ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕಳ್ಳಬಟ್ಟಿ ತಯಾರಿ, ಸಾಗಾಟ ಮತ್ತು ಮಾರಾಟವನ್ನು ಸಂಪೂರ್ಣವಾಗಿ ತಡೆಗಟ್ಟಲು ಪರಿಣಾಮಕಾರಿಯಾಗಿ ಜಾರಿ ಮತ್ತು ತನಿಖಾ ಕಾರ್ಯಗಳನ್ನು ನಡೆಸುವಂತೆ ಜಿಲ್ಲಾಧಿಕಾರಿ ಸಂಗಪ್ಪ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ಕಳ್ಳಬಟ್ಟಿ ನಿರ್ಮೂಲನೆ ಕುರಿತು ರಚಿಸಲಾದ ಜಿಲ್ಲಾ ಮಟ್ಟದ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳ್ಳಬಟ್ಟಿ ನಿರ್ಮೂಲನೆಗೆ ಸಂಬಂಧಪಟ್ಟ ಇಲಾಖೆಗಳ ಜಂಟಿ ಸಹಭಾಗಿತ್ವದಲ್ಲಿ ಕಾರ್ಯಾಚರಣೆ, ಅರಿವು ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು. ಗ್ರಾಮ ಮಟ್ಟದಲ್ಲಿ ಅನುಮಾನಾಸ್ಪದ ಕಳ್ಳಬಟ್ಟಿ ಚಟುವಟಿಕೆಗಳ ಬಗ್ಗೆ ತಕ್ಷಣ ಮಾಹಿತಿ ಸಂಗ್ರಹಿಸುವ ಕೆಲಸವಾಗಬೇಕು ಎಂದು ತಿಳಿಸಿದರು.

ಕಳ್ಳಬಟ್ಟಿ ಸೇವನೆಯಿಂದ ಜನರ ಆರೋಗ್ಯದ ಬಗ್ಗೆ ಗಂಭೀರವಾದ ಹಾನಿಯಾಗುತ್ತಿದೆ. ಇಂತಹ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು. ಸಾರ್ವಜನಿಕರೂ ಸಹಕರಿಸುವ ಮೂಲಕ ಮಾಹಿತಿ ನೀಡಲು ಮುಂದಾಗಬೇಕಿದೆ. ಅಕ್ರಮ ಚಟುವಟಿಕೆಗಳ ಬಗ್ಗೆ ನಿರಂತರ ಪರಿಶೀಲನೆ ನಡೆಸುವ ಕೆಲಸವಾಗಬೇಕು. ಅಂದಾಗ ಮಾತ್ರ ಕಳ್ಳಬಟ್ಟಿ ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ, ಗ್ರಾಪಂ ಮಟ್ಟದಲ್ಲಿ ಗ್ರಾಮ ಪಂಚಾಯತಿ ಮತ್ತು ಸ್ವಸಹಾಯ ಸಂಘಗಳ ಸಹಯೋಗದೊಂದಿಗೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ಕಳ್ಳಬಟ್ಟಿ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು. ಇದರ ಜೊತೆಗೆ ಇಂತಹ ಚಟುವಟಿಕೆಗಳನ್ನು ನಡೆಸುವವರಿಗೆ ಕಾನೂನಿನಡಿ ಇರುವ ಶಿಕ್ಷೆ ಹಾಗೂ ದಂಡದ ಬಗ್ಗೆ ತಿಳಿಸುವ ಕಾರ್ಯವಾಗಬೇಕು. ಗ್ರಾಮ ಸಭೆಗಳಲ್ಲಿ ಇದರ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಕೆಲಸ ಮಾಡುವಂತೆ ನಿರ್ದೇಶಿಸಿದರು.


ಅಬಕಾರಿ ಉಪ ಆಯುಕ್ತ ತಿಪ್ಪೆಸ್ವಾಮಿ ಡಿ.ಎನ್. ಮಾತನಾಡಿ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಏಪ್ರಿಲ್-2025 ರಿಂದ ಜನವರಿ-2026 ವರೆಗೆ ಒಟ್ಟು 1341 ಕಳ್ಳಬಟ್ಟಿಗಳ ಮೇಲೆ ದಾಳಿ ನಡೆಸಿದ್ದು, 110 ಪ್ರಕರಣಗಳನ್ನು ದಾಖಲಿಸುವ ಮೂಲಕ 110 ಜನ ಆರೋಪಿಗಳನ್ನು ಬಂಧಿಸಲಾಗಿದೆ. 799 ಲೀಟರ್ ಕಳ್ಳಬಟ್ಟಿ ಸಾರಾಯಿ, 1086 ಕೆಜಿ ಬೆಲ್ಲದ ಕೊಳೆ ಜೊತೆಗೆ 1 ಆಟೋ, 33 ಟಿಡಬ್ಲೂ, ಒಂದು ಬೈಸಿಕಲ್ ವಶಕ್ಕೆ ಪಡೆಯಲಾಗಿದೆ. 6 ಪ್ರಕರಣಗಳಿಗೆ 11 ಜನ ಆರೋಪಿಗಳಿಗೆ ಪ್ರತಿಯೊಬ್ಬರಿಗೂ 1 ವರ್ಷ ಕಠಿಣ ಶಿಕ್ಷೆ, ₹10 ಸಾವಿರ ದಂಡವನ್ನು ನ್ಯಾಯಾಲಯ ವಿಧಿಸಿದೆ. ಅಲ್ಲದೇ ಎನ್‌ಡಿಪಿಎಸ್ ಪ್ರಕರಣಗಳಲ್ಲಿ ಇಲ್ಲಿಯವರೆಗೆ 2.199 ಕೆಜಿ ಗಾಂಜಾ, 11 ಹಸಿ ಗಾಂಜಾ ಗಿಡಗಳು, 1 ದ್ವಿಚಕ್ರ ವಾಹನ, 1 ಮೊಬೈಲ್ ಜೊತೆಗೆ 7 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಭೆಗೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ ಸ್ವಪ್ನಿಲ್ ಅಹಿರೆ, ಅಬಕಾರಿ ಅಧೀಕ್ಷಕ ಹನಮಪ್ಪ ಭಜಂತ್ರಿ, ಆರೋಗ್ಯ ಇಲಾಖೆಯ ಶಿವನಗೌಡ ಪಾಟೀಲ ಸೇರಿದಂತೆ ಜಿಲ್ಲೆಯ ಎಲ್ಲ ವಲಯದ ಅಬಕಾರಿ ನಿರೀಕ್ಷಕರು ಉಪಸ್ಥಿತರಿದ್ದರು.