ಸಾರಾಂಶ
ಅಡಕೆ ಬೆಳೆಗಾರರ ಸಮಾವೇಶ । ಅಡಕೆ ಹಾನಿಕರವಲ್ಲ । ಕಿಸಾನ್ ಸಮೃದ್ಧಿ ಆ್ಯಪ್ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಸಾಗರಅಡಕೆ ಬೆಳೆಗಾರರ ರಕ್ಷಣೆಗೆ ಕೇಂದ್ರ ಸರ್ಕಾರ ಕಟಿಬದ್ಧವಾಗಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಭರವಸೆ ನೀಡಿದರು.
ಪಟ್ಟಣದ ಸಂತೆ ಮೈದಾನದಲ್ಲಿ ಸಾಗರ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ವತಿಯಿಂದ ಶನಿವಾರ ಏರ್ಪಡಿಸಿದ್ದ ಅಡಕೆ ಬೆಳೆಗಾರರ ಬೃಹತ್ ಸಮಾವೇಶವನ್ನು ಅಡಕೆ ಸಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ನಾವು ಅಧಿಕಾರದಲ್ಲಿರುವುದೇ ಜನರ ಸೇವೆ ಮಾಡಲು ಹೊರತೂ ಸಚಿವರಾಗಿ ಅಧಿಕಾರ ಅನುಭವಿಸಲು ಅಲ್ಲ ಎಂದರು.ಅಡಕೆಗೆ ಧಾರ್ಮಿಕವಾಗಿಯೂ ಬಹಳ ಮಹತ್ವವಿದೆ. ಅಡಕೆ ಪವಿತ್ರ ವಸ್ತು ಎಂಬುದು ನಮ್ಮ ಸಂಸ್ಕೃತಿಯಲ್ಲಿ ರೂಢಿಯಾಗಿ ಬಂದಿದೆ. ಅಡಕೆ ಆಮದಿನಿಂದ ಸಾಂಪ್ರದಾಯಿಕ ಬೆಳೆಗಾರರಿಗೆ ತೊಂದರೆಯಾಗಿದೆ. ಇದನ್ನು ನಿಲ್ಲಿಸುವ ಪ್ರಯತ್ನವಾಗಿ ಶೇ.100 ರಷ್ಟು ಆಮದು ಸುಂಕವನ್ನು ಹೆಚ್ಚಿಸಿದ್ದೇವೆ. ಈಗ ಅಡಕೆ ಬೆಳೆಯ ಪ್ರದೇಶವೂ ವಿಸ್ತಾರವಾಗಿದೆ ಎಂದರು.
ಅಡಕೆ ರೋಗಕ್ಕೆ ಸಂಬಂಧಿಸಿದಂತೆ ಸಂಶೋಧನಾ ಸಮಿತಿ ರಚಿಸಿ ಹಣ ಬಿಡುಗಡೆ ಮಾಡಿದ್ದೇವೆ. ವಿಶ್ವ ಆರೋಗ್ಯ ಸಂಸ್ಥೆ ಅಡಕೆ ಆರೋಗ್ಯಕ್ಕೆ ಹಾನಿಕರ ಎಂದಿರುವುದು ಸರಿಯಲ್ಲ. ಇದು ಹಾನಿಕರವಲ್ಲ ಎಂದು ಸಂಶೋಧನೆ ಮಾಡಿ ವರದಿ ತರಿಸುತ್ತೇವೆ. ಇದಕ್ಕಾಗಿ ಪ್ರಯತ್ನಗಳು ನಡೆದಿವೆ ಎಂದರು.ಸಮಾವೇಶದಲ್ಲಿ ಕೇಂದ್ರ ಸಚಿವರಾದ ಶಿವರಾಜ್ ಸಿಂಗ್ ಚೌವ್ಹಾಣ ಅವರು ಕಿಸಾನ್ ಸಮೃದ್ಧಿ ಆ್ಯಪ್ ಉದ್ಘಾಟಿಸಿದರು. ಬೆಳೆಗಾರರ ಸಂಘ ತಂದಿರುವ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು. ಬೆಳೆಗಾರ, ಲೇಖಕ ಡಾ.ಜಯಪ್ರಕಾಶ್ ಮಾವಿನಕುಳಿ ಅವರು ಬರೆದಿರುವ ‘ಪಾರಂಪರಿಕ ಅಡಕೆ ಬೆಳೆಗಾರರ ಅನುಸಂಕಟಗಳ ಕಥಾನಕ- ಅಕ್ಕ ನಾನೊಂದ ಕನಸ ಕಂಡೆ’ ಪುಸ್ತಕ ಬಿಡುಗಡೆ ಮಾಡಿದರು.
ಬೆಳೆಗಾರರ ಸಂಘದಿಂದ ಡಾಕ್ಟರೇಟ್ ಪದವಿ ಪಡೆದ ಮಾಜಿ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪನವರನ್ನು ಹಾಗೂ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಗ್ಹಾಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಅಡಕೆ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷರಾದ ಕಾಂತ್ರಿ ಗೋವಿಂದರಾವ್, ರಂಗನಾಥ ಎಚ್.ಜಿ., ಆರ್.ಎಸ್.ಗಿರಿ, ಎಲ್.ಟಿ.ತಿಮ್ಮಪ್ಪ, ಬಿ.ಆರ್.ಜಯಂತ್, ವಿ.ನಾ.ಕೃಷ್ಣಮೂರ್ತಿ ಹಾಗೂ ಪ್ರಮುಖ ಅಡಿಕೆ ವ್ಯಾಪಾರಿ ಎಂ.ಎನ್.ಹೆಗಡೆಯವರನ್ನು ಸನ್ಮಾನಿಸಲಾಯಿತು.
ಸಂಸದ ಬಿ.ವೈ.ರಾಘವೇಂದ್ರ, ತೀರ್ಥಳ್ಳಿ ಶಾಸಕ ಆರಗ ಜ್ಞಾನೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ವ.ಶಂ.ರಾಮಚಂದ್ರ ಭಟ್, ಶಾಸಕ ಗೋಪಾಲಕೃಷ್ಣ ಬೇಳೂರು, ಆಪ್ಸ್‍ಕೋಸ್ ಅಧ್ಯಕ್ಷ ಬಿ.ಎ.ಇಂದೂಧರ ಗೌಡ, ತೋಟಗಾರ್ಸ್ ಅಧ್ಯಕ್ಷ ಕೆ.ಸಿ.ದೇವಪ್ಪ, ಮಾಜಿ ಶಾಸಕ ಬಿ.ಸ್ವಾಮಿರಾವ್, ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ರವಿಕುಮಾರ್ ಗೌಡ, ಆರ್.ಸಿ.ಜಗದೀಶ್, ಶಿರಸಿ ಟಿಎಸ್‍ಎಸ್ ಅಧ್ಯಕ್ಷ ಬಾಲಕೃಷ್ಣ ವೈದ್ಯ, ಹಾಲು ಒಕ್ಕೂಟದ ಅಧ್ಯಕ್ಷ ಎಚ್.ಎಸ್.ವಿದ್ಯಾಧರ, ಅಡಕೆ ದಲಾಲರ ಸಂಘದ ಅಧ್ಯಕ್ಷ ಮೋಹನ ಗೌಡ, ಖರೀದಿದಾರರ ಸಂಘದ ಅಧ್ಯಕ್ಷ ನಿರಂಜನ ಕೋರಿ, ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಸಿಗಂದೂರಿನ ದೇವಸ್ಥಾನ ಆಡಳಿತ ಸಮಿತಿಯ ರವಿಕುಮಾರ್, ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ, ಮಹೇಶ್, ಕ್ರಾಮ್ ಅಧ್ಯಕ್ಷ ನರಸಿಂಹ ಹೆಗಡೆ, ಚೇತನರಾಜ್ ಕಣ್ಣೂರು ಮತ್ತಿತರರು ಹಾಜರಿದ್ದರು.ಯು.ಎಚ್.ರಾಮಪ್ಪ ಸ್ವಾಗತಿಸಿದರು. ಮಲ್ಲಿಕಾರ್ಜುನ ಹಕ್ರೆ ಸಚಿವರಿಗೆ ನೀಡಿದ ಮನವಿ ಪತ್ರ ವಾಚಿಸಿದರು. ಅನಿಲ್ ಒಡೆಯರ್ ವಂದಿಸಿದರು. ಮಾಲತಿ ಸಭಾಹಿತ್ ಮತ್ತು ಕೌಶಿಕ್ ಕಾನುಗೋಡು ನಿರೂಪಿಸಿದರು.
ಶಂಖದಿಂದ ಬಂದರೆ ಮಾತ್ರ ತೀರ್ಥ ಎನ್ನುವಂತೆ, ಅಡಕೆ ಆರೋಗ್ಯಕ್ಕೆ ಹಾನಿಕಾರಕ ಅಲ್ಲ ಎಂಬ ವರದಿಯನ್ನು ಸಂಶೋಧನೆ ಮೂಲಕ ದೃಢಪಡಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಬೇಕು. ಅಡಕೆಯ ದುರುಪಯೋಗದ ಬಗ್ಗೆ ಬೆಳೆಗಾರರು ಎಚ್ಚರಿಕೆಯಿಂದ ಇರಬೇಕು.
ಭೀಮೇಶ್ವರ ಜೋಶಿ, ಶ್ರೀ ಕ್ಷೇತ್ರ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ.;Resize=(128,128))
;Resize=(128,128))
;Resize=(128,128))
;Resize=(128,128))