ಸಾರಾಂಶ
ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಪಟ್ಟಣ ವ್ಯಾಪ್ತಿಯಲ್ಲಿ ಸಿಸಿಎಂಎಸ್ ಅಡಿ ಅಳವಡಿಸಿರುವ ಬೀದಿ ದೀಪಗಳು ಪ್ರಖರ ಬೆಳಕು ನೀಡದಿರುವ ಬಗ್ಗೆ ಹಾಗೂ ಬೀದಿ ದೀಪ ಅಳವಡಿಸಿರುವ ಕಂಪನಿ ಕೆಟ್ಟುಹೋದ ಬೀದಿ ದೀಪಗಳ ಬದಲಿಗೆ ಬೇರೆ ದೀಪಗಳನ್ನು ಹಾಕದಿರುವ ವಿಚಾರ ಪಟ್ಟಣ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಗ್ರಾಸವಾಯಿತು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯೆ ರೀನಾ ಮೋಹನ್ ಪಟ್ಟಣದ ವಾರ್ಡ್ ನಂ 5 ರಲ್ಲಿ ಬೀದಿ ದೀಪಗಳು ಸಮರ್ಪಕ ಬೆಳಕು ನೀಡುತ್ತಿಲ್ಲ ಎಂದು ದೂರಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತಶೆಟ್ಟಿ ಮಾತನಾಡಿ, ಸಿಸಿಎಂಎಸ್ ಯೋಜನೆಯಡಿ ಜಿಲ್ಲೆಯ ಬೇರೆ ತಾಲೂಕುಗಳಲ್ಲಿ ಅಳವಡಿಸಿರುವ ಬೀದಿ ದೀಪಗಳು ಪ್ರಖರ ಬೆಳಕು ನೀಡದಿರುವುದರಿಂದ ಪಟ್ಟಣದ ವ್ಯಾಪ್ತಿಯಲ್ಲಿ ಇದನ್ನು ಅಳವಡಿಸಲು ವಿರೋಧಿಸಲಾಗಿತ್ತು. ಆದರೂ ಜಿಲ್ಲಾಧಿಕಾರಿಗಳು ಖಾಸಗಿ ಕಂಪನಿಗೆ ಕಾರ್ಯಾದೇಶ ನೀಡಿದರು. ಹಾಗಾಗಿ ಜಿಲ್ಲಾಧಿಕಾ ರಿಗಳೇ ಇದಕ್ಕೆ ಸಂಪೂರ್ಣ ಹೊಣೆಗಾರರು. ಜಿಲ್ಲಾಧಿಕಾರಿ ಪಟ್ಟಣ ಪಂಚಾಯಿತಿಗೆ ಬಂದು ಸಭೆ ನಡೆಸಿ ಸಮಸ್ಯೆ ಬಗೆ ಹರಿಸಬೇಕು ಎಂದು ಸದಸ್ಯರು ಆಗ್ರಹಿಸಿದರು.ಬೀದಿ ದೀಪ ಸಮರ್ಪಕ ಬೆಳಕು ನೀಡದಿರುವ ಹಾಗೂ ಇತರೆ ಬೀದಿ ದೀಪದ ಸಮಸ್ಯೆ ಬಗ್ಗೆ ಇಂಧನ ಸಚಿವರಿಗೆ ಪತ್ರ ಬರೆಯಲು ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.ಪಟ್ಟಣ ವ್ಯಾಪ್ತಿಯ ಸಿಎ ನಿವೇಶನಗಳಲ್ಲಿ ಒಂದು ನಿವೇಶನವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಸಮುದಾಯ ಭವನ ನಿರ್ಮಾಣಕ್ಕೆ ಕಾಯ್ದಿರಿಸಲು ಸಭೆ ಸರ್ವಾನುಮತದಿಂದ ಒಪ್ಪಿಗೆ ನೀಡಿತು.
ಕಳೆದ ಕೆಲವು ದಿನಗಳಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯವಾಗುತ್ತಿರುವುದರಿಂದ ಕುಡಿಯುವ ನೀರು ಸರಬರಾಜಿಗೆ ಸಮಸ್ಯೆ ಯಾಗಿದೆ. ಅಲ್ಲದೆ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ಸಮೀಪಿಸುತ್ತಿರುವುದರಿಂದ ವಿದ್ಯಾರ್ಥಿಗಳಗೂ ಸಮಸ್ಯೆಯಾಗಲಿದೆ. ಹಾಗಾಗಿ ವಿದ್ಯುತ್ ಸಮರ್ಪಕ ಪೂರೈಕೆಗೆ ಮೆಸ್ಕಾಂ ಇಲಾಖೆಗೆ ಪತ್ರ ಬರೆಯಲು ಸಭೆ ನಿರ್ಧರಿಸಿತು.ಶಾಲಾ, ಕಾಲೇಜು ಮಕ್ಕಳು ರಸ್ತೆ ದಾಟಲು ಅನುಕೂಲವಾಗುವಂತೆ ಪಟ್ಟಣ ಪಂಚಾಯಿತಿ ಸಮೀಪದ ಮುಖ್ಯರಸ್ತೆ ಹಾಗೂ ಜೀವನ್ ಜ್ಯೋತಿ ಶಾಲೆ ಮುಂಭಾಗದ ರಸ್ತೆಯಲ್ಲಿ ಝಿಬ್ರಾ ಕ್ರಾಸಿಂಗ್ ಮಾಡಿಸಬೇಕೆಂದು ಸದಸ್ಯ ಜುಬೇದಾ ಹೇಳಿದರೆ, ಬಸ್ ನಿಲ್ದಾಣದ ಬಳಿಯ ರಸ್ತೆ ವಿಭಜಕ ಕತ್ತಲೆಯಲ್ಲಿ ಕಾಣುವುದಿಲ್ಲ. ಇದಕ್ಕೆ ಬಿಳಿ ಬಣ್ಣ ಬಳಿಯುವಂತೆ ನಾಮನಿರ್ದೇಶನ ಸದಸ್ಯ ರಜಿ ಸಲಹೆ ನೀಡಿದರು.
ನೀರಿನ ಸುಂಕ, ಆಸ್ತಿತೆರಿಗೆ ವಸೂಲಿಗೆ ಕಾಮಧೇನು ಸ್ವಸಹಾಯ ಸಂಘ ಮುಂದೆ ಬಂದಿದ್ದು 7 ಮತ್ತು 8ನೇ ವಾರ್ಡ್ ನ್ನು ಪ್ರಾಯೋಗಿಕವಾಗಿ ನೀಡಲು ಸಭೆ ತೀರ್ಮಾನಿಸಿತು.ಉದ್ಯಾನದ ದೀಪಕ್ಕೆ ಹಾಗೂ ಬೀದಿ ದೀಪದ ಕಂಬಕ್ಕೆ ವಿದ್ಯುತ್ ಸಂಪರ್ಕ ಕೊಡುವಂತೆ ಸಭೆ ಸೂಚಿಸಿತು. 2025–26ನೇ ಸಾಲಿನ ವಾರ್ಷಿಕ ಬಾಬ್ತುಗಳ ಬಹಿರಂಗ ಹರಾಜುಗಳಾದ ಸಂತೆ ಶುಲ್ಕ, ಬಸ್ ನಿಲ್ದಾಣದ ಸುಂಕ ಸಭೆಯಲ್ಲಿ ಸ್ಥಿರೀಕರಿಸ ಲಾಯಿತು. ಮೀನು ಮಾರುಕಟ್ಟೆ ಮಳಿಗೆಗಳಿಗೆ ಹೊಸದಾಗಿ ವಿದ್ಯುತ್ ಮೀಟರ್ ಅಳವಡಿಸಲು ತೀರ್ಮಾನಿಸಲಾಯಿತು.
ಸಭೆ ಅಧ್ಯಕ್ಷತೆಯನ್ನು ಪಪಂ ಅಧ್ಯಕ್ಷೆ ಸುರಯ್ಯಭಾನು ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷೆ ಉಮಾಕೇಶವ್, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತಶೆಟ್ಟಿ, ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್ ಇದ್ದರು.