ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್ ಸೂಚನೆ ನೀಡಿದ್ದಾರೆ.ಗರ್ಭಧಾರಣಾ ಮತ್ತು ಪ್ರಸವ ಪೂರ್ವ ಪತ್ತೆ ತಂತ್ರವಿಧಾನಗಳ (ಲಿಂಗ ಆಯ್ಕೆ ನಿಷೇಧ) ಅಧಿನಿಯಮ 1994, ನಿಯಮ 1996 (ಪಿಸಿ ಮತ್ತು ಪಿಎನ್‌ಡಿಟಿ) ಜಿಲ್ಲಾ ಸಲಹಾ ಸಮಿತಿ ಸಭೆಯು ಶನಿವಾರ ನಡೆಯಿತು. ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ರೇಡಿಯೋಲಾಜಿಸ್ಟ್ ಡಾ.ಎಂ.ಆನಂದ್, ಮಕ್ಕಳ ತಜ್ಞರಾದ ಡಾ.ಕುಶ್ವಂತ್ ಕೋಳಿಬೈಲು, ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯ ಗೌರಮ್ಮ ಮಾದಮ್ಮಯ್ಯ, ಒಡಿಪಿ ಸಂಸ್ಥೆಯ ಜಾಯ್ಸ್ ಮೆನೇಜಸ್, ಇತರರು ಪಾಲ್ಗೊಂಡು ಜಿಲ್ಲೆಯಲ್ಲಿನ ಹಲವು ಸ್ಕ್ಯಾನಿಂಗ್ ಕೇಂದ್ರಗಳ ಕಾರ್ಯ ಚಟುವಟಿಕೆ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು.ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಆನಂದ್ ಮಾತನಾಡಿ ಕುಶಾಲನಗರದ ಗಣೇಶ್ ಸ್ಕ್ಯಾನಿಂಗ್ ಸೆಂಟರ್‌ನ್ನು ಮುಟ್ಟುಗೋಲು ಮಾಡಲಾಗಿದ್ದು, ಕಾನೂನಿನಂತೆ ನಿಯಮಾನುಸಾರ ಕ್ರಮವಹಿಸಲಾಗುವುದು ಎಂದು ಸಭೆಯ ಗಮನಕ್ಕೆ ತಂದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ರೇಡಿಯೋಲಾಜಿಸ್ಟ್ ಡಾ.ಎಂ. ಆನಂದ್ ಅವರು, ವಿರಾಜಪೇಟೆಯ ಆತ್ರೇಯ ಆಸ್ಪತ್ರೆ ಸ್ಕ್ಯಾನಿಂಗ್ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹಲವು ನ್ಯೂನತೆಗಳು ಕಂಡುಬಂದಿದ್ದು, ಈ ಸಂಬಂಧ ಸರಿಪಡಿಸಿಕೊಳ್ಳುವಂತೆ ಹಲವು ಬಾರಿ ಮಾಹಿತಿ ನೀಡಲಾಗಿತ್ತು, ಆದರೆ ಆತ್ರೇಯ ಆಸ್ಪತ್ರೆ ಸ್ಕ್ಯಾನಿಂಗ್ ಕೇಂದ್ರದವರು ನ್ಯೂನತೆಗಳನ್ನು ಸರಿಪಡಿಸಿಕೊಳ್ಳದಿರುವುದು ಕಂಡುಬಂದಿದ್ದು, ಸಮಿತಿ ತೀರ್ಮಾನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಯ ಗಮನಕ್ಕೆ ತಂದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸಮಿತಿ ಸದಸ್ಯರು ನಿಯಮಾನುಸಾರ ಕಾನೂನಿನ ರೀತಿ ಕ್ರಮವಹಿಸುವಂತೆ ಸಲಹೆ ಮಾಡಿದರು. ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯ ಗೌರಮ್ಮ ಮಾದಮ್ಮಯ್ಯ ಅವರು ಪ್ರಸವ ಪೂರ್ವ ಲಿಂಗ ಪತ್ತೆ ಮಾಡುವುದೇ ಅಪರಾಧವಾಗಿದೆ. ಈ ಬಗ್ಗೆ ನಿಯಮಾನುಸಾರ ಕ್ರಮವಹಿಸುವುದು ಅತ್ಯಗತ್ಯ ಎಂದರು.ಗಂಡು ಮತ್ತು ಹೆಣ್ಣು ಸಮಾನಾಗಿದ್ದರೆ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಈ ರೀತಿ ಲಿಂಗಪತ್ತೆ ಮಾಡಿಕೊಂಡು ಹೋದರೆ ಸಮಾಜ ಯಾವ ದಿಕ್ಕಿನತ್ತ ಸಾಗುತ್ತಿದೆ ಎಂಬುದನ್ನು ತಿಳಿಸುತ್ತದೆ ಎಂದರು.
ಕುಶಾಲನಗರದ ಸ್ಕ್ಯಾನಿಂಗ್ ಕೇಂದ್ರದ ಪೋರ್ಟಬಲ್ ಸ್ಕ್ಯಾನಿಂಗ್ ಯಂತ್ರವನ್ನು ಹಿಂಪಡೆಯುವ ಬಗ್ಗೆ ಡಾ.ಆನಂದ್ ಅವರು ವಿಷಯ ಪ್ರಸ್ತಾಪಿಸಿ, ಸ್ಕ್ಯಾನಿಂಗ್ ಕೇಂದ್ರದಲ್ಲಿ ಅಗತ್ಯ ಸ್ಕ್ಯಾನಿಂಗ್ ದಾಖಲಾತಿಗಳನ್ನು ಜತನ ಮಾಡದಿರುವುದು ಕಂಡುಬಂದಿದೆ ಎಂದು ಸಮಿತಿ ಗಮನಕ್ಕೆ ಎಂದರು. ಈ ಸಂಬಂಧ ನಿಯಮಾನುಸಾರ ಕ್ರಮವಹಿಸುವಂತೆ ಸಮಿತಿ ಸದಸ್ಯರು ಸಲಹೆ ಮಾಡಿದರು.ಮಡಿಕೇರಿಯ ಜಿಲ್ಲಾಸ್ಪತ್ರೆಯ ಸ್ಕ್ಯಾನಿಂಗ್ ಕೇಂದ್ರಕ್ಕೆ ರಾಜ್ಯ ಹಾಗೂ ಜಿಲ್ಲಾ ತಪಾಸಣಾ ಮತ್ತು ಮೇಲ್ವಿಚಾರಣಾ ತಂಡ ಭೇಟಿ ನೀಡಿದ ಸಂದರ್ಭದಲ್ಲಿ ಹಲವು ನ್ಯೂನತೆಗಳು ಕಂಡುಬಂದಿದ್ದು, ಈ ಬಗ್ಗೆ ನೋಟಿಸ್ ನೀಡಲಾಗಿದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್ ಅವರು ಹೇಳಿದರು.
ಸಮಿತಿ ಸದಸ್ಯರು ಹಾಗೂ ಮಕ್ಕಳ ತಜ್ಞರಾದ ಕುಶ್ವಂತ್ ಕೋಲಿಬೈಲು, ಓಡಿಪಿ ಸಂಸ್ಥೆಯ ಜಾಯ್ಸ್ ಮೆನೇಜಸ್ ಇತರರು ಹಲವು ವಿಷಯಗಳ ಕುರಿತು ಪ್ರಸ್ತಾಪಿಸಿದರು.