ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ಕಳಪೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆಗೆ ಅವಕಾಶ ಮಾಡಿಕೊಟ್ಟರೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಎಚ್ಚರಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ 2026-27ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜ ಮತ್ತು ರಸಗೊಬ್ಬರ ಸರಬರಾಜು ಸಿದ್ಧತೆ ಕುರಿತ ಜಿಲ್ಲಾಮಟ್ಟದ ಟಾಸ್ಕ್ ಫೋರ್ಸ್ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ ರೈತರಿಗೆ ವಿತರಿಸುವ ಬಿತ್ತನೆ ಬೀಜಗಳು ಉತ್ತಮ ಗುಣಮಟ್ಟದ್ದಾಗಿರಬೇಕು. ಕೃಷಿ ಇಲಾಖೆಯಿಂದ ವಿತರಿಸುವ ಬೀಜಗಳು ಮಾತ್ರವಲ್ಲದೆ, ಖಾಸಗಿ ಡೀಲರ್‌ಗಳ ಬಳಿ ಲಭ್ಯವಿರುವ ಬೀಜಗಳ ಗುಣಮಟ್ಟದ ಮೇಲೂ ನಿಗಾ ಇಡಬೇಕು. ಕಡ್ಡಾಯವಾಗಿ ಮೊಳಕೆ ಒಡೆಯುವ ಸಾಮರ್ಥ್ಯದ ಪರೀಕ್ಷೆ ನಡೆಸಿದ ಬಳಿಕವೇ ಬಿತ್ತನೆ ಬೀಜಗಳನ್ನು ಪೂರೈಸಬೇಕು ಎಂದು ನಿರ್ದೇಶನ ನೀಡಿದರು.

ಖಾಸಗಿ ಮಾರುಕಟ್ಟೆಯಲ್ಲಿ ಕಳಪೆ ಗುಣಮಟ್ಟದ ಹಾಗೂ ಲೂಸ್ ಸೀಡ್ಸ್ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಂತಹ ಕಳಪೆ ಬೀಜಗಳಿಂದ ರೈತರಿಗೆ ನಷ್ಟ ಉಂಟಾಗುವ ಸಾಧ್ಯತೆ ಇದೆ. ಈ ಹಿಂದೆ ಕಳಪೆ ಬೀಜ ಮಾರಾಟದ ಕುರಿತು ದೂರುಗಳು ಬಂದಿದ್ದು, ಈ ಬಾರಿ ಅಂತಹ ಯಾವುದೇ ದೂರುಗಳಿಗೆ ಆಸ್ಪದ ನೀಡಬಾರದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲೆಯ ಯಾವ ತಾಲೂಕಿನಲ್ಲಿ ಎಷ್ಟು ಪ್ರಮಾಣದ ಬಿತ್ತನೆ ಬೀಜಗಳು ಖಾಸಗಿಯವರಿಂದ ಮತ್ತು ಇಲಾಖೆಯಿಂದ ವಿತರಣೆಯಾಗುತ್ತಿವೆ. ರೈತರು ಹೊರಗಿನಿಂದ ಯಾವೆಲ್ಲಾ ಬೀಜಗಳನ್ನು ತರುತ್ತಿದ್ದಾರೆ ಎಂಬ ನಿಖರವಾದ ಅಂಕಿ-ಅಂಶಗಳ ದಾಖಲೆಯನ್ನು ಕೃಷಿ ಅಧಿಕಾರಿಗಳು ಹೊಂದಿರಬೇಕು. ಫಸಲು ಬಾರದಿದ್ದಾಗ ರೈತರು ಆಕ್ಷೇಪಣೆ ಎತ್ತಿದರೆ, ಸೂಕ್ತ ತಾಂತ್ರಿಕ ವಿವರಣೆ ನೀಡಲು ಈ ಡೇಟಾ ಸಹಕಾರಿಯಾಗಲಿದೆ ಎಂದರು.


ಜಿಲ್ಲೆಯಲ್ಲಿ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳ ಕೃತಕ ಅಭಾವ ಸೃಷ್ಠಿಯಾಗದಂತೆ ಜಾಗ್ರತೆ ವಹಿಸಬೇಕು. ರೈತರಲ್ಲಿ ಅನಗತ್ಯ ಭೀತಿ ಉಂಟುಮಾಡಿ ದಾಸ್ತಾನು ಮಾಡಿಕೊಳ್ಳುವ ಪರಿಸ್ಥಿತಿ ಬರಬಾರದು. ಸ್ಥಳೀಯವಾಗಿ ಯಾವುದೇ ರೀತಿಯ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್ ಮಾತನಾಡಿ, ಜಿಲ್ಲೆಯಾದ್ಯಂತ ಒಟ್ಟು 189 ಗ್ರಾಪಂಗಳು, 22 ಹೋಬಳಿಗಳು ಹಾಗೂ 1,009 ಗ್ರಾಮಗಳಿದ್ದು, ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ .ಪೂರ್ವ ಮುಂಗಾರಿನಲ್ಲಿ ಸುಮಾರು 25 ಸಾವಿರದಿಂದ ದಿಂದ 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸಿರಿಧಾನ್ಯಗಳ ಬಿತ್ತನೆಯಾಗುವ ನಿರೀಕ್ಷೆ ಇದೆ. ಮೆಕ್ಕೆಜೋಳವನ್ನು ಸುಮಾರು 95 ಸಾವಿರದಿಂದ ಒಂದು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹಾಗೂ ಶೇಂಗಾ ಬೆಳೆಯನ್ನು ಸುಮಾರು 95 ಸಾವಿರದಿಂದ 1,15,000 ಹೆಕ್ಟೇರ್ ಪ್ರದೇಶದವರೆಗೆ ಬಿತ್ತನೆ ಮಾಡಲು ಉದ್ದೇಶಿಸಲಾಗಿದೆ. ರಾಗಿ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿರುವುದರಿಂದ ಕಳೆದ ವರ್ಷ 58,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಈ ಬಾರಿ ರಾಗಿ ಬಿತ್ತನೆ ಪ್ರದೇಶ ಮತ್ತಷ್ಟು ಹೆಚ್ಚಾಗುವ ಸಂಭವವಿದೆ ಎಂದರು.

ಕಳೆದ ಎರಡು ವರ್ಷಗಳಿಂದ ಜಿಲ್ಲೆಯ ಹವಾಮಾನಕ್ಕೆ ಹೊಂದಿಕೊಳ್ಳುವಂತೆ 130 ರಿಂದ 140 ದಿನಗಳ ಅವಧಿಯ ತೊಗರಿ ತಳಿಗಳನ್ನು ಪರಿಚಯಿಸಲಾಗಿದ್ದು, ಈ ವರ್ಷವೂ ಇದನ್ನು ಮುಂದುವರಿಸಲಾಗುವುದು. ಶೇಂಗಾ ಬೆಳೆ 120 ದಿನಗಳ ಅವಧಿಯದ್ದಾಗಿದ್ದು, ತೊಗರಿ ಬೆಳೆ 130-140 ದಿನಗಳ ಅವಧಿಯನ್ನು ಹೊಂದಿರುತ್ತದೆ ಎಂದು ಹೇಳಿದರು.

ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಎಂ.ಬಾಬು, ಕೃಷಿ ಇಲಾಖೆ ಚಿತ್ರದುರ್ಗ ವಿಭಾಗ ಉಪನಿರ್ದೇಶಕ ಕೆ.ಎಸ್.ಶಿವಕುಮಾರ್, ತಹಸೀಲ್ದಾರ್‌ಗಳು, ಸಹಾಯಕ ಕೃಷಿ ನಿರ್ದೇಶಕರು, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.