ಸಾರಾಂಶ
ಗಂಗಾವತಿ ನಗರಸಭೆ ಪೌರಾಯುಕ್ತ ವಿರೂಪಾಕ್ಷಮೂರ್ತಿ ಹೇಳಿಕೆ, ಮಾರುಗಟ್ಟೆಗೆ ಅಗತ್ಯ ಸೌಲಭ್ಯಕನ್ನಡಪ್ರಭ ವಾರ್ತೆ ಗಂಗಾವತಿ
ನಗರದ ಗುಂಡಮ್ಮ ಕ್ಯಾಂಪಿನಲ್ಲಿರುವ ಸಿಟಿ ಮಾರುಕಟ್ಟೆಗೆ ಈಗಾಗಲೇ ನಿರ್ಧರಿಸಿದಂತೆ ನಗರದ ತರಕಾರಿ, ಹಣ್ಣು ಮತ್ತಿತರ ಬೀದಿ ಬದಿ ವ್ಯಾಪಾರಸ್ಥರನ್ನು ಶೀಘ್ರ ಸ್ಥಳಾಂತರಿಸಲಾಗುವುದು ಎಂದು ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ ಹೇಳಿದರು.ನಗರಸಭೆಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಕಳೆದ ಕೆಲವು ದಿನಗಳ ಹಿಂದೆ ಶಾಸಕರು ಸಿಟಿ ಮಾರುಕಟ್ಟೆ ಪರಿಶೀಲನೆ ಮಾಡಿ, ಫೆ. 14ರಂದು ವ್ಯಾಪಾರಸ್ಥರನ್ನು ಸ್ಥಳಾಂತರಿಸುವಂತೆ ಸೂಚನೆ ನೀಡಿದ್ದರು. ಆದರೆ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರಿಗೆ ಅಗತ್ಯ ಸೌಲಭ್ಯ ಒದಗಿಸಬೇಕಿದೆ. ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದರಿಂದ ಕೆಲವು ಕಿಡಿಗೇಡಿಗಳು ಅಲ್ಲಿನ ಲೈಟ್ಸ್, ಶೆಟರ್ಸ್ ಮತ್ತಿತರ ಸಾಮಗ್ರಿಗಳನ್ನು ಹಾಳು ಮಾಡಿದ್ದಾರೆ. ಇದರಿಂದ ವ್ಯಾಪಾರಸ್ಥರನ್ನು ಸ್ಥಳಾಂತರ ಮಾಡಿದರೂ ಅವರಿಗೆ ಕೆಲವು ಸಮಸ್ಯೆಗಳಾಗುತ್ತವೆ. ಇದನ್ನು ಮನಗಂಡು ಮತ್ತು ಶಾಸಕರು ಕೂಡಾ ವ್ಯಾಪಾರಸ್ಥರಿಗೆ ಎಲ್ಲ ಸೌಲಭ್ಯ ಕಲ್ಪಿಸಿದ ನಂತರವೇ ಸ್ಥಳಾಂತರಿಸಬೇಕು ಎಂದು ಸೂಚನೆ ನೀಡಿ ಕೆಕೆಆರ್‌ಡಿ ಯೋಜನೆಯಲ್ಲಿ ₹1 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ಈ ಅನುದಾನದಿಂದ ಮಾರುಕಟ್ಟೆಯಲ್ಲಿ ವಿದ್ಯುತ್, ಕುಡಿಯುವ ನೀರು, ರಕ್ಷಣೆಗೆ ಹದ್ದುಬಸ್ತು ಮಾಡಲಾಗುತ್ತಿದೆ. ಹೀಗಾಗಿ ಕೆಲವು ದಿನ ಸ್ಥಳಾಂತರ ಕಾರ್ಯವನ್ನು ಮುಂದೂಡಲಾಗಿದೆ. ಈಗಾಗಲೇ ನಮ್ಮ ನಗರಸಭೆಯ ಪೌರ ಕಾರ್ಮಿಕರು ಮಾರುಕಟ್ಟೆಯನ್ನು ಸಂಪೂರ್ಣ ಸ್ವಚ್ಛಗೊಳಿಸಿದ್ದಾರೆ. ಆದರೆ ಕೆಲವು ದುರಸ್ತಿ ಕಾರ್ಯ ಕೈಗೊಳ್ಳುತ್ತಿರುವುದರಿಂದ ಕೆಲವು ದಿನ ಮಾತ್ರ ವಿಳಂಬವಾಗುತ್ತಿದೆ. ನಗರದಲ್ಲಿ ಸಂಚಾರ ಸಮಸ್ಯೆಯನ್ನು ಪರಿಹರಿಸುವಂತೆ ನ್ಯಾಯಾಲಯ ನಮಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ನಗರದ ರಸ್ತೆ ಬದಿ ಇರುವ ಎಲ್ಲ ಬೀದಿ ಬದಿ ವ್ಯಾಪಾರಸ್ಥರನ್ನು ಸ್ಥಳಾಂತರಿಸಲಾಗುತ್ತಿದ್ದು, ವ್ಯಾಪಾರಸ್ಥರು ಸಾರ್ವಜನಿಕರ ಹಿತದೃಷ್ಟಿಯಿಂದ ಸಹಕಾರ ನೀಡಬೇಕು ಎಂದು ಪೌರಾಯುಕ್ತರು ಕೋರಿದರು.
ಅಧ್ಯಕ್ಷ ಮೌಲಾಸಾಬ್ ಮಾತನಾಡಿ, ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ವಿಶೇಷ ಮುತುವರ್ಜಿ ವಹಿಸಿ ಮಾರುಕಟ್ಟೆಗೆ ಸ್ಥಳಾಂತರಿಸುವಂತೆ ಸೂಚನೆ ನೀಡಿದ್ದಾರೆ. ದುರಸ್ತಿ ಕಾರ್ಯ ಮುಗಿದ ನಂತರ ಸ್ಥಳಾಂತರಗೊಳಿಸುವ ನಿರ್ಧಾರ ಕೈಗೊಂಡಿದ್ದೇವೆ. ಸಾರ್ವಜನಿಕರು, ವ್ಯಾಪಾರಸ್ಥರು ಸಹಕಾರ ನೀಡಬೇಕು ಎಂದು ಕೋರಿದರು.ಉಪಾಧ್ಯಕ್ಷೆ ಪಾರ್ವತಮ್ಮ ದೊಡ್ಡಮನಿ, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಚೌಡ್ಕಿ ಇದ್ದರು.