ಸಾರಾಂಶ
ಅಕ್ರಮ ಚಟುವಟಿಕೆಗಳಲ್ಲಿ ಯಾವುದೇ ಪೊಲೀಸ್ ಸಿಬ್ಬಂದಿ, ಅಧಿಕಾರಿಗಳು ಶಾಮೀಲಾದಲ್ಲಿ ಅಂಥವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನೂತನ ಎಸ್ಪಿ ಎಂ. ನಾರಾಯಣ ತಿಳಿಸಿದರು.
ಭಟ್ಕಳ: ಭಟ್ಕಳ ಸೇರಿದಂತೆ ಜಿಲ್ಲೆಯಲ್ಲಿ ಶಾಂತಿ ಸೌಹಾರ್ದತೆ, ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಗೆ ಸಾರ್ವಜನಿಕರ ಸಹಕಾರ ಅತಿ ಅಗತ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ತಿಳಿಸಿದರು.
ಗುರುವಾರ ಸುದ್ದಿಗಾರರ ಜತೆ ಮಾತನಾಡಿ, ಜಿಲ್ಲೆಯಲ್ಲಿ ಕೋಮು ಗಲಭೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಪ್ರತಿಯೊಬ್ಬರೂ ಶಾಂತಿ, ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಬೇಕು. ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗುವುದು. ಗಾಂಜಾ, ಡ್ರಗ್ಸ್, ಮಟಕಾ, ಅನಧಿಕೃತ ಕ್ಲಬ್‌ಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.ಅಕ್ರಮ ಚಟುವಟಿಕೆಗಳಲ್ಲಿ ಯಾವುದೇ ಪೊಲೀಸ್ ಸಿಬ್ಬಂದಿ, ಅಧಿಕಾರಿಗಳು ಶಾಮೀಲಾದಲ್ಲಿ ಅಂಥವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಾಮಾಜಿಕ ಜಾಲತಾಣಗಳ ಮೇಲೆ ಪೊಲೀಸ್ ಇಲಾಖೆಯ ನಿಗಾ ಇರಲಿದೆ. ವೈಯಕ್ತಿಕ ತೇಜೋವಧೆ, ಸುಳ್ಳು ಸುದ್ದಿ ಹರಡಿಸುತ್ತಿರುವುದು ಕಂಡುಬಂದರೆ ಕಠಿಣ ಕ್ರಮದ ಜತೆಗೆ ಅಡ್ಮಿನ್ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ ಅವರು, ಜಿಲ್ಲೆಯಲ್ಲಿ ಇ- ಪೊಲೀಸ್ ಬೀಟ್ ವ್ಯವಸ್ಥೆಯನ್ನು ಸಮರ್ಪಕವಾಗಿ ಜಾರಿಗೊಳಿಸಲಾಗುವುದು ಎಂದರು.
ಭಟ್ಕಳ ಸೇರಿದಂತೆ ಜಿಲ್ಲೆಯಲ್ಲಿರುವ ಎಟಿಎಸ್ ತಂಡವನ್ನು ಸಕ್ರಿಯಗೊಳಿಸಲಾಗುತ್ತದೆ. ಜಿಲ್ಲೆಯಲ್ಲಿ ತೀವ್ರ ಮಳೆ ಬೀಳುತ್ತಿದ್ದು, ಈ ಸಂದರ್ಭದಲ್ಲಿ ಉಂಟಾಗುವ ಸಂಕಷ್ಟದ ಸಂದರ್ಭದಲ್ಲೂ ಎನ್‌ಡಿಆರ್‌ಎಫ್ ಜತೆಗೆ ಪೊಲೀಸರೂ ಕಾರ್ಯ ನಿರ್ವಹಿಸಿ ಜನತೆಗೆ ಸಹಾಯ ಮಾಡಲಿದ್ದಾರೆ ಎಂದರು.ಈ ಸಂದರ್ಭದಲ್ಲಿ ಡಿವೈಎಸ್ಪಿ ಮಹೇಶ, ನಗರ ಠಾಣೆಯ ಇನ್ಸಪೆಕ್ಟರ್ ಗೋಪಿಚಂದನ, ಗ್ರಾಮೀಣ ಠಾಣೆಯ ಇನ್ಸಪೆಕ್ಟರ್ ಚಂದನ ಗೋಪಾಲ ಇದ್ದರು.