ಹೃದಯಾಘಾತ ಮತ್ತು ಹೃದಯ ಸ್ತಂಭನ ಎರಡೂ ವಿಭಿನ್ನ ಸ್ಥಿತಿಗಳಾಗಿವೆ. ಹೃದಯಾಘಾತವಾದರೆ ಮೊದಲ ಮೂರು ಗಂಟೆಗಳೊಳಗೆ ಆಸ್ಪತ್ರೆಗೆ ದಾಖಲಾದರೆ ಬದುಕುಳಿಯುವ ಸಾಧ್ಯತೆ ಹೆಚ್ಚು. ಹೃದಯ ಸ್ತಂಭನ ಸಂಭವಿಸಿದರೆ ತಕ್ಷಣ ಸಿಪಿಆರ್ ನೀಡುವುದು ಅತ್ಯಂತ ಮುಖ್ಯ.

ಕನ್ನಡಪ್ರಭ ವಾರ್ತೆ ಮೈಸೂರು

ಅತಿಯಾದ ವ್ಯಾಯಾಮ ಅಥವಾ ಕೇವಲ ಯೋಗ ಮಾಡದೇ ವಾರದಲ್ಲಿ ಕನಿಷ್ಠ ಐದು ದಿನ 40 ನಿಮಿಷಗಳ ಚುರುಕಿನ ನಡಿಗೆ, ಪ್ರತಿದಿನ ತಾಜಾ ಹಾಗೂ ಪೌಷ್ಟಿಕ ಆಹಾರ, 6 ರಿಂದ 8 ಗಂಟೆಗಳ ಗುಣಮಟ್ಟದ ನಿದ್ರೆ, ಮಾನಸಿಕ ಒತ್ತಡ ಸಮರ್ಪಕ ನಿರ್ವಹಣೆಯಿಂದ ಹೃದಯವನ್ನು ಆರೋಗ್ಯವಾಗಿಟ್ಟುಕೊಳ್ಳಬಹುದು ಎಂದು ಬೆಂಗಳೂರು ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಬಿ. ದಿನೇಶ್‌ ಹೇಳಿದರು.

ಬೆಂಗಳೂರಿನ ಆಯುಷ್ ಇಲಾಖೆ, ಮೈಸೂರಿನ ಸರಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಯೋಗದೊಂದಿಗೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಜಯದೇವ ಆಸ್ಪತ್ರೆಯ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಡಿಯೋ ಯೋಗ ಸಮ್ಮಿಟ್‌- 2026 ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿ, ಹೃದಯಾಘಾತ ಮತ್ತು ಹೃದಯ ಸ್ತಂಭನ ಎರಡೂ ವಿಭಿನ್ನ ಸ್ಥಿತಿಗಳಾಗಿವೆ. ಹೃದಯಾಘಾತವಾದರೆ ಮೊದಲ ಮೂರು ಗಂಟೆಗಳೊಳಗೆ ಆಸ್ಪತ್ರೆಗೆ ದಾಖಲಾದರೆ ಬದುಕುಳಿಯುವ ಸಾಧ್ಯತೆ ಹೆಚ್ಚು. ಹೃದಯ ಸ್ತಂಭನ ಸಂಭವಿಸಿದರೆ ತಕ್ಷಣ ಸಿಪಿಆರ್ ನೀಡುವುದು ಅತ್ಯಂತ ಮುಖ್ಯ. ಅಪಘಾತ ಅಥವಾ ತುರ್ತು ಪರಿಸ್ಥಿತಿಯಲ್ಲಿ ವೀಡಿಯೋ ಚಿತ್ರೀಕರಣ ಮಾಡುವ ಬದಲು ಸಿಪಿಆರ್ ಕಲಿತು ಜೀವ ಉಳಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.

ಜಯದೇವ ಆಸ್ಪತ್ರೆ ವಿಸ್ತರಣೆ:

ಜಯದೇವ ಸಂಸ್ಥೆ ತನ್ನ ಸೇವೆಯನ್ನು ವಿಸ್ತರಿಸುತ್ತಿದ್ದು, 2026ರ ಅಂತ್ಯದೊಳಗೆ ಸುಮಾರು ಒಂದು ಸಾವಿರ ಹಾಸಿಗೆಗಳ ಹೊಸ ಆಸ್ಪತ್ರೆ ಹಾಗೂ ವಿಸ್ತರಣೆ ಯೋಜನೆಗಳನ್ನು ಆರಂಭಿಸುವ ಗುರಿ ಹೊಂದಿದೆ ಎಂದು ಅವರು ತಿಳಿಸಿದರು.

ಈ ಸಾಲಿನ ಡಿಸೆಂಬರ್ ಅಂತ್ಯಕ್ಕೆ ಮೈಸೂರಿನಲ್ಲಿ 200 ಹಾಸಿಗೆಗಳ ಆಸ್ಪತ್ರೆ, ಬೆಂಗಳೂರಿನ ವಿಜಯನಗರ ಮತ್ತು ಶಿವಾಜಿನಗರದಲ್ಲಿ ಉಪಕೇಂದ್ರಗಳು ಹಾಗೂ ಹುಬ್ಬಳ್ಳಿಯಲ್ಲಿ 450 ಹಾಸಿಗೆಗಳ ಹೃದ್ರೋಗ ಆಸ್ಪತ್ರೆ ಸೇರಿದಂತೆ ಒಟ್ಟು 1 ಸಾವಿರ ಹಾಸಿಗಳ ಸೇವೆಯನ್ನು ಆರಂಭಿಸಲಾಗುವುದು ಎಂದರು.

ಕೃತಕ ಬುದ್ಧಿಮತ್ತೆ (ಎಐ) ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನದ ಪ್ರಯೋಜನಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು. ಜಯದೇವ ಸಂಸ್ಥೆ ಹಾಗೂ ಆಯುಷ್ ಇಲಾಖೆಯ ಸಹಯೋಗದಲ್ಲಿ ಹೃದಯ ವೈಫಲ್ಯ, ಹೃದಯಾಘಾತ ಮತ್ತು ಯೋಗದ ಪರಿಣಾಮ ಕುರಿತು ಹಲವು ಸಂಶೋಧನೆಗಳು ನಡೆಯುತ್ತಿದ್ದು, ಪ್ರಾಥಮಿಕ ಅಧ್ಯಯನಗಳ ಫಲಿತಾಂಶಗಳು ಆಶಾದಾಯಕವಾಗಿವೆ ಎಂದರು.

ಶ್ರೀ ಜಯದೇವ ಹೃದ್ರೋಗ ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ.ಕೆ.ಎಸ್‌. ಸದಾನಂದ, ಆಯುಷ್‌ ಇಲಾಖೆಯ ಉಪ ನಿರ್ದೇಶಕ ಡಾ.ವಿನಾಯಕ್, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿವೃತ್ತ ಸಲಹೆಗಾರ ಡಾ.ಎಂ.ಎ.ಬಾಲಸುಬ್ರಹ್ಮಣ್ಯಂ, ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಕೇಶವಮೂರ್ತಿ, ಕರ್ನಾಟಕ ಅಂಚೆ ವೃತ್ತದ ನಿರ್ದೇಶಕ ಸಂದೇಶ್‌ ಮಹದೇವಪ್ಪ, ಡಾ.ರಾಘವೇಂದ್ರರಾವ್, ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ.ಲಕ್ಷ್ಮೀನಾರಾಯಣ ಶೆಣೈ, ಡಾ.ಸಿ.ಜೆ. ದೇವರಾಜ್‌, ಡಾ.ಅಂಥೋಣಿ ಪಾಲ್‌ ರಾಜ್‌, ಡಾ,ಸಿ.ಎನ್‌ ರೇಣುಕಾ ಮತ್ತಿತರರು ಹಾಜರಿದ್ದರು.