ಕ್ಷೇತ್ರದಲ್ಲಿ ಪಕ್ಷವನ್ನು ಬಲಪಡಿಸುವ ಉದ್ದೇಶದಿಂದ ಕಾರವಾರ ಮತ್ತು ಅಂಕೋಲಾ ಬ್ಲಾಕ್ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಮುಂಬರುವ ಜನವರಿ ವೇಳೆಗೆ ಎಲ್ಲ ಮೋರ್ಚಾಗಳನ್ನು ಪೂರ್ಣ ಪ್ರಮಾಣದಲ್ಲಿ ರಚಿಸಲಾಗುವುದು.

ಕಾರವಾರ: 2028ರ ವಿಧಾನಸಭೆ ಚುನಾವಣೆಯಲ್ಲಿ ಕಾರವಾರ- ಅಂಕೋಲಾ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದು, ಕ್ಷೇತ್ರದಲ್ಲಿ ಪಕ್ಷ ಸಂಘಟನೆಯನ್ನು ಬೂತ್ ಮಟ್ಟದಿಂದ ಬಲಪಡಿಸಲು ಕಾರ್ಯಾರಂಭ ಮಾಡಿರುವುದಾಗಿ ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಆನಂದ ಅಸ್ನೋಟಿಕರ್ ಹೇಳಿದರು. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರ ಬೆಂಬಲದೊಂದಿಗೆ ರಾಜಕೀಯದಲ್ಲಿ ಸಕ್ರಿಯವಾಗಿ ಮುಂದುವರಿಯುತ್ತಿರುವುದಾಗಿ ತಿಳಿಸಿದರು.

ಕ್ಷೇತ್ರದಲ್ಲಿ ಪಕ್ಷವನ್ನು ಬಲಪಡಿಸುವ ಉದ್ದೇಶದಿಂದ ಕಾರವಾರ ಮತ್ತು ಅಂಕೋಲಾ ಬ್ಲಾಕ್ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಮುಂಬರುವ ಜನವರಿ ವೇಳೆಗೆ ಎಲ್ಲ ಮೋರ್ಚಾಗಳನ್ನು ಪೂರ್ಣ ಪ್ರಮಾಣದಲ್ಲಿ ರಚಿಸಲಾಗುವುದು. ಹಾಲಕ್ಕಿ ಸಮುದಾಯವು ಜೆಡಿಎಸ್‌ನ ಪ್ರಮುಖ ಬುನಾದಿಯಾಗಿದ್ದು, ಎಲ್ಲ ಸಮುದಾಯಗಳ ಬೆಂಬಲವೂ ದೊರೆಯುವ ವಿಶ್ವಾಸವಿದೆ ಎಂದು ಅಸ್ನೋಟಿಕರ್ ಹೇಳಿದರು. ಅಂಕೋಲಾದ ಶಾಂತಾದುರ್ಗಾ ದೇವಸ್ಥಾನದ ಎದುರು ನ. 3ರಂದು ಜೆಡಿಎಸ್‌ನ ನೂತನ ಕಾರ್ಯಾಲಯ ಉದ್ಘಾಟನೆಯಾಗಲಿದೆ. ಕಾರ್ಯಕ್ರಮದಲ್ಲಿ ಜೆಡಿಎಸ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ರಾಮೇಗೌಡ ಸೇರಿದಂತೆ ಪ್ರಮುಖ ನಾಯಕಿಯರು ಪಾಲ್ಗೊಳ್ಳಲಿದ್ದಾರೆ. ಅದೇ ದಿನ ಮಧ್ಯಾಹ್ನ ಕಾರವಾರದ ಅಜ್ವಿ ಓಶಿಯನ್ ಹಾಲ್‌ನಲ್ಲಿ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆ ನಡೆಯಲಿದೆ ಎಂದರು. ಫೆ. 11ರಂದು ತಮ್ಮ ಜನ್ಮದಿನದ ಅಂಗವಾಗಿ ಆಯೋಜಿಸುವ ಬೃಹತ್ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. 2023ರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ತಾಯಿಯವರ ತೀವ್ರ ಅನಾರೋಗ್ಯದ ಕಾರಣ ಸ್ಪರ್ಧೆಯಿಂದ ಹಿಂದೆ ಸರಿದಿದ್ದೆ. ನಮ್ಮ ಪಕ್ಷದ ಅಭ್ಯರ್ಥಿ ದುರ್ಬಲವಾಗಿದ್ದರಿಂದ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದೆ ಎಂದು ಅವರು ವಿವರಿಸಿದರು.

ಪ್ರಸ್ತುತ ಬಿಜೆಪಿ- ಜೆಡಿಎಸ್ ಮೈತ್ರಿ ಇರುವುದರಿಂದ ಟಿಕೆಟ್ ಕುರಿತು ಪಕ್ಷದ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ತಿಳಿಸಿದರು.

ಈ ಹಿಂದೆ ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಕಾಂಗ್ರೆಸ್‌ಗೆ ಬನ್ನಿ ಎಂದು ಆಹ್ವಾನ ನೀಡಿದ್ದರು. ಆದರೆ ನಾನು ಹೋಗಲಿಲ್ಲ. ಜೆಡಿಎಸ್‌ನಲ್ಲೆ ಉಳಿದು ಕಾರವಾರ- ಅಂಕೋಲಾ ಕ್ಷೇತ್ರವನ್ನು ಅಭಿವೃದ್ಧಿಯ ಕೇಂದ್ರವನ್ನಾಗಿಸುವುದು ತಮ್ಮ ಗುರಿಯಾಗಿದೆ ಎಂದು ಅಸ್ನೋಟಿಕರ್ ಹೇಳಿದರು.

ರಾಜ್ಯದಲ್ಲಿ ಜೆಡಿಎಸ್ ಬಿಜೆಪಿ ನಡುವೆ ಮೈತ್ರಿಯಿದ್ದು, ಎರಡೂ ಪಕ್ಷಗಳು ಒಂದಾಗಿ ಮುನ್ನಡೆಯುತ್ತಿವೆ. ಪಕ್ಷ ಯಾರಪ್ಪನ ಸೊತ್ತಲ್ಲ. ಹಾಗಾಗಿ ಪಕ್ಷದ ವ್ಯವಸ್ಥೆಯಡಿ ಒಟ್ಟಾಗಿ ಕೆಲಸ ಮಾಡುವುದಾಗಿ ತಿಳಿಸಿದ ಆನಂದ್ ಅಸ್ನೋಟಿಕರ್, ಟಿಕೆಟ್ ಹಂಚಿಕೆ ಹಾಗೂ ಚುನಾವಣೆಯ ನಿರ್ಧಾರಗಳು ರಾಜ್ಯ ಮಟ್ಟದಲ್ಲಿ ತೀರ್ಮಾನವಾಗುವುದಿಲ್ಲ. ಎರಡೂ ಪಕ್ಷಗಳ ಕೇಂದ್ರ ನಾಯಕರು ಕುಳಿತು ನಿರ್ಧಾರ ತೆಗೆದುಕೊಳ್ಳುತ್ತಾರೆ. ಅದಕ್ಕೆ ತಾವು ಬದ್ಧರಾಗಿರುವುದಾಗಿ ಸ್ಪಷ್ಟಪಡಿಸಿದ ಅವರು, ಕ್ಷೇತ್ರದಲ್ಲಿ ಜೆಡಿಎಸ್ ಪರ ಜನರ ಒಲವು ಇರುವ ಹಿನ್ನೆಲೆ ತಮಗೇ ಮೈತ್ರಿ ಟಿಕೆಟ್ ಸಿಗುವ ನಿರೀಕ್ಷೆಯಿದೆ ಎಂದರು.

ಮೋಹಿನಿ ನಾಯ್ಕ, ಉದಯ ಕಳಸ್, ಸಂದೀಪ ಭಂಡಾರಿ, ವಿಜು ಕಾಂಬ್ಳೆ, ಪೂರ್ಣಿಮಾ ಮಾಹೇಕರ್, ಕೃಷ್ಣ ತಾಂಡೇಲ್, ಮಿಥುನ್ ರೇವಣಕರ್ ಸೇರಿದಂತೆ ಪಕ್ಷದ ವಿವಿಧ ಸ್ತರದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.ಸೈಲ್ ವಿರುದ್ಧ ವಾಗ್ದಾಳಿ

ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರಾಗಲು ಸೈಲ್ ಒಬ್ಬರೆ ಕಾರಣರಲ್ಲ. ನಾನೂ ಪ್ರಯತ್ನಿಸಿದ್ದೇನೆ. ಮಾಧ್ಯಮಗಳು, ವಿವಿಧ ಮುಖಂಡರು, ಸಾಮಾಜಿಕ ಜಾಲತಾಣ ಹೀಗೆ ಎಲ್ಲೆಡೆಯಿಂದ ಕೇಳಿಬಂದ ಕೂಗೂ ಕಾರಣವಾಗಿದೆ. ಸೈಲ್ ಜನರ ಸಂಪರ್ಕಕ್ಕೆ ಸಿಗುತ್ತಿಲ್ಲ. ಫೋನ್ ಕರೆಯನ್ನೂ ಸ್ವಿಕರಿಸುವುದಿಲ್ಲ ಎಂದು ಆನಂದ ಅಸ್ನೋಟಿಕರ್ ಅಸಮಾಧಾನ ವ್ಯಕ್ತಪಡಿಸಿದರು.