ಅಕ್ರಮ ಮರಳು ಸಂಗ್ರಹಿಸಿದರೆ ಕಠಿಣ ಕ್ರಮ: ಡೀಸಿ

| Published : May 26 2024, 01:32 AM IST

ಸಾರಾಂಶ

ಒಮ್ಮೆ ಹೊಲದ ಮೇಲೆ ಭೋಜ ಕೂಡಿಸಿದಲ್ಲಿ ಸದರಿ ಜಮೀನಿನ ಮೇಲೆ ಬ್ಯಾಂಕ್ ಸಾಲ ಪಡೆಯುವಂತಿಲ್ಲ. ಯಾರಿಗೂ ಅದು ಮಾರಾಟ ಸಹ ಮಾಡುವಂತಿಲ್ಲ. ಇದನ್ನು ಪಹಣಿಯಲ್ಲಿಯೂ ಉಲ್ಲೇಖಿಸಲಾಗುತ್ತದೆ. ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಹಾಕಲು ಇಂತಹ ಕ್ರಮ ಅನಿವಾರ್ಯ ಎಂದು ಜಿಲ್ಲಾಧಿಕಾರಿ ಪುನರುಚ್ಚಿಸಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಜಿಲ್ಲೆಯ ಅಫಜಲ್ಪುರ ಸೇರಿದಂತೆ ಹಲವು ಕಡೆ ಕೃಷಿ ಬಳಕೆಯ ಜಮೀನಿನಲ್ಲಿ ಅಕ್ರಮ‌ ಮರಳು ಸಂಗ್ರಹಣೆ ಮಾಡುತ್ತಿರುವುದು ಕಂಡುಬಂದಿದ್ದು, ಅಂತಹ ಜಮೀನಿನ ಮೇಲೆ ಭೋಜ ಕೂಡಿಸಲು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅಧ್ಯಕ್ಷತೆಯಲ್ಲಿ ನಡೆದ ಸ್ಯಾಂಡ್ ಟಾಸ್ಕ್ ಫೋರ್ಸ್ ಕಮಿಟಿ ಸಭೆಯಲ್ಲಿ ನಿರ್ಧರಿಸಲಾಯಿತು.

ಒಮ್ಮೆ ಹೊಲದ ಮೇಲೆ ಭೋಜ ಕೂಡಿಸಿದಲ್ಲಿ ಸದರಿ ಜಮೀನಿನ ಮೇಲೆ ಬ್ಯಾಂಕ್ ಸಾಲ ಪಡೆಯುವಂತಿಲ್ಲ. ಯಾರಿಗೂ ಅದು ಮಾರಾಟ ಸಹ ಮಾಡುವಂತಿಲ್ಲ. ಇದನ್ನು ಪಹಣಿಯಲ್ಲಿಯೂ ಉಲ್ಲೇಖಿಸಲಾಗುತ್ತದೆ. ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಹಾಕಲು ಇಂತಹ ಕ್ರಮ ಅನಿವಾರ್ಯ ಎಂದು ಜಿಲ್ಲಾಧಿಕಾರಿ ಪುನರುಚ್ಚಿಸಿದರು.

ಅಫಜಲ್ಪುರ ತಾಲೂಕಿನಲ್ಲಿ ಅಕ್ರಮವಾಗಿ ಸಂಗ್ರಹಿಸಿದ ಮರಳನ್ನು ಲೋಕೋಪಯೋಗಿ ಇಲಾಖೆಗೆ ಹಂಚಿಕೆ ಮಾಡಿ ನಿಯಮಾನುಸಾರ ಸದರಿ ಮರಳು ವಿಲೇವಾರಿ‌ ಮಾಡಬೇಕು ಎಂದರು.

ನೂತನ ಸ್ಯಾಂಡ್ ಬ್ಲಾಕ್:

ಜಿಲ್ಲೆಯಾದ್ಯಂತ ನದಿ, ಜಲಾಶಯ ಸಮೀಪದಲ್ಲಿ ನಿರ್ದಿಷ್ಟ ಸ್ಯಾಂಡ್‌ ಬ್ಲಾಕ್ ಗುರುತಿಸಬೇಕು. ನೂತನ ಮರಳು ನೀತಿ ಪ್ರಕಾರ ಅದನ್ನು ಹಟ್ಟಿ ಚಿನ್ನದ ಗಣಿ ಮೂಲಕ ಟೆಂಡರ್‌ ಕರೆದು ಸರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವಂತೆ ವಿಲೇವಾರಿಗೆ ಕ್ರಮ ವಹಿಸಬೇಕು ಎಂದು ಗಣಿ ಮತ್ತು ಭೂ‌ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಡಿ.ಸಿ. ನಿರ್ದೇಶನ ನೀಡಿದರು.

ಗಣಿ ಮತ್ತು ಭೂ‌ ವಿಜ್ಞಾನ ಇಲಾಖೆ ಉಪನಿರ್ದೇಶಕ ಸೋಮಶೇಖರ್ ಮಾತನಾಡಿ ಜಿಲ್ಲೆಯ ಅಫಜಲಪೂರ, ಸೇಡಂ, ಚಿತ್ತಾಪುರ ಸೇರಿದಂತೆ ಒಟ್ಟಾರೆ ಅಕ್ರಮ‌ ಮರಳು ಸಂಗ್ರಹಣೆ ಪ್ರಕರಣದಲ್ಲಕ 45 ಎಫ್.ಐ.ಆರ ದಾಖಲಿಸಿದ್ದು, ಭೋಜ ಕೂಡಿಸಲು ಸಹ ಸಿದ್ಧತೆ ಮಾಡಲಾಗುತ್ತಿದೆ ಎಂದು ಸಭೆಗೆ ತಿಳಿಸಿದರು.

ಸಭೆಯಲ್ಲಿ ಎಸ್.ಪಿ. ಅಕ್ಷಯ್ ಹಾಕೈ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತರಾದು ರೂಪಿಂದರ್ ಸಿಂಗ್ ಕೌರ್, ಆಶಪ್ಪ ಪೂಜಾರಿ, ಲೋಕೋಪಯೋಗಿ ಇಲಾಖೆಯ ಇ.ಇ. ಸುಭಾಷ, ಆರ್.ಟಿ.ಓ ಭೀಮಣಗೌಡ ಪಾಟೀಲ, ತಹಸೀಲ್ದಾರ್‌ ಮತ್ತಿತರ ಅಧಿಕಾರಿಗಳು ಇದ್ದರು.