ಭರವಸೆ ಹಿನ್ನೆಲೆ ಬೀದಿ ಬದಿ ವ್ಯಾಪಾರಿಗಳ ಹೋರಾಟ ಮೊಟಕು

| Published : Dec 28 2024, 01:00 AM IST

ಸಾರಾಂಶ

ಏಕಾಏಕಿ ಬೀದಿ ಬದಿ ವ್ಯಾಪಾರಸ್ಥರನ್ನು ಒಕ್ಕಲೇಬ್ಬಿಸಿದ ಪರಿಣಾಮ ಬೀದಿ ಬದಿ ವ್ಯಾಪಾರವನ್ನು ನೆಚ್ಚಿಕೊಂಡಿರುವ ನೂರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ

ಗಜೇಂದ್ರಗಡ: ಪಟ್ಟಣದ ಜೋಡು ರಸ್ತೆ ಸೇರಿದಂತೆ ಪ್ರಮುಖ ವೃತ್ತಗಳ ಬೀದಿ ಬದಿಯಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿ ನಡೆಸುತ್ತಿದ್ದ ಅನಿರ್ದಿಷಾವಧಿ ಹೋರಾಟ ಶುಕ್ರವಾರ ಉಪ ತಹಸೀಲ್ದಾರ್ ಹಾಗೂ ಪುರಸಭೆ ಅಧಿಕಾರಿಗಳ ಸಂಧಾನ ಯಶಸ್ವಿಯಾದ ಹಿನ್ನೆಲೆ ಪ್ರತಿಭಟನಾಕಾರರು ಹೋರಾಟ ಮೊಟಕುಗೊಳಿಸಿದರು.

ಪಟ್ಟಣದಲ್ಲಿ ಏಕಾಏಕಿ ಬೀದಿ ಬದಿ ವ್ಯಾಪಾರಸ್ಥರನ್ನು ಒಕ್ಕಲೇಬ್ಬಿಸಿದ ಪರಿಣಾಮ ಬೀದಿ ಬದಿ ವ್ಯಾಪಾರವನ್ನು ನೆಚ್ಚಿಕೊಂಡಿರುವ ನೂರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಹೀಗಾಗಿ ಹಿಂದಿನಂತೆ ಪಟ್ಟಣದ ಜೋಡು ರಸ್ತೆ ಸೇರಿ ಪ್ರಮುಖ ವೃತ್ತ ಕುಷ್ಟಗಿ, ರೋಣ ಮತ್ತು ಬಸ್ ನಿಲ್ದಾಣದ ರಸ್ತೆಯ ಬೀದಿ ಬದಿಯಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಬೇಕು ಹಾಗೂ ಇತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗುರುವಾರ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ಬೀದಿ ಬದಿಯ ವ್ಯಾಪಾರಿಗಳ ಸಂಘ ಸಿಐಟಿಯು ಸಂಯೋಜಿತ ತಾಲೂಕು ಸಮಿತಿ ನೇತೃತ್ವದಲ್ಲಿ ಪಟ್ಟಣದ ತಹಸೀಲ್ದಾರ್ ಕಚೇರಿಯ ಆವರಣದಲ್ಲಿ ಅನಿರ್ದಿಷ್ಟಾವಧಿ ಸತ್ಯಾಗ್ರಹ ಕೈಗೊಂಡಿದ್ದರು.

ಅಧಿಕಾರಿಗಳಿಂದ ಸೂಕ್ತ ಭರವಸೆ ಸಿಗದ ಹಿನ್ನೆಲೆ ಪ್ರತಿಭಟನಾಕಾರರು ಗುರುವಾರ ರಾತ್ರಿಯು ಧರಣಿ ಸತ್ಯಗ್ರಾಹ ಮುಂದುವರೆಸಿದ್ದರು. ಹೀಗಾಗಿ ಶುಕ್ರವಾರ ಮಧ್ಯಾಹ್ನ ಉಪ ತಹಸೀಲ್ದಾರ್, ಪುರಸಭೆ ಹಾಗೂ ಪೊಲೀಸ್ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಬೀದಿ ಬದಿ ವ್ಯಾಪಾರಸ್ಥರ ಅಹವಾಲು ಆಲಿಸಿದ ಬಳಿಕ ಬೀದಿ ಬದಿ ವ್ಯಾಪಾರಿಗಳಿಗೆ ಯಾವುದೇ ತೊಂದರೆ ನೀಡುವದಿಲ್ಲ. ಆದರೆ ನಮಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಸಮಯಾವಕಾಶ ಬೇಕು ಎಂದು ಮೌಖಿಕವಾಗಿ ಅಧಿಕಾರಿಗಳು ತಿಳಿಸಿ ಸಮಸ್ಯೆ ಪರಿಹಾರದ ಬಗ್ಗೆ ಭರವಸೆ ನೀಡಿದ ಹಿನ್ನೆಲೆ ಪ್ರತಿಭಟನಾಕಾರರು ೮ ದಿನದೊಳಗೆ ಸಭೆ ಕರೆದು ಬೀದಿ ಬದಿ ವ್ಯಾಪಾರಸ್ಥರ ಬೇಡಿಕೆ ಈಡೇರಿಸಲು ಅಧಿಕಾರಿಗಳು ಮುಂದಾಗದಿದ್ದರೆ ಮತ್ತೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ವೇಳೆ ಉಪ ತಹಸೀಲ್ದಾರ್ ಪಿ.ವಿ. ಶೀಂಗ್ರಿ, ಪುರಸಭೆ ಶಿವು ಇಲಾಳ ಸೇರಿದಂತೆ ಪೀರು ರಾಠೋಡ, ದಾವಲ್‌ ತಾಳಿಕೋಟಿ, ಬಾಲು ರಾಠೋಡ, ಶಾಮಿದ್ ದಿಂಡವಾಡ ಸೇರಿ ೩೦ಕ್ಕೂ ಅಧಿಕ ಬೀದಿ ಬದಿ ವ್ಯಾಪಾರಿಗಳು ಇದ್ದರು.