ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗಎಸ್‌ಸಿಪಿ, ಟಿಎಸ್‌ಪಿ ಅನುದಾನ ದುರ್ಬಳಕೆ ಮಾಡಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಎಚ್ಚರಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಸ್‍ಸಿಪಿ, ಟಿಎಸ್‍ಪಿ ಯೋಜನೆಯಡಿ ಇಲಾಖೆವಾರು ಹಂಚಿಕೆಯಾದ ಅನುದಾನಕ್ಕೆ ಅನುಗುಣವಾಗಿ ಕ್ರಿಯಾಯೋಜನೆ ಸಿದ್ದಪಡಿಸಬೇಕು. ಅನುದಾನ ಯಾವ ಉದ್ದೇಶಕ್ಕಾಗಿ ಬಳಕೆ ಮಾಡಬೇಕೋ ಅದೇ ಉದ್ದೇಶಕ್ಕೆ ವಿನಿಯೋಗವಾಗಬೇಕು. ಎಸ್‍ಸಿ, ಎಸ್‍ಟಿ ಕಾಲೋನಿಗಳಲ್ಲಿ ಕೆಲಸಗಳಾಗಬೇಕು. ಯಾವುದೇ ಕಾರಣಕ್ಕೂ ನಿಯಮ ಮೀರುವಂತಿಲ್ಲ. ಕಡ್ಡಾಯವಾಗಿ ಸರ್ಕಾರದ ಮಾರ್ಗಸೂಚಿ ಅನುಸರಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಮಾಹಿತಿಯನ್ನು ತಾಲೂಕುವಾರು ಸಂಗ್ರಹಿಸಿ ವಾರದೊಳಗೆ ವರದಿ ನೀಡಬೇಕು. ಶಾಲೆಯಿಂದ ಹೊರಗುಳಿದ ಮಕ್ಕಳು ಬಾಲ್ಯವಿವಾಹ, ಬಾಲ ಕಾರ್ಮಿಕರಾಗುವ ಸಾಧ್ಯತೆ ಇರುವುದರಿಂದ ಮಕ್ಕಳ ಸಂಪೂರ್ಣ ಮಾಹಿತಿ ಸಂಗ್ರಹಿಸಿ ವಿವಿಧ ಕಾರ್ಯತಂತ್ರದ ಮೂಲಕ ಮುಖ್ಯವಾಹಿನಿಗೆ ತರುವ ಮೂಲಕ ಮಕ್ಕಳು ಶಾಲೆಯಿಂದ ಹೊರಗುಳಿಯಲು ಕಾರಣವೇನು ಎಂಬಿತ್ಯಾದಿ ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು ಹಾಗೂ ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ಕ್ರಮವಹಿಸಬೇಕೆಂದು ತಾಕಿತು ಮಾಡಿದರು.
ಶಾಲಾ ಶಿಕ್ಷಣ ಇಲಾಖೆಯ ಡಿವೈಪಿಸಿ ವೆಂಕಟೇಶ್ ಮಾತನಾಡಿ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಕ್ರಮವಹಿಸಲಾಗಿದ್ದು, ಹೊರಗುಳಿದ 489 ಮಕ್ಕಳಲ್ಲಿ 27 ಮಕ್ಕಳು ಪ್ರವೇಶಾತಿ ಪಡೆಯುವುದು ಬಾಕಿ ಇದೆ ಎಂದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್.ಬಣಕಾರ್ ಮಾತನಾಡಿ, ಶಾಲೆಯಿಂದ ಹೊರಗುಳಿದ 11ರಿಂದ18 ವರ್ಷದ ಕಿಶೋರಿಯರ ಮಾಹಿತಿ ಸಂಗ್ರಹಿಸಲು ಈಗಾಗಲೇ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ್ ಕುಮಾರ್ ಮೀನಾ ಮಾತನಾಡಿ, ಬಹಳ ಸೂಕ್ಷ್ಮ ಹಾಗೂ ಜವಾಬ್ದಾರಿಯುತವಾಗಿ ಶಾಲೆಯಿಂದ ಹೊರಗುಳಿದ ಮಕ್ಕಳ ಮಾಹಿತಿ ಸಂಗ್ರಹಿಸಬೇಕು ಎಂದು ಹೇಳಿದರು.ಬಾಲಕಾರ್ಮಿಕರ ಪತ್ತೆಗೆ ನಿಯಮಿತವಾಗಿ ತಪಾಸಣಾ ಕಾರ್ಯವನ್ನು ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ಸಮನ್ವಯದೊಂದಿಗೆ ತಪಾಸಣೆ ಮಾಡಲಾಗುತ್ತಿದೆ. ಕಳೆದ 15 ದಿನಗಳಿಂದ ಯಾವುದೇ ಬಾಲಕಾರ್ಮಿಕ ಮಕ್ಕಳು ಕಂಡುಬಂದಿಲ್ಲ ಎಂದು ಕಾರ್ಮಿಕ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸವಿತಾ ಮಾತನಾಡಿ, 2023-24ನೇ ಸಾಲಿನಲ್ಲಿ 16 ಮಕ್ಕಳು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರಾಗಿದ್ದು, ಅದರಲ್ಲಿ ಇಬ್ಬರು ಮಕ್ಕಳಿಗೆ 18 ವರ್ಷ ಪೂರ್ಣಗೊಂಡಿದೆ. 13 ಮಕ್ಕಳು ಪೋಷಕರ ವಶದಲ್ಲಿದ್ದು, ವಿದ್ಯಾಭ್ಯಾಸದ ಬಗ್ಗೆ ಮಕ್ಕಳ ಕಲ್ಯಾಣ ಸಮಿತಿಗೆ ಅನುಪಾಲನೆ ವರದಿ ಸಲ್ಲಿಸಲಾಗಿದೆ. ಒಂದು ಮಗು ಮಕ್ಕಳ ಕಲ್ಯಾಣ ಸಮಿತಿಯಿಂದ ಪಶ್ಚಿಮ ಬಂಗಾಳ ರಾಜ್ಯದ ಕುಚ್ ಬಿಹಾರ್ ಜಿಲ್ಲೆ ಮಕ್ಕಳ ಕಲ್ಯಾಣ ಸಮಿತಿಗೆ ವರ್ಗಾವಣೆ ಮಾಡಲಾಗಿದೆ ಎಂದರು.ಸಮಿತಿ ಸದಸ್ಯ ಹೇಮೇಗೌಡರು ಮಾತನಾಡಿ, ನಿಗಮ ಮಂಡಳಿಯಲ್ಲಿರುವ ವಿವಿಧ ಯೋಜನೆಗಳಿಗೆ ಫಲಾನುಭವಿಗಳಾಗಲು ಇರುವ ಅರ್ಹತೆ, ಮಾನದಂಡಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಕೊರತೆ ಇರುವುದರಿಂದ ಈ ಕುರಿತು ಹೆಚ್ಚು ಅರಿವು ಮೂಡಿಸಬೇಕು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ವೆಂಕಟೇಶ್, ಸರ್ಕಾರ ಮತ್ತು ನಿಗಮ ಮಂಡಳಿಗಳಲ್ಲಿನ ಯೋಜನೆಗಳ ಮಾಹಿತಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತಾಗಬೇಕು. ಈ ಕುರಿತು ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು. ನಿಗಮ ಮಂಡಳಿಗಳಲ್ಲಿನ ಯೋಜನೆಗಳು, ಅರ್ಹತೆ, ಮಾನದಂಡದ ಕುರಿತು ಗ್ರಾಮ ಪಂಚಾಯಿತಿ ಪ್ರಕಟಣೆ ಫಲಕ, ಸ್ಥಳೀಯ ಪತ್ರಿಕೆಗಳಿಗೆ ಬಿಡುಗಡೆ ಮಾಡಿರುವ ಪತ್ರಿಕಾ ತುಣುಕುಗಳ ವಿವರದ ವರದಿ ನೀಡುವಂತೆ ನಿಗಮ ಮಂಡಳಿ ಜಿಲ್ಲಾ ವ್ಯವಸ್ಥಾಪಕರಿಗೆ ಸೂಚಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಮಾತನಾಡಿ, ಜಿಲ್ಲಾ ವ್ಯಾಪ್ತಿಯಲ್ಲಿ ಸರ್ಕಾರದಿಂದ ಪರವಾನಗಿ ಪಡೆಯದೇ ಮದ್ಯ ಮಾರಾಟ ಮಾಡುವ ಕುರಿತು ದೂರು ಬಂದ ಕೂಡಲೇ ಖಚಿತಪಡಿಸಿಕೊಂಡು ದಾಳಿ ಮಾಡಿ ಕಾನೂನು ಕ್ರಮಕೈಗೊಳ್ಳಲಾಗುತ್ತಿದೆ. ಒಟ್ಟು 179 ಪ್ರಕರಣ ದಾಖಲು ಮಾಡಲಾಗಿದ್ದು, ಜಿಲ್ಲೆಯ ಎಲ್ಲಾ ಠಾಣೆಯ ಬೀಟ್ ಸಿಬ್ಬಂದಿಗಳು ಗ್ರಾಮದಲ್ಲಿ ಗಸ್ತು ಮಾಡಿ ಪರವಾನಗಿ ಪಡೆಯದೇ ಮದ್ಯ ಮಾರಾಟ ಮಾಡುವವರ ಮಾಹಿತಿ ಕಲೆ ಹಾಕುವಂತೆ ಹಾಗೂ ಅಂಗಡಿ ಮಾಲೀಕರಿಗೆ ಅರಿವು ಮೂಡಿಸಲು ಸೂಚನೆ ನೀಡಲಾಗಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ ಮಾತನಾಡಿ, 2024ರ ಮಾರ್ಚ್ 04 ರಿಂದ ಜೂನ್ 26ರವರೆಗೆ ದೌರ್ಜನ್ಯ ನಿಯಂತ್ರಣ ಕಾಯ್ದೆ 1989 ಅಡಿಯಲ್ಲಿ ಪರಿಶಿಷ್ಟ ಜಾತಿಯ 25 ಪರಿಶಿಷ್ಟ ವರ್ಗದ 7 ಪ್ರಕರಣಗಳು ಸೇರಿದಂತೆ ಒಟ್ಟು 32 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಪರಿಶಿಷ್ಟ ಜಾತಿಯ 21 ಪುರುಷರು, 22 ಮಹಿಳೆಯರು, ಪರಿಶಿಷ್ಟ ವರ್ಗದ 6 ಪುರುಷರು, 6 ಮಹಿಳೆಯರು ಸೇರಿದಂತೆ 27 ಪುರುಷರು ಹಾಗೂ 28 ಮಹಿಳೆಯರು ಸೇರಿದಂತೆ ಒಟ್ಟು 55 ಸಂತ್ರಸ್ಥರಿಗೆ ಪರಿಹಾರ ಧನವನ್ನು ಆರ್‌ಟಿಜಿಎಸ್ ಮೂಲಕ ಪಾವತಿ ಮಾಡಲಾಗಿದೆ ಎಂದು ಹೇಳಿದರು.ಸಭೆಯಲ್ಲಿ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್, ಸಮಿತಿ ಸದಸ್ಯರಾದ ಚಿನ್ನಪ್ಪ, ಗುಜ್ಜಾರಪ್ಪ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.