಸ್ಥೆ ಮಾಡಲಾಗಿತ್ತು. ಈ ಯೋಜನೆಯನ್ನು ಪಡೆದುಕೊಳ್ಳುವ ಮೂಲಕ ಬೀದಿ ಬದಿ ವ್ಯಾಪಾರಿಗಳು ಸಂಕಷ್ಟದಿಂದ ಹೊರಬರಲು ಸಾಕಷ್ಟು ಅನುಕೂಲವಾಯಿತು ಎಂದರು.
ಹಾಗೆಯೇ ಬೀದಿ ಬದಿ ವ್ಯಾಪಾರಿಗಳ ಸುರಕ್ಷತೆಗಾಗಿ ಹಲವು ಯೋಜನೆಗಳನ್ನು ರೂಪಿಸಲಾಗಿದ್ದು, ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ, ಪ್ರಧಾನಮಂತ್ರಿ ಜನ್‌ಧನ್ ಯೋಜನೆ, ಲೇಬರ್ ಕಾರ್ಡ್, ಪ್ರಧಾನಮಂತ್ರಿ ಜನನಿ ಸುರಕ್ಷಾ ಯೋಜನೆ, ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ, ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆ, ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆ, ಪ್ರಧಾನಮಂತ್ರಿ ಮಾತೃವಂದನಾ ಯೋಜನೆಗಳಿವೆ. ಈ ಯೋಜನೆಗಳು ಬೀದಿ ಬದಿ ವ್ಯಾಪಾರಿಗಳಿಗಷ್ಟೇ ಅಲ್ಲದೇ, ಆಟೋ ಚಾಲಕರು, ಹಾಲು ವಿತರಕರು, ಪೇಪರ್ ವಿತರಿಕರಿಗೂ ಕೂಡಾ ಈ ಯೋಜನೆ ಅನ್ವಯವಾಗಲಿದೆ ಈ ನಿಟ್ಟಿನಲ್ಲಿ ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.ಬೇಸಿಗೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಜನರ ಆರೋಗ್ಯದ ದೃಷ್ಠಿಯಿಂದ ಬೀದಿ ಬದಿ ವ್ಯಾಪಾರಿಗಳು ತಮ್ಮ ವ್ಯಾಪಾರದ ಸ್ಥಳದಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ತಾಜಾ ಹಣ್ಣು, ತರಕಾರಿಗಳನ್ನು ಮಾರಾಟ ಮಾಡಬೇಕು. ಜೊತೆಗೆ ಪ್ಲಾಸ್ಟಿಕ್ ಬಳಕೆ ನಿಷೇಧಿಸಬೇಕು, ಅದರ ಬದಲಾಗಿ ಅಡಿಕೆ ತಟ್ಟೆ, ಪೇಪರ್ ಪ್ಲೇಟ್‌ಗಳನ್ನು ಬಳಕೆ ಮಾಡುವ ಮೂಲಕ ನಗರದ ಸ್ವಚ್ಛತೆಗೆ ಕೈಜೋಡಿಸಬೇಕು ಎಂದು ತಿಳಿಸಿದರು.
ನಗರಸಭೆ ಯೋಜನಾಧಿಕಾರಿ ವೆಂಕಟನಾಯಕ್ ಮಾತನಾಡಿ, ಬೀದಿ ಬದಿ ವ್ಯಾಪಾರಸ್ಥರು ಜಾಗೃತರಾಗಿ ಸರ್ಕಾರದಿಂದ ದೊರೆಯುವ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಉತ್ತಮ ಜೀವನ ನಿರ್ವಹಣೆ ಮಾಡಬೇಕು ಎಂದರು.ನಗರದ ಮಾರಿಗುಡಿ ಮುಂಭಾಗ, ಮಹದೇವಪ್ಪ ಸರ್ಕಲ್, ಎಸ್ ಬಿಎಂ ಬ್ಯಾಂಕ್ ಸರ್ಕಲ್ ಸೇರಿದಂತೆ ಇನ್ನು ಹಲವೆಡೆ ಬೀದಿ ಬದಿ ವ್ಯಾಪಾರಿಗಳನ್ನು ಜಾಗೃತಿಗೊಳಿಸುವ ಉದ್ದೇಶದಿಂದ ನಾಟಕ ಆಯೋಜನೆ ಮಾಡಲಾಗಿತ್ತು ಎಂದರು.
ಕಾರ್ಯಕ್ರಮದಲ್ಲಿ ಅಭಿಯಾನದ ವ್ಯವಸ್ಥಾಪಕ ಅಮ್ಜದ್ ಪಾಷಾ, ಡಾ.ಪುಟ್ಟಸ್ವಾಮಿ, ಚಾಮರಾಜನಗರ ಜಿಲ್ಲಾ ನೆಟ್‌ಬಾಲ್ ಅಸೋಸಿಯೇಷನ್‌ನ ಅಧ್ಯಕ್ಷ ವಿ.ಶ್ರೀನಿವಾಸ ಪ್ರಸಾದ್, ನಗರಸಭೆ ಸಿಆರ್‌ಪಿಗಳಾದ ನರ್ಗೀಸ್ ಬಾನು, ರೂಪಾ, ಸಿಬ್ಬಂದಿ ಜ್ಯೋತಿ, ನಿವೇದಿತಾ, ನವೀನ್, ಜಾಗೃತಿ ಕಲಾತಂಡದ ಮಹದೇವಸ್ವಾಮಿ ಬಾಗಳಿ, ಕೆ.ಆರ್.ನಗರ ಕುಮಾರ್, ಕರಿಯಪ್ಪ, ಭಾಗ್ಯ, ಮಹದೇವು, ಜನ್ನೂರು ಶಿವಕುಮಾರ್, ಸಮಷ್ಠಿ ಸಮಗ್ರ ಅಭಿವೃದ್ಧಿ ಟ್ರಸ್ಟ್‌ನ ಕಾರ್ಯ ನಿರ್ವಾಹಕ ಗಂಗಾಧರ್ ಇನ್ನಿತರರಿದ್ದರು.