ರಾಜ್ಯದಲ್ಲಿ ಪ್ರಸವಪೂರ್ವ ಲಿಂಗ ಪತ್ತೆ ಹಚ್ಚುವಿಕೆ ತಡೆಕಾಯ್ದೆ ಮತ್ತು ಎಂಟಿಪಿ ಕಾಯ್ದೆಗಳ ನಿಯಮಗಳನ್ನು ಉಲ್ಲಂಘಿಸುತ್ತಿರುವ ಆಸ್ಪತ್ರೆಗಳು ಹಾಗೂ ಸ್ಕ್ಯಾನಿಂಗ್ ಕೇಂದ್ರಗಳ ವಿರುದ್ಧ ಆರೋಗ್ಯ ಇಲಾಖೆ ಅಧಿಕಾರಿಗಳು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಉಪವಿಭಾಗಾಧಿಕಾರಿ ಸಂತೋಷ್ ಕುಮಾರ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
- ಎಸಿ ಸಂತೋಷಕುಮಾರ್ ಖಡಕ್ ಸೂಚನೆ । ಆರೋಗ್ಯ ಇಲಾಖೆಯಿಂದ ಪಿ.ಸಿ., ಪಿಎನ್‌ಡಿಟಿ ಜಿಲ್ಲಾಮಟ್ಟದ ಸಲಹಾ ಸಮಿತಿ ಸಭೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ರಾಜ್ಯದಲ್ಲಿ ಪ್ರಸವಪೂರ್ವ ಲಿಂಗ ಪತ್ತೆ ಹಚ್ಚುವಿಕೆ ತಡೆಕಾಯ್ದೆ ಮತ್ತು ಎಂಟಿಪಿ ಕಾಯ್ದೆಗಳ ನಿಯಮಗಳನ್ನು ಉಲ್ಲಂಘಿಸುತ್ತಿರುವ ಆಸ್ಪತ್ರೆಗಳು ಹಾಗೂ ಸ್ಕ್ಯಾನಿಂಗ್ ಕೇಂದ್ರಗಳ ವಿರುದ್ಧ ಆರೋಗ್ಯ ಇಲಾಖೆ ಅಧಿಕಾರಿಗಳು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಉಪವಿಭಾಗಾಧಿಕಾರಿ ಸಂತೋಷ್ ಕುಮಾರ್ ಕಟ್ಟುನಿಟ್ಟಿನ ಸೂಚನೆ ನೀಡಿದರು.ಶನಿವಾರ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಏರ್ಪಡಿಸಿದ್ದ ಪಿ.ಸಿ. ಮತ್ತು ಪಿ.ಎನ್.ಡಿ.ಟಿ. ಜಿಲ್ಲಾಮಟ್ಟದ ಸಲಹಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಿಯಮಗಳನ್ನು ಗಾಳಿಗೆ ತೂರಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಆಸ್ಪತ್ರೆಗಳ ದಾಖಲೆಗಳನ್ನು ಪರಿಶೀಲಿಸಲಾಗಿದ್ದು, ಹಲವು ಲೋಪದೋಷಗಳು ಬೆಳಕಿಗೆ ಬಂದಿವೆ. ಅಂತಹ ಆಸ್ಪತ್ರೆಗಳ ವಿರುದ್ಧ ಕಾನೂನು ರೀತ್ಯಾ ಕ್ರಮವಹಿಸಿ ಕಡತ ಸಲ್ಲಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು.ಗರ್ಭಪಾತ ಮಾತ್ರೆ ಮಾರುವಂತಿಲ್ಲ:
ವೈದ್ಯರ ಅಧಿಕೃತ ಚೀಟಿ ಇಲ್ಲದೇ 2ನೇ ತ್ರೈಮಾಸಿಕದ ಗರ್ಭಪಾತಕ್ಕೆ ಬಳಸಲಾಗುವ ಮಾತ್ರೆಗಳನ್ನು ಔಷಧಿ ಅಂಗಡಿಗಳಲ್ಲಿ ಕಾನೂನುಬಾಹಿರವಾಗಿ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇಂತಹ ಮಾತ್ರೆಗಳನ್ನು ಪಡೆದು ತೀವ್ರ ರಕ್ತಸ್ರಾವದಿಂದ ಆಸ್ಪತ್ರೆಗೆ ದಾಖಲಾಗುವ ಪ್ರಕರಣಗಳು ಹೆಚ್ಚುತ್ತಿವೆ. ಇದರ ಹೊಣೆಗಾರಿಕೆಯನ್ನು ಪತ್ತೆ ಹಚ್ಚುವುದು ಕಷ್ಟ ಎಂದು ಡಾ.ಷಣ್ಮುಗಪ್ಪ ಸಭೆ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಉಪವಿಭಾಗಾಧಿಕಾರಿಗಳು, ವೈದ್ಯರ ಅಧಿಕೃತ ಚೀಟಿ ಇಲ್ಲದೇ ಗರ್ಭಪಾತ ಮಾತ್ರೆ ಸೇರಿದಂತೆ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುವಂತಹ ಔಷಧಿಗಳನ್ನು ಮಾರಾಟ ಮಾಡದಂತೆ ಎಲ್ಲ ಔಷಧಿ ಕೇಂದ್ರಗಳಿಗೆ ಕಟ್ಟುನಿಟ್ಟಿನ ಮಾಹಿತಿ ನೀಡಿ, ಅನುಮಾನ ಬಂದಂತಹ ಔಷಧಿ ಕೇಂದ್ರಗಳನ್ನು ಪರಿಶೀಲಿಸಿ ಕಾನೂನು ಕ್ರಮ ಜರುಗಿಸಲು ಸೂಚಿಸಿದರು.ಸುಧಾರಿಸಿದ ಲಿಂಗಾನುಪಾತ:
ಜಿಲ್ಲೆಯಲ್ಲಿ ಲಿಂಗಾನುಪಾತದಲ್ಲಿ ಪ್ರಗತಿ ಕಂಡುಬಂದಿದೆ. ಪ್ರಸ್ತುತ ಅನುಪಾತವು 954ಕ್ಕೆ ತಲುಪಿದೆ ಎಂದು ಡಾ.ಷಣ್ಮುಗಪ್ಪ ಸಭೆಗೆ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಯಾವುದೇ ರೀತಿಯ ಕಾನೂನುಬಾಹಿರ ಹೆಣ್ಣುಭ್ರೂಣ ಹತ್ಯೆ ಪ್ರಕರಣಗಳು ನಡೆಯದಂತೆ ತಡೆಯಲು ತೀವ್ರ ನಿಗಾ ವಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಎಲ್ಲಾದರೂ ಕಾನೂನುಬಾಹಿರ ಲಿಂಗಪತ್ತೆ ಅಥವಾ ಭ್ರೂಣಹತ್ಯೆ ಕಂಡುಬಂದರೆ, ಆ ಬಗ್ಗೆ ಮಾಹಿತಿ ನೀಡುವ ಸಾರ್ವಜನಿಕರ ಹೆಸರನ್ನು ಅತ್ಯಂತ ಗೌಪ್ಯವಾಗಿಡಲಾಗುವುದು. ಅಷ್ಟೇ ಅಲ್ಲದೇ, ಅಂತಹ ದೂರುದಾರರಿಗೆ ಸೂಕ್ತ ಬಹುಮಾನ ಸಹ ನೀಡಲಾಗುವುದು. ಮಾಹಿತಿ ಲಭ್ಯವಾದ ತಕ್ಷಣವೇ ರಾಜ್ಯಮಟ್ಟದ ಅಧಿಕಾರಿಗಳ ಸಹಯೋಗದೊಂದಿಗೆ ದಾಳಿ ನಡೆಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.ಕೇವಲ ಸರ್ಕಾರಿ ಆಸ್ಪತ್ರೆಗಳು ಮಾತ್ರವಲ್ಲದೆ, ಎಲ್ಲ ಖಾಸಗಿ ಕ್ಲಿನಿಕ್ ಮತ್ತು ಸ್ಕ್ಯಾನಿಂಗ್ ಸೆಂಟರ್‌ಗಳು ಪಿಸಿಪಿಎನ್‌ಡಿಟಿ ಕಾಯ್ದೆಯಡಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು. ಸ್ಕ್ಯಾನಿಂಗ್ ವರದಿಗಳಲ್ಲಿ ಲಿಂಗಪತ್ತೆ ಮಾಡುವುದಿಲ್ಲ ಎಂಬ ಘೋಷಣಾ ಪತ್ರವನ್ನು ನಮೂದಿಸುವುದು ಕಡ್ಡಾಯ ಎಂದು ತಿಳಿಸಿದರು.
ತನಿಖೆ ವೇಳೆ ನಿಯಮ ಉಲ್ಲಂಘಿಸಿರುವುದು ದೃಢಪಟ್ಟ ಹಿನ್ನೆಲೆ ಜಿಲ್ಲೆಯ ಕೆಲವು ಪ್ರಮುಖ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಲು ಇಲಾಖೆ ತೀರ್ಮಾನಿಸಿದೆ. ಅಂತಹ ಕೇಂದ್ರಗಳಿಗೆ ತಕ್ಷಣವೇ ಶೋಕಾಸ್ (ಕಾರಣ ಕೇಳಿ) ನೋಟಿಸ್ ಜಾರಿಗೊಳಿಸಲು ಉಪವಿಭಾಗಾಧಿಕಾರಿ ಸಭೆಯಲ್ಲಿ ಆದೇಶಿಸಿದರು.ಸಭೆಯಲ್ಲಿ ಡಾ.ಕಾಳಪ್ಪನವರ್, ಡಾ.ಪ್ರವೀಣ್, ಡಾ. ಎಲ್.ಸುಮಿತ್ರ , ಡಾ. ಮಂಜುನಾಥ್ ಪಾಟೀಲ್, ಡಾ.ಸವಿತಾ ಇತರರು ಉಪಸ್ಥಿತರಿದ್ದರು.
- - -(ಬಾಕ್ಸ್‌ಗಳು)
* ಸ್ಕ್ಯಾನಿಂಗ್ ಕೇಂದ್ರಗಳು ಆನ್‌ಲೈನ್‌ನಲ್ಲಿ ಅಪ್‌ಡೇಟ್ ಮಾಡಬೇಕುಗರ್ಭಿಣಿಯರ ಸ್ಕ್ಯಾನಿಂಗ್ ಸಂದರ್ಭದಲ್ಲಿ ಕಡ್ಡಾಯವಾಗಿ ಭರ್ತಿ ಮಾಡಬೇಕಾದ ''''ಫಾರಂ ಎಫ್'''' ದಾಖಲೆಗಳನ್ನು ಹಲವು ಆಸ್ಪತ್ರೆಗಳು ಸರಿಯಾಗಿ ನಿರ್ವಹಿಸುತ್ತಿಲ್ಲ. ಹಲವು ಪ್ರಕರಣಗಳಲ್ಲಿ ಅರ್ಧಂಬರ್ಧ ಮಾಹಿತಿ ತುಂಬಲಾಗುತ್ತಿದೆ. ಗರ್ಭಧಾರಣೆಯ ವಾರ ಮತ್ತು ನಿಖರ ವಿವರಗಳನ್ನು ನಮೂದಿಸುತ್ತಿಲ್ಲ. ಡೇಟಾ ಎಂಟ್ರಿ ಆಪರೇಟರ್‌ಗಳ ಕೊರತೆಯನ್ನು ನೆಪವಾಗಿಟ್ಟುಕೊಂಡು ತಪ್ಪು ಮಾಹಿತಿ ದಾಖಲಿಸುವುದನ್ನು ಒಪ್ಪಲು ಸಾಧ್ಯವಿಲ್ಲ. ತಪ್ಪು ಮಾಹಿತಿಗೆ ಆಯಾ ರೇಡಿಯಾಲಜಿಸ್ಟ್ ಹಾಗೂ ಆಸ್ಪತ್ರೆಯ ಮುಖ್ಯಸ್ಥರೇ ನೇರ ಹೊಣೆಗಾರರಾಗಲಿದ್ದಾರೆ. ಎಲ್ಲ ಸ್ಕ್ಯಾನಿಂಗ್ ಕೇಂದ್ರಗಳು ಗರ್ಭಿಣಿಯರ ಸಂಪೂರ್ಣ ವಿವರಗಳನ್ನು ಕಡ್ಡಾಯವಾಗಿ ಆನ್‌ಲೈನ್‌ನಲ್ಲಿ ಅಪ್‌ಡೇಟ್ ಮಾಡಬೇಕು, ಇಲ್ಲದಿದ್ದರೆ ಪರವಾನಗಿ ರದ್ದುಗೊಳಿಸಿ, ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಉಪವಿಭಾಗಾಧಿಕಾರಿ ಸಂತೋಷ್ ಕುಮಾರ್ ಎಚ್ಚರಿಕೆ ನೀಡಿದರು.
- - -* ಅನಗತ್ಯ ಸ್ಕ್ಯಾನಿಂಗ್‌ಗೆ ಬ್ರೇಕ್:
ಗರ್ಭಧಾರಣೆಯ ಮೊದಲ ತ್ರೈಮಾಸಿಕದಲ್ಲಿ (ಮುಖ್ಯವಾಗಿ 10 ವಾರಗಳ ಒಳಗೆ) ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಇನ್ನು ಮುಂದೆ ಖಾಸಗಿ ಅಥವಾ ಸರ್ಕಾರಿ ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಸ್ಕ್ಯಾನಿಂಗ್ ಮಾಡಲು ತಾಯಿ ಕಾರ್ಡ್ ಮತ್ತು ಆಧಾರ್ ಕಾರ್ಡ್ ಕಡ್ಡಾಯಗೊಳಿಸಲಾಗುವುದು. ಸೂಕ್ತ ಗುರುತಿನ ಚೀಟಿ ಇಲ್ಲದೆ ಯಾವುದೇ ಸ್ಕ್ಯಾನಿಂಗ್ ಮಾಡಲು ಅವಕಾಶ ನೀಡಬಾರದು. ಗರ್ಭಾವಸ್ಥೆಯ ಅವಧಿಯಲ್ಲಿ ಸಾಮಾನ್ಯವಾಗಿ ಶಿಫಾರಸು ಮಾಡಲಾಗುವ ಮೂರು ಪ್ರಮುಖ ಸ್ಕ್ಯಾನಿಂಗ್‌ಗಳನ್ನು (ಎನ್‌ಟಿ ಸ್ಕ್ಯಾನ್, ಅನಾಮಲಿ ಸ್ಕ್ಯಾನ್ ಮತ್ತು ಗ್ರೋತ್ ಸ್ಕ್ಯಾನ್) ಹೊರತುಪಡಿಸಿ, ವೈದ್ಯಕೀಯ ತುರ್ತು ಸಂದರ್ಭಗಳನ್ನು ಬಿಟ್ಟು ಅನಗತ್ಯ ಸ್ಕ್ಯಾನಿಂಗ್‌ಗಳಿಗೆ ಕಡಿವಾಣ ಹಾಕುವಂತೆ ಉಪವಿಭಾಗಾಧಿಕಾರಿ ತಿಳಿಸಿದರು.- - -
-30ಕೆಡಿವಿಜಿ38:ದಾವಣಗೆರೆಯಲ್ಲಿ ಉಪವಿಭಾಗಾಧಿಕಾರಿ ಸಂತೋಷ್ ಕುಮಾರ್ ಅಧ್ಯಕ್ಷತೆಯಲ್ಲಿ ಪಿ.ಸಿ. ಮತ್ತು ಪಿ.ಎನ್.ಡಿ.ಟಿ. ಜಿಲ್ಲಾಮಟ್ಟದ ಸಲಹಾ ಸಮಿತಿ ಸಭೆ ನಡೆಯಿತು.