ಸಾರಾಂಶ
ಎಸ್‌ಸಿಐ ಕಮ್ಮರಡಿ ನೂತನ ಘಟಕವನ್ನು ರಾಷ್ಟ್ರಾಧ್ಯಕ್ಷ ಸೀನಿಯರ್ ಚಿತ್ರ ಕುಮಾರ್ ಉದ್ಘಾಟಿಸಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ವಯಸ್ಸು ಒಂದು ಮಾನದಂಡವಲ್ಲ ಅದು ಕೇವಲ ಎಣಿಕೆಗೆ ಮಾತ್ರ. ಜವಾಬ್ದಾರಿಯುತ ಮತ್ತು ಸಕ್ರಿಯ ನಾಗರಿಕತ್ವ ಎಸ್‌ಸಿಐ ಸಂಸ್ಥೆಯ ಮುಖ್ಯ ಧ್ಯೇಯವಾಗಿದೆ ಎಂದು ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸಂಸ್ಥೆಯ ರಾಷ್ಟ್ರಾಧ್ಯಕ್ಷ ಸೀನಿಯರ್ ಚಿತ್ರ ಕುಮಾರ್ ಹೇಳಿದರು. ತೀರ್ಥಹಳ್ಳಿಯ ಕಮ್ಮರಡಿಯ ವಿಶ್ವತೀರ್ಥ ಪ್ರೌಢಶಾಲೆಯ ವಿಶ್ವತೀರ್ಥ ಸಭಾಂಗಣದಲ್ಲಿ ಎಸ್‌ಸಿಐ ಪ್ರಾಯೋಜಕತ್ವದಲ್ಲಿ ಸ್ಥಾಪಿಸಲ್ಪಟ್ಟ ಎಸ್‌ಸಿಐ ಕಮ್ಮರಡಿ ನೂತನ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇದರ ಎಲ್ಲ ಸದಸ್ಯರು ಹಲವು ಉದ್ಯೋಗ, ಸ್ವಂತ ದುಡಿಮೆ ಹಾಗೂ ಇತರೆ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ ಅನುಭವವನ್ನು ಹೊಂದಿದ್ದಾರೆ. ಈ ಸಂಸ್ಥೆಯಿಂದ ಪರಸ್ಪರ ಬಾಂಧವ್ಯ ಬೆಳೆಯುತ್ತದೆ ಎಂದರು.ಎಸ್‌ಬಿಐ ನಿವೃತ್ತ ಮಹಾ ಪ್ರಬಂಧಕ ಎಂ.ಆರ್.ಜಯೇಶ್ ಮಾಕಾರು ಮಾತನಾಡಿ, ಕಳೆದ 25 ವರ್ಷಗಳಲ್ಲಿ ಕಮ್ಮರಡಿ ಸುತ್ತಮುತ್ತ ಜೆಸಿಐ ಇದರ ಪ್ರಭಾವ ಸಾಕಷ್ಟಿತ್ತು. ಈ ಪರಿಸರದ ಸುತ್ತಮುತ್ತ ಅನೇಕ ಗಣ್ಯರು ರಾಜ್ಯಮಟ್ಟ ಹಾಗೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
ಎಸ್‌ಸಿಐ ತೀರ್ಥಹಳ್ಳಿ ಅಧ್ಯಕ್ಷ ಎಚ್.ಎನ್.ಸೂರ್ಯ ನಾರಾಯಣ ಮಾತನಾಡಿ, ಕಮ್ಮರಡಿಯಲ್ಲಿ ಸಂಸ್ಥೆಯನ್ನು ಸ್ಥಾಪಿಸುವುದು ನಮ್ಮ ಉದ್ದೇಶವಾಗಿತ್ತು ಅದು ಪ್ರತಿಭಾವಂತರನ್ನೊಳಗೊಂಡ ಒಂದು ತಂಡವನ್ನು ಕಟ್ಟಿರುವ ನೂತನ ಅಧ್ಯಕ್ಷರು ಸಕ್ರಿಯವಾಗಿ ಮುಂದುವರಿಸುತ್ತಾರೆ ಎಂದು ತಿಳಿಸಿದರು.ಇದೇ ಸಂದರ್ಭ ನೂತನ ಅಧ್ಯಕ್ಷ ಯು.ಎಸ್.ಶಿವಪ್ಪ ಇವರಿಗೆ ಅಧಿಕಾರ ಹಸ್ತಾಂತರ ಮಾಡಿದರು.
ಹಲವು ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡಿದ ನನ್ನನ್ನು ಈ ದಿನ ಎಸ್‌ಸಿಐ ಕಮ್ಮರಡಿ ಘಟಕದ ಅಧ್ಯಕ್ಷರಾಗಿ ಮಾಡಿ ಹೆಚ್ಚಿನ ಜವಾಬ್ದಾರಿಯನ್ನು ನೀಡಿದ್ದೀರಿ. ನಾನು ಮನಃಪೂರ್ವಕವಾಗಿ ಅಧ್ಯಕ್ಷ ಪದವಿಯನ್ನು ನಿರ್ವಹಿಸುತ್ತೇನೆ ಎಂದು ಯು.ಎಸ್.ಶಿವಪ್ಪ ತಿಳಿಸಿದರು.ಈ ವೇಳೆ ನೂತನ ಸದಸ್ಯರಿಗೆ ಪುಷ್ಪಾ ಶೆಟ್ಟಿ ಪ್ರಮಾಣ ವಚನವನ್ನು ಬೋಧಿಸಿದರು. ಸುರೇಖಾ ಮುರಳೀಧರ್, ಕೆ.ಪಿ.ಎಸ್ ಸ್ವಾಮಿ, ಸರ್ಜಾ ಕೃಷ್ಣಮೂರ್ತಿ, ಮಂಜುನಾಥ್ , ರಾಘವೇಂದ್ರ ಆಚಾರ್ಯ, ಸುಬ್ರಮಣ್ಯ , ಜಗದೀಶ್ , ಎನ್.ಟಿ.ಸುರೇಶ್ ಮತ್ತಿತರರು ಇದ್ದರು.