ಗದಗ: ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಕಾನೂನುಬಾಹಿರ. ನಿಯಮ ಮೀರಿ ಮಾರಾಟ ಮುಂದುವರಿಸಿದರೆ ಅಂತಹ ಅಂಗಡಿಗಳನ್ನು ತೆರವುಗೊಳಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶಿರಹಟ್ಟಿ ತಹಸೀಲ್ದಾರ್ ರಾಘವೇಂದ್ರರಾವ್ ಎಚ್ಚರಿಸಿದ್ದಾರೆ.

ಕೊಟ್ಪಾ ಕಾಯ್ದೆ ಅನುಷ್ಠಾನದ ಅಂಗವಾಗಿ ಶಿರಹಟ್ಟಿ ಪಟ್ಟಣದಲ್ಲಿ ಆರೋಗ್ಯ, ಪೊಲೀಸ್, ಪಟ್ಟಣ ಪಂಚಾಯಿತಿ ಹಾಗೂ ಕಾರ್ಮಿಕ ಇಲಾಖೆಗಳ ಜಂಟಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ದಿಢೀರ್ ದಾಳಿ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು. ಕೊಟ್ಪಾ ಕಾಯ್ದೆ ಸೆಕ್ಷನ್ 6(ಬಿ) ಪ್ರಕಾರ ಶಾಲಾ, ಕಾಲೇಜುಗಳ 100 ಗಜಗಳ ವ್ಯಾಪ್ತಿಯಲ್ಲಿ ತಂಬಾಕು ಮಾರಾಟ ಸಂಪೂರ್ಣ ನಿಷೇಧಿಸಲಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದರಿಂದ ಸಾರ್ವಜನಿಕರು ಪರೋಕ್ಷ ಧೂಮಪಾನಿಗಳಾಗಿ ಕ್ಯಾನ್ಸರ್, ಪಾರ್ಶ್ವವಾಯು ಹಾಗೂ ಹೃದಯ ಸಂಬಂಧಿ ಭೀಕರ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಹೀಗಾಗಿ ಎಲ್ಲ ಹೋಟೆಲ್, ಬಾರ್ ಹಾಗೂ ಅಂಗಡಿಗಳಲ್ಲಿ ತಂಬಾಕು ನಿಷೇಧಿತ ನಾಮಫಲಕಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದರು.

ದಾಳಿಯ ವೇಳೆ ಕಾಯ್ದೆ ಉಲ್ಲಂಘಿಸಿದ ಮಾರಾಟಗಾರರಿಗೆ ಜಾಗೃತಿ ಮೂಡಿಸಿ, ಎಚ್ಚರಿಕೆ ನೀಡಿದ ತನಿಖಾದಳವು ಒಟ್ಟು ₹3200 ದಂಡ ವಸೂಲಿ ಮಾಡಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರ ಗೋಪಾಲ ಸುರಪುರ, ಡಾ. ಪವನ ಪಾಯದೆ, ಪೊಲೀಸ್ ಇಲಾಖೆಯ ಎಂ.ಎಂ. ಅಯ್ಯನಗೌಡರ, ಪಪಂನ ಎಂ.ಎಚ್. ನಾಯ್ಕರ್, ಸಾಮಾಜಿಕ ಕಾರ್ಯಕರ್ತೆ ಬಸಮ್ಮ ಚಿತ್ತರಗಿ, ಆರೋಗ್ಯ ಇಲಾಖೆಯ ಗಿರೀಶ್, ವೀರನಗೌಡರ, ರಮೇಶ, ಮಹೇಶ್ ಹಾಗೂ ಕಾರ್ಮಿಕ ಇಲಾಖೆಯ ಅಭಿನಂದನ ಉಪಸ್ಥಿತರಿದ್ದರು.ಮೇಗೂರು ರಸ್ತೆ ಕಾಮಗಾರಿಗೆ ಶಾಸಕ ಸಿ.ಸಿ. ಪಾಟೀಲ ಚಾಲನೆ


ಹೊಳೆಆಲೂರು: ಬಿಜೆಪಿ ಸರ್ಕಾರದ ಆಡಳಿತದ ಅವಧಿಯಲ್ಲಿ ಮತಕ್ಷೇತ್ರದಲ್ಲಿನ ಗ್ರಾಮಗಳ ರಸ್ತೆ ಸುಧಾರಣೆ ಡಾಂಬರೀಕರಣ ಹಾಗೂ ಸಿಸಿ ರಸ್ತೆಗಳ ಕಾಮಗಾರಿಗಳು ಸಂಪೂರ್ಣಗೊಂಡಿದ್ದು, ಮೇಗೂರು ಗ್ರಾಮದ ಡಾಂಬರೀಕರಣ ರಸ್ತೆ ತಾಂತ್ರಿಕ ದೋಷದಿಂದ ಹಿಂದುಳಿದ ಹಿನ್ನಲೆ ಪುನರಾರಂಭವಾಗಿ ₹200 ಲಕ್ಷ ವೆಚ್ಚದಲ್ಲಿ ಕಾಮಗಾರಿಗೆ ಭೂಮಿಪೂಜೆ ಕೈಗೊಳ್ಳಲಾಗಿದೆ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.ಸಮೀಪದ ಮೇಗೂರು ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಕಳೆದ ಹಲವು ವರ್ಷಗಳಲ್ಲಿ ದೇಶದ ಎಲ್ಲ ರಂಗಗಳಲ್ಲೂ ಅಭೂತಪೂರ್ವ ಪ್ರಗತಿ ಸಾಧಿಸಿದೆ. ಅದಕ್ಕೆ ನಾವೆಲ್ಲ ಸಾಕ್ಷಿಯಾಗಿದ್ದೇವೆ. ಕೇಂದ್ರ ಸರ್ಕಾರದ ಯೋಜನೆಗಳು ಮನೆ ಮನೆಗೆ ತಲುಪುವ ಹಾಗೇ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದು, ಗ್ರಾಮೀಣ ಭಾಗ ಸೇರಿದಂತೆ ದೇಶದ ತುಂಬಾ ಜಲಜೀವನ್ ಮಿಷನ್, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ, ಪ್ರಧಾನಮಂತ್ರಿ ಬೆಳೆವಿಮೆ ಯೋಜನೆ ಹಾಗೂ ರೈತರಿಗೆ ವರ್ಷಕ್ಕೆ ₹6 ಸಾವಿರ ನೀಡುವುದರ ಜತೆಗೆ ರೈತರಿಗಾಗಿ ಸಾಕಷ್ಟು ಯೋಜನೆ ಜಾರಿಗೆ ತಂದಿದೆ ಎಂದರು.ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಲಿಂಗರಾಜ ಪಾಟೀಲ, ಶಿವಕುಮಾರ ನೀಲಗುಂದ, ಅಶೋಕ ಹೆಬ್ಬಳ್ಳಿ, ಕೇದಾರಗೌಡ ಮಣ್ಣೂರು, ಶಿವಾನಂದ ಅರಹುಣಸಿ, ಸೋಮಲಿಂಗಪ್ಪ ಚರೆದ, ಆನಂದ ಅರಹುಣಸಿ, ಈರಪ್ಪ ದನದಮನಿ, ಅಣ್ಣಪ್ಪಗೌಡ ಪಾಟೀಲ, ಎಂ.ವಿ. ಗಾಣಗೇರ, ಜಿಲ್ಲಾ ಪಂಚಾಯಿತಿ ಎಂಜಿನಿಯರ್ ವಿಜಯಗೌಡ ಗೌಡರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.