ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲೆಯಲ್ಲಿ ಗ್ಯಾಸ್ ರೀಫಿಲಿಂಗ್ ದಂಧೆಯು ಅಕ್ರಮವಾಗಿ ಜರುಗುತ್ತಿದ್ದು, ಕಾನೂನು ಬಾಹಿರವಾಗಿ ಈ ಕೃತ್ಯ ಮಾಡುವವರಿಗೆ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಎಚ್ಚರಿಕೆ ನೀಡಿದರು.ನಗರದ ಡಿಸಿ ಕಚೇರಿಯಲ್ಲಿ ಅಕ್ರಮ ರೀಫಿಲಿಂಗ್ ದಂದೆ ಕುರಿತು ಗ್ಯಾಸ್ ಏಜೆನ್ಸಿರವರೊಂದಿಗೆ ಅಧಕ್ಷತೆ ವಹಿಸಿ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಅಡುಗೆ ಅನಿಲ ದಂಧೆ ನಡೆಯಬಾರದು. ಅಂತಹ ಪ್ರಕರಣ ಕಂಡುಬಂದರೆ ಯಾವುದೇ ಒತ್ತಾಯಕ್ಕೆ ಮಣಿಯದೆ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದರು.
ಏಜೆನ್ಸಿ ಲೈಸೆನ್ಸ್ ರದ್ದುಅಕ್ರಮ ದಂಧೆ ಕಂಡುಬಂದರೆ ಏಜೆನ್ಸಿಯವರ ಲೈಸೆನ್ಸ್ ರದ್ದು ಮಾಡಲಾಗುವುದು, ಮಾಲೀಕರ ವಿರುದ್ಧ ವೈಯಕ್ತಿಕವಾಗಿ ಪ್ರಕರಣ ದಾಖಲು ಹಾಗೂ ಶಿಕ್ಷೆಗೆ ಗುರಿ ಮಾಡಲಾಗುವುದು, ಇಂತಹ ಕೃತ್ಯಗಳು ಸಮಾಜಕ್ಕೆ ಅಘಾತಕಾರಿ ಬೆಳೆವಣಿಗೆಯಾಗಿದ್ದು, ಸಾರ್ವಜನಿಕರು ಈ ಬಗ್ಗೆ ಮಾಹಿತಿ ತಿಳಿದೊಡನೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಬೇಕೆಂದರು. ಖಾಸಗಿ ಏಜೆನ್ಸಿಯವರ ಸರ್ವೇ ಮಾಡಿ ಮಾಹಿತಿ ಪಡೆದು ಕ್ರಮಕೈಗೊಳ್ಳುವಂತೆ ಆಹಾರ ಇಲಾಖೆಯ ಉಪ ನಿರ್ದೇಶಕಿ ಲತಾರಿಗೆ ಸೂಚಿಸಿದ ಅವರು, ಆಹಾರ ಇಲಾಖೆ ಹಾಗೂ ಆಯಿಲ್ ಕಂಪನಿಗಳು ಸಹಕಾರದೊಂದಿಗೆ ಈ ಕೆಲಸವನ್ನು ನಿರ್ವಹಿಸಬೇಕು ಎಂದರು.
ಜಾಗೃತದಳ ಜಾಗೃತವಾಗಿರಬೇಕುಖಾಸಗಿ ಏಜೆನ್ಸಿಯವರ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಗೃಹಬಳಕೆ ಸಿಲಿಂಡರ್ ಹಾಗೂ ಆಹಾರ ಇಲಾಖೆ ಎ.ಪಿ.ಎಲ್., ಬಿ.ಪಿ.ಎಲ್ ಹಾಗೂ ಅಂತ್ಯೋದಯ ಫಲಾನುಭವಿಗಳ ತುಲನೆ ಮಾಡಿದಾಗ ಗೃಹ ಬಳಕೆ ಅನಿಲ ದುರ್ಬಳಕೆ ಪ್ರಕರಣ ಕಂಡುಬರುತ್ತಿದೆ. ಈ ಕೆಲಸವನ್ನು ಇಂದಿನಿಂದಲೇ ಆರಂಭಿಸಬೇಕು. ಅನಧಿಕೃತ ಹಾಗೂ ಕಾನೂನು ಬಾಹಿರ ಚಟುವಟಿಕೆಗಳನ್ನು ಕಂಡುಹಿಡಿಯಲು ಜಾಗೃತದಳಗಳು ಕಟ್ಟುನಿಟ್ಟಾಗಿ ಕರ್ತವ್ಯ ನಿರ್ವಹಿಸಲು ಸೂಚಿಸಿದರು. ಆಹಾರ ಇಲಾಖೆಯ ಉಪ ನಿರ್ದೇಶಕಿ ಲತಾ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು ೪,೫೬,೦೯೫ ಗ್ಯಾಸ್ ಸಂಪರ್ಕಗಳಿವೆ. ತಾಲ್ಲೂಕುವಾರು ಬಂಗಾರಪೇಟೆಯಲ್ಲಿ ೩ ಏಜೆನ್ಸಿಗಳಿದ್ದು, ಒಟ್ಟು ೫೪೮೫೧, ಕೋಲಾರದಲ್ಲಿ ೮ ಏಜೆನ್ಸಿಗಳಿದ್ದು, ಒಟ್ಟು ೧,೩೪,೪೫೦, ಮಾಲೂರುನಲ್ಲಿ ೮ ಏಜೆನ್ಸಿಗಳಿದ್ದು, ಒಟ್ಟು ೮೨,೩೦೬, ಮುಳಬಾಗಿಲಿನಲ್ಲಿ ೬ ಏಜೆನ್ಸಿಗಳಿದ್ದು, ಒಟ್ಟು ೬೩,೪೫೯, ಶ್ರೀನಿವಾಸಪುರದಲ್ಲಿ ೫ ಏಜೆನ್ಸಿಗಳಿದ್ದು, ೪೮೦೧೬ ಹಾಗೂ ಕೆ.ಜಿ.ಎಫ್‌ನಲ್ಲಿ ೫ ಏಜೆನ್ಸಿಗಳಿದ್ದು, ೭೩,೦೧೩ ಗ್ಯಾಸ್ ಸಂಪರ್ಕವನ್ನು ಹೊಂದಿದ್ದಾರೆ ಎಂದು ವಿವರಿಸಿದ ಅವರು ಜಿಲ್ಲೆಯಲ್ಲಿ ಒಟ್ಟು ೭೧೯ ಪ್ರಕರಣಗಳನ್ನು ಆಯಾ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದರು.