ಅಪ್ರಾಪ್ತರು ವಾಹನ ಚಲಾಯಿಸಿದೆ ಕಠಿಣ ಕ್ರಮ

| Published : Feb 01 2025, 12:03 AM IST

ಸಾರಾಂಶ

ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ತಮ್ಮ ಪ್ರಾಣವನ್ನು ಉಳಿಸಿಕೊಳ್ಳುವಂತೆ ಅರಿವು ಮೂಡಿಸಬೇಕು. ಕಳೆದ 7 ತಿಂಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಂಜೆ 6 ರಿಂದ 9 ಗಂಟೆಯವರೆಗೆ 118 ಅಪಘಾತಗಳು ಸಂಭವಿಸಿವೆ. ಈ ಅವಧಿಯಲ್ಲಿ ಸಾರಿಗೆ ಮತ್ತು ಪೋಲಿಸ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹೆಚ್ಚಿನ ನಿಗಾ ವಹಿಸಿ ಕರ್ತವ್ಯ ನೀರ್ವಹಿಸಬೇಕಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

18 ವರ್ಷದ ಒಳಗಿನ ಯುವಕ, ಯುವತಿಯರು ವಾಹನ ಸವಾರಿ ಅಥವಾ ಚಲಾಯಿಸಿ ಅಪಘಾತ ಮಾಡಿದರೆ ಅಂತಹವರಿಗೆ ಶಾಶ್ವತವಾಗಿ ವಾಹನ ಚಲಾವಣೆಯ ಪರವಾನಗಿಯನ್ನು (ಡಿಎಲ್‌) ನೀಡದಂತೆ ಕ್ರಮವಹಿಸಲು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ‘ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,18 ವರ್ಷದ ಒಳಗಿನವರು ಯಾವುದೇ ಕಾರಣಕ್ಕೂ ದ್ವಿಚಕ್ರ ವಾಹನಗಳನ್ನು ಸವಾರಿ ಮಾಡಬಾರದು ಹಾಗೂ ಲಘುವಾಹನಗಳನ್ನು ಚಲಾಯಿಸುವುದನ್ನು ಮಾಡಬಾರದು,ಒಂದು ವೇಳೆ ಈ ಸಂಚಾರಿ ನಿಯಮ ಉಲ್ಲಂಘಿಸಿದರೆ ಕಟ್ಟು ನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.

ಭಿತ್ತಿಪತ್ರ ಬಿಡುಗಡೆ

ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ತಮ್ಮ ಪ್ರಾಣವನ್ನು ಉಳಿಸಿಕೊಳ್ಳುವಂತೆ ಅರಿವು ಮೂಡಿಸಬೇಕು. ಕಳೆದ 7 ತಿಂಗಳಲ್ಲಿ ಜಿಲ್ಲೆಯಲ್ಲಿ ಸಂಜೆ 6 ರಿಂದ 9 ಗಂಟೆಯವರೆಗೆ 118 ಅಪಘಾತಗಳು ಸಂಭವಿಸಿವೆ. ಈ ಅವಧಿಯಲ್ಲಿ ಸಾರಿಗೆ ಮತ್ತು ಪೋಲಿಸ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹೆಚ್ಚಿನ ನಿಗಾ ವಹಿಸಿ ಕರ್ತವ್ಯ ನೀರ್ವಹಿಸಬೇಕು ಎಂದರು. ಈ ವೇಳೆ ಸಂಚಾರಿ ನಿಯಮಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಕರಪತ್ರಗಳನ್ನು ಬಿಡುಗಡೆ ಮಾಡಿದರು.

ಸಭೆಯಲ್ಲಿ ಎಸ್ಪಿ ಕುಶಲ್ ಚೌಕ್ಸೆ, ಪಿಡಬ್ಲ್ಯುಡಿ ಕಾರ್ಯಪಾಲಕ ಅಭಿಯಂತರರು ಗಿರೀಶ್, ಆರ್‌ಟಿಒ ವಿವೇಕಾನಂದ ರೈ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್.ಮಹೇಶ್ ಕುಮಾರ್, ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಬಸವರಾಜು, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಕೆ.ಮಾದವಿ ಇದ್ದರು.