ಪ್ರಧಾನಿ ಮೋದಿ ಶಕ್ತಿ ಬಲಪಡಿಸಿ: ರಾಜಾ ಅಮರೇಶ್ವರ ನಾಯಕ

| Published : Apr 18 2024, 02:20 AM IST

ಸಾರಾಂಶ

ಕಳೆದ ಹತ್ತು ವರ್ಷದಿಂದ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ರಾಯಚೂರ ಲೋಕಸಭೆ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಹಾಪುರ

ಕಳೆದ ಹತ್ತು ವರ್ಷದಿಂದ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡ್ಯೊಯುವ ಕಾರ್ಯಮಾಡುತ್ತಿದ್ದು, ಇದು ದೇಶವೇ ಮೆಚ್ಚುವಂತ ಕೆಲಸವಾಗಿದೆ. ಬಿಜೆಪಿಗೆ ಮತ ನೀಡುವ ಮೂಲಕ ನರೇಂದ್ರ ಮೋದಿ ಅವರ ಶಕ್ತಿ ಬಲಪಡಿಸುವಂತೆ ಎಂದು ರಾಯಚೂರ ಲೋಕಸಭೆ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ತಿಳಿಸಿದರು.ತಾಲೂಕಿನ ಸಗರ ಗ್ರಾಮದಲ್ಲಿ ಬಿಜೆಪಿ ಲೋಕಸಭೆ ಚುನಾವಣೆ ಪ್ರಚಾರ ಸಭೆಗೆ ಚಾಲನೆ ನೀಡಿ ಮಾತನಾಡಿದರು. ದೇಶದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಲವು ದಿಟ್ಟ ಕ್ರಮಗಳನ್ನು ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ಪರಿಣಾಮಕಾರಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ವಿಶ್ವಮೆಚ್ಚಿದ ನಾಯಕ ನರೇಂದ್ರ ಮೋದಿಯವರಿಗೆ ಶಕ್ತಿ ತುಂಬುವ ಮೂಲಕ ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಿದರು. ದೇಶದ ಆರ್ಥಿಕ ಸ್ಥಿತಿಯನ್ನು 5ನೇ ಸ್ಥಾನಕ್ಕೆ ತಂದಿರುವ ಮೋದಿ ಅವರು ಮುಂಬರುವ ದಿನಗಳಲ್ಲಿ 3ನೇ ಸ್ಥಾನಕ್ಕೆ ತರುವ ಭರವಸೆ ನೀಡಿದ್ದಾರೆ. ದೇಶದಲ್ಲಿ ಹೆದ್ದಾರಿಗಳು, ವಿಮಾನ ನಿಲ್ದಾಣಗಳು, ಯಾದಗಿರಿ ಸೇರಿದಂತೆ ಉಳಿದಡೆ ಮೆಡಿಕಲ್ ಕಾಲೇಜುಗಳ ನಿರ್ಮಾಣ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಹಿಂದುಳಿದ ಜಿಲ್ಲೆಗಳೆಂಬ ಕಾರಣಕ್ಕೆ ಯಾದಗಿರಿ ಮತ್ತು ರಾಯಚೂರ ಜಿಲ್ಲೆಗೆ ಸರ್ಕಾರಿ ಮಾದರಿ ಪದವಿ ಕಾಲೇಜು ನಿರ್ಮಾಣ ಮಾಡುವ ಮೂಲಕ ಈ ಭಾಗದ ಉನ್ನತ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ ಎಂದರು.ಶಹಾಪುರದಲ್ಲಿ ಸುಮಾರು 12 ಕೋಟಿ ರು.ಗಳ ಅನುದಾನದಲ್ಲಿ ಕಟ್ಟಡ ನಿರ್ಮಾಣಗೊಂಡಿದೆ. ಅದೇ ರೀತಿ ಶಹಾಪುರ ಹೊರ ಭಾಗದಿಂದ ಹೆದ್ದಾರಿ ಮಾರ್ಗ ನಿರ್ಮಾಣ ಕಾರ್ಯ ಸರ್ವೇ ಪೂರ್ಣಗೊಂಡು ಕೆಲಸ ಆರಂಭವಾಗಿದೆ. ಈ ನಿಟ್ಟಿನಲ್ಲಿ ಮತದಾರರು ಮತ್ತೊಮ್ಮೆ ಅವಕಾಶ ಮಾಡಿಕೊಟ್ಟಲ್ಲಿ ಇನ್ನು ಸಾಕಷ್ಟು ದೇಶ ಅಭಿವೃದ್ಧಿ ಕಾರ್ಯಗಳನ್ನು ಕಾರ್ಯಗತಗೊಳಿಸುವ ಕನಸನ್ನು ಮೋದಿಜಿ ಹೊಂದಿದ್ದಾರೆ. ಸುಮಾರು 33 ಜನಪರ ಯೋಜನೆಗಳನ್ನು ಅವರು ಜಾರಿಗೊಳಿಸಿದ್ದಾರೆ. ಇಡಿ ಜೀವನವನ್ನು ದೇಶಕ್ಕಾಗಿ ಮುಡಿಪಾಗಿಟ್ಟಿದ್ದಾರೆ. ಅವರ ಕೈ ಬಲ ಪಡಿಸುವ ನಿಟ್ಟಿನಲ್ಲಿ ನಾವು ನೀವೆಲ್ಲರೂ ಬಿಜೆಪಿಗೆ ಮತ ನೀಡುವ ಮೂಲಕ ದೇಶದ ಸುಭದ್ರತೆಗೆ ಸಹಕರಿಸೋಣ ಎಂದರು.ಬಿಜೆಪಿ ಜಿಲ್ಲಾಧ್ಯಕ್ಷ ಅಮೀನ್ ರೆಡ್ಡಿ ಯಾಳಗಿ ಮಾತನಾಡಿ, ದೇಶದಲ್ಲಿ ಭಯೋತ್ಪಾದನೆ ನಿರ್ಮೂಲನೆಗೆ ಮೋದಿ ಅವರ ಕೊಡುಗೆ ಅಪಾರ. ಸುಭೀಕ್ಷೆ, ಸುಭದ್ರತೆ ನಿರ್ಭೀತಿಯಿಂದ ನಡೆಯಬೇಕಾದರೆ ಮೋದಿಯವರಂತ ನಾಯಕರಿಂದ ಮಾತ್ರ ಸಾಧ್ಯ ಎಂದರು. ಎಂಎಲ್ಸಿ ಬಿ.ಜಿ. ಪಾಟೀಲ್, ಡಾ. ಚಂದ್ರಶೇಖರ ಸುಬೇದಾರ, ಬಸವರಾಜ ವಿಭೂತಿಹಳ್ಳಿ, ಗುರು ಕಾಮಾ, ಮಲ್ಲಿಕಾರ್ಜುನ ಕಂದಕೂರ, ರಾಜೂಗೌಡ ಉಕ್ಕಿನಾಳ ಇತರರಿದ್ದರು.ಮೂರನೇ ಬಾರಿಗೆ ಮೋದಿ ಅವರು ಪ್ರಧಾನಿಯಾಗಬೇಕೆಂಬುದು ಪ್ರತಿಯೊಬ್ಬರ ಇಚ್ಛೆಯಾಗಿದೆ. ರಾಷ್ಟ್ರಕ್ಕೆ ಅಂತಹ ಶಕ್ತಿಯುತ, ಅಭಿವೃದ್ಧಿ ಪಥದತ್ತ ನಡೆಯುವ ಪ್ರಧಾನಿಯಿದ್ದಲ್ಲಿ ದೇಶ ಸಮೃದ್ಧವಾಗಿ ಮುನ್ನಡೆಯಲಿದೆ. ಅದಕ್ಕೆ ಪ್ರತಿಯೊಬ್ಬರ ಆಶೀರ್ವಾದ ಅಗತ್ಯವಿದೆ.

- ರಾಜಾ ಅಮರೇಶ್ವರ ನಾಯಕ, ಬಿಜೆಪಿ ಅಭ್ಯರ್ಥಿ, ರಾಯಚೂರ ಲೋಕಸಭೆ ಕ್ಷೇತ್ರ.