ಚಿಕ್ಕಮಗಳೂರುಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಜಮೀನುಗಳ ಪರಭಾರೆ ನಿಷೇಧ (ಪಿಟಿಸಿಎಲ್) ಕಾಯ್ದೆಯಡಿ ದಾಖಲಾಗಿರುವ ಪ್ರಕರಣಗಳ ವಿಲೇವಾರಿಯಲ್ಲಿ ಅನಗತ್ಯ ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಡಾ. ಎಲ್.ಮೂರ್ತಿ ಎಚ್ಚರಿಸಿದರು.
ರಾಜ್ಯ ಅನುಸೂಚಿತ ಜಾತಿ-ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಎಲ್.ಮೂರ್ತಿ । ಎಸ್ಸಿ, ಎಸ್ಟಿ ಸಮುದಾಯದವರ ಅಹವಾಲು ಸ್ವೀಕಾರ ।
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಜಮೀನುಗಳ ಪರಭಾರೆ ನಿಷೇಧ (ಪಿಟಿಸಿಎಲ್) ಕಾಯ್ದೆಯಡಿ ದಾಖಲಾಗಿರುವ ಪ್ರಕರಣಗಳ ವಿಲೇವಾರಿಯಲ್ಲಿ ಅನಗತ್ಯ ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಡಾ. ಎಲ್.ಮೂರ್ತಿ ಎಚ್ಚರಿಸಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ಮಂಗಳವಾರ ಎಸ್ಸಿ, ಎಸ್ಟಿ ಸಮುದಾಯದವರ ಅಹವಾಲು ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅತ್ಯಂತ ಮಹತ್ವದ್ದಾದ ಪಿಟಿಸಿಎಲ್ ಕಾಯ್ದೆಯ ಆಶಯಕ್ಕೆ ಅನುಗುಣವಾಗಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದರು.ಸಾಗುವಳಿ ಚೀಟಿ ಅಥವಾ ಒಎಂ ರಿಜಿಸ್ಟರ್‌ನಲ್ಲಿ ಹೆಸರು ದಾಖಲಾಗಿದ್ದರೆ ಸಂಬಂಧಪಟ್ಟ ಜಮೀನು ಆ ವ್ಯಕ್ತಿಗೆ ಸೇರಲಿದೆ ಎಂದು ಸರ್ಕಾರ ಈಗಾಗಲೇ ಸ್ಪಷ್ಟವಾಗಿ ಆದೇಶಿಸಿದೆ. ಪಿಟಿಸಿಎಲ್ ಪ್ರಕರಣಗಳಲ್ಲಿ ತೀರ್ಮಾನ ಕೈಗೊಳ್ಳುವ ಅಧಿಕಾರ ಸಹಾಯಕ ಆಯುಕ್ತರಿಗಿದೆ. ತೀರ್ಪಿನ ಸಾಧಕ–ಬಾಧಕಗಳ ಮೇಲ್ಮನವಿ ವಿಚಾರಣೆ ನಡೆಸುವ ಅಧಿಕಾರ ಜಿಲ್ಲಾಧಿಕಾರಿಗಿದೆ.
ಆದರೆ, ಜಿಲ್ಲೆಯ ಹಲವು ಪ್ರಕರಣಗಳಲ್ಲಿ ತ್ವರಿತ ಆದೇಶ ನೀಡದೆ ತಿಂಗಳುಗಟ್ಟಲೆ ವಿಳಂಬ ಮಾಡಲಾಗುತ್ತಿದೆ ಎಂಬ ದೂರುಗಳು ಬಂದಿವೆ. ಇದರಿಂದ ಸಂಬಂಧಪಟ್ಟವರು ನ್ಯಾಯಾಲಯದ ಮೊರೆ ಹೋಗಿ, ಪ್ರಕರಣಗಳ ಮೇಲೆ ತಡೆಯಾಜ್ಞೆಗೆ ಅವಕಾಶವಾಗುತ್ತಿದೆ. ಇಂತಹ ನಿರ್ಲಕ್ಷ್ಯ ಧೋರಣೆ ಅನುಸರಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ನ್ಯಾಯಾಲಯಗಳ ಆದೇಶಗಳಿಗೆ ಗೌರವ ನೀಡುವ ಜತೆ ಪಿಟಿಸಿಎಲ್ ಕಾಯ್ದೆ ಸಮರ್ಪಕ ಅನುಷ್ಠಾನಗೊಳಿಸಬೇಕಿದೆ ಎಂದರು.ಹಕ್ಕುಪತ್ರ ನೀಡಲು ವಿಳಂಬ
ಜಿಲ್ಲೆಯಲ್ಲಿ ಹಕ್ಕುಪತ್ರ ವಿತರಣೆ ಸಂಬಂಧ ಹಲವು ದೂರುಗಳಿವೆ. ಅರ್ಜಿ ಸಲ್ಲಿಸಿದರೂ ಪರಿಗಣಿಸದೆ ವಿಳಂಬ ಮಾಡಲಾಗುತ್ತಿದೆ ಎಂಬ ಆರೋಪಗಳ ವಿಚಾರ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುವುದು ಎಂದರು.ಜಾತಿ ನಿಂದನೆ ಪ್ರಕರಣಗಳಿಗೆ ಕೌಂಟರ್ ಕೇಸ್ ಆರೋಪಜಿಲ್ಲೆಯಲ್ಲಿ ದಾಖಲಾಗುವ ಜಾತಿ ನಿಂದನೆ ಪ್ರಕರಣಗಳಿಗೆ ಪ್ರತಿಯಾಗಿ ಕೌಂಟರ್ ಕೇಸ್ ದಾಖಲಿಸಲಾಗುತ್ತಿದೆ ಎಂಬ ದೂರುಗಳು ಬಂದಿವೆ. ಇದರಿಂದ ಬಹುತೇಕ ಪ್ರಕರಣಗಳಲ್ಲಿ ಸಂಧಾನ ನಡೆದು ನೊಂದವರಿಗೆ ನ್ಯಾಯ ದೊರೆಯುತ್ತಿಲ್ಲ ಎಂಬ ಆರೋಪವಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಕ್ತ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಕೃಷಿ ಕಾರ್ಮಿಕರು ಹೆಚ್ಚಿರುವ ಪ್ರದೇಶಗಳಲ್ಲಿ ಪೋಕ್ಸೋ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಜನರು ಹಾಗೂ ಮಕ್ಕಳಿಗೆ ಶಿಕ್ಷಣ ಮತ್ತು ಅರಿವು ಮೂಡಿಸುವ ಕೆಲಸ ಮಾಡಲು ನಿರ್ದೇಶಿಸಲಾಗಿದೆ ಎಂದರು.ಎಸ್‌ಇಪಿ, ಟಿಎಸ್‌ಪಿ ಅನುದಾನ ಸಮರ್ಪಕ ಬಳಕೆಗೆ ಸೂಚನೆ
ಸರ್ಕಾರದ ಎಸ್‌ಇಪಿ ಮತ್ತು ಟಿಎಸ್‌ಪಿ ಅನುದಾನ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿದೆಯೇ ಎಂಬುದನ್ನು ಆಯೋಗ ಗಂಭೀರವಾಗಿ ಪರಿಶೀಲಿಸುತ್ತಿದೆ. ಲೋಪ ವೆಸಗಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ.ಜಿಲ್ಲೆಯಲ್ಲಿ ಈ ಅನುದಾನದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತಿದ್ದರೂ ಕೆಲವು ಕಡೆ ರಸ್ತೆ ಸೇರಿದಂತೆ ಮೂಲ ಸೌಕರ್ಯಗಳ ಕೊರತೆ ಇದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗುವುದು.
ಉತ್ತಮವಾಗಿ ಹಾಸ್ಟಲ್ ನಿರ್ವಹಿಸಬೇಕು. ವಿಶೇಷ ತರಗತಿ ನಡೆಸುವ ಶಿಕ್ಷಕರಿಗೆ ತಿಂಗಳಿಗೆ ₹3 ಸಾವಿರ ಗೌರವಧನ ನೀಡುವ ಕುರಿತು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಹೇಳಿದರು.382 ಪ್ರಕರಣ ವಿಲೇವಾರಿ:
ಆಯೋಗದಲ್ಲಿ ಈವರೆಗೆ ಒಟ್ಟು ದಾಖಲಾದ 4,358 ದೂರುಗಳನ್ನು ಪ್ರತಿ ಗುರುವಾರ-ಶುಕ್ರವಾರ ವಿಚಾರಣೆ ನಡೆಸಿ ವಿಲೇವಾರಿ ಮಾಡಲಾಗುತ್ತಿದೆ. ತಾವು ಅಧ್ಯಕ್ಷರಾದ ಬಳಿಕ 680 ಪ್ರಕರಣಗಳ ವಿಚಾರಣೆ ನಡೆಸಿ 382 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಬಾಕಿ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲಾಗುವುದು ಎಂದು ಭರವಸೆ ನೀಡಿದರು.ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಎಸ್ಸಿ, ಎಸ್ಟಿಗೆ ಸಂಬಂಧಿಸಿದ 7,928 ಪ್ರಕರಣಗಳ ವಿಚಾರಣೆ ಬಾಕಿ ಇವೆ. ಈ ಪ್ರಕರಣಗಳ ತ್ವರಿತ ವಿಲೇವಾರಿಗೆ ಕ್ರಮವಹಿಸಲು ಡಿಜಿ–ಐಜಿಪಿ ಹಾಗೂ ಡಿಜಿಪಿಗೆ ಸೂಚಿಸಲಾಗಿದೆ ಎಂದು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಆಯೋಗದ ಸದಸ್ಯರಾದ ದಿವಾಕರ್, ಸುನೀಲ್, ಗೀತಾ ಹಾಗೂ ಕಾರ್ಯದರ್ಶಿ ಶಿವರಾಮ್ ಉಪಸ್ಥಿತರಿದ್ದರು.-- ಬಾಕ್ಸ್---ಮೂರು ತಿಂಗಳಿಗೊಮ್ಮೆ ದೌರ್ಜನ್ಯ ತಡೆ ಸಮಿತಿ ಸಭೆ
ಪ್ರತಿ ತಾಲೂಕು ಮಟ್ಟದ ದೌರ್ಜನ್ಯ ತಡೆ ಸಮಿತಿಗಳು ಕಡ್ಡಾಯವಾಗಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ ವರದಿ ಸಲ್ಲಿಸು ವಂತೆ ನಿರ್ದೇಶಿಸಲಾಗುವುದು. ಎಸ್ಸಿ, ಎಸ್ಟಿ ಸಮುದಾಯದ ಸಮಸ್ಯೆ ನಿರ್ಲಕ್ಷಿಸದೆ ಗಂಭೀರವಾಗಿ ಪರಿಗಣಿಸಬೇಕು ಎಂದರು.-- ಬಾಕ್ಸ್ --
ಎಸ್ಸಿ,ಎಸ್ಟಿ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಶಿಫಾರಸ್ಸುಆಯೋಗ ಈಗಾಗಲೇ ಚಿಕ್ಕಮಗಳೂರು ಸೇರಿ 20 ಜಿಲ್ಲೆಯ ಸಭೆ ನಡೆಸಿದೆ. ಇನ್ನೆರಡು ಜಿಲ್ಲೆಗಳ ಸಭೆ ಪೂರ್ಣಗೊಂಡ ಬಳಿಕ ರಾಜ್ಯದ ಮೂರನೇ ಎರಡರಷ್ಟು ಜಿಲ್ಲೆಗಳ ಸಭೆ ಪೂರ್ಣಗೊಂಡಂತಾಗಲಿದೆ. ಆಗ ಜಿಲ್ಲಾವಾರು ಎಸ್ಸಿ, ಎಸ್ಟಿ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳನ್ನು ಸಮಗ್ರವಾಗಿ ದಾಖಲಿಸಿ, ಸಂಬಂಧಪಟ್ಟ ಇಲಾಖೆಗಳು ಕೈಗೊಳ್ಳಬೇಕಾದ ಪರಿಹಾರ ಕ್ರಮಗಳ ಕುರಿತು ಒಂದು ತಿಂಗಳೊಳಗೆ ಸರ್ಕಾರಕ್ಕೆ ಶಿಫಾರಸು ಸಲ್ಲಿಸಲಾಗುವುದು ಎಂದು ಡಾ. ಎಲ್.ಮೂರ್ತಿ ಹೇಳಿದರು.
--ಬಾಕ್ಸ್--ಹಾಸ್ಟಲ್ ಪರಿಶೀಲನೆಗೆ ನಾಲ್ವರ ಸಮಿತಿ
ಜಿಲ್ಲೆಯ ಹಾಸ್ಟಲ್‌ಗಳ ನಿರ್ವಹಣೆ, ಮೇಲ್ವಿಚಾರಣೆಗೆ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ನಾಲ್ವರು ಅಧಿಕಾರಿಗಳ ಸಮಿತಿ ರಚಿಸಲು ಸೂಚಿಸಲಾಗುವುದು. ಪ್ರತಿ ತಿಂಗಳು ಹಾಸ್ಟಲ್‌ಗಳಿಗೆ ಸಮಿತಿ ಭೇಟಿ ನೀಡಿ ಪರಿಶೀಲಿಸಬೇಕು ಎಂದು ನಿರ್ದೇಶನ ನೀಡಲಾಗುವುದು ಎಂದರು.-- ಬಾಕ್ಸ್--ಜಿಲ್ಲಾ ಮಟ್ಟದ ಪ್ರತ್ಯೇಕ ಆಯೋಗ ಅಗತ್ಯಜಮೀನಿನಲ್ಲಿ 20 ವರ್ಷಗಳಿಂದ ಅನುಭವದಲ್ಲಿದ್ದರೂ ಸಾಗುವಳಿ ಚೀಟಿ ನೀಡುತ್ತಿಲ್ಲ ಎಂಬ ದೂರುಗಳು ಬಂದಿವೆ. ಫಾರಂ 50, 53, 54 ಹಾಗೂ 57ರ ಅಡಿ ಅರ್ಜಿ ಸಲ್ಲಿಸಲು ಅವಕಾಶ ನೀಡದೆ ಸಾವಿರಾರು ಕುಟುಂಬಗಳು ತೊಂದರೆ ಅನುಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಪ್ರತ್ಯೇಕ ಜಿಲ್ಲಾ ಮಟ್ಟದ ಆಯೋಗ ಸ್ಥಾಪಿಸುವ ಅಗತ್ಯವಿದೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು ಎಂದರು.