ಸೌಹಾರ್ದತೆಗೆ ಭಂಗ ತಂದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ: ಶಾಸಕ ನಾರಾಯಣಸ್ವಾಮಿ

| Published : Sep 08 2025, 01:00 AM IST

ಸಾರಾಂಶ

ಅವರವರ ಹಬ್ಬಗಳನ್ನು ಶಾಂತಿಯಿಂದ ಯಾರ ಭಾವನೆಗಳಿಗೂ ಧಕ್ಕೆಯಾಗದಂತೆ ಆಚರಿಸಬೇಕು, ಅದು ಬಿಟ್ಟು ಕೋಮುಗಲಭೆ ಸೃಷ್ಟಿಸುವಂತೆ ನಡೆದುಕೊಂಡರೆ ಪೊಲೀಸರು ಕಠಿಣ ಕ್ರಮಕೈಗೊಳ್ಳುವರು.

ಬಂಗಾರಪೇಟೆ: ಕಳೆದ ಶುಕ್ರವಾರದಂದು ಈದ್ ಮಿಲಾದ್ ಹಬ್ಬದ ಹಿನ್ನೆಲೆ ಪಟ್ಟಣದಲ್ಲಿ ನಡೆದ ಮೆರವಣಿಗೆಯಲ್ಲಿ ಕೆಲ ಯುವಕರು ಹೊರಗಿನಿಂದ ಬಂದು ಅತೀರೇಕದ ವರ್ತನೆ ಮಾಡಿ ಎರಡು ಸಮುದಾಯಗಳ ನಡುವೆ ಸಂಘರ್ಷ ಉಂಟು ಮಾಡಲು ಹುನ್ನಾರ ನಡೆಸಿದ್ದು ನೋವಿನ ಸಂಗತಿಯಾಗಿದೆ, ನಾನು ಕ್ಷೇತ್ರದ ಕಾವಲುಗಾರನಾಗಿದ್ದು ಅಹಿತಕರ ಘಟನೆಗಳಿಗೆ ಪುಷ್ಟಿ ನೀಡದೆ ಅವರ ವಿರುದ್ಧ ಕಠಿಣ ಕ್ರಮವಹಿಸಲಾಗುವುದು ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಭರವಸೆ ನೀಡಿದರು.

ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೆಲ ಕಿಡಿಗೇಡಿಗಳು ಹೊರಗಿನಿಂದ ಬಂದು ಪ್ಯಾಲೆಸ್ತೀನ್ ಬಾವುಟ ಪ್ರದರ್ಶಿಸಿ ಅಶಾಂತಿ ಉಂಟು ಮಾಡಲು ಯತ್ನಿಸಿದ್ದಾರೆ, ಪಟ್ಟಣದಲ್ಲಿ ಎಲ್ಲಾ ಧರ್ಮೀಯರು ಒಂದಾಗಿ ಬಾಳ್ವೆ ಮಾಡುತ್ತಿದ್ದಾರೆ. ಈ ಹಿಂದೆ ಎಂದೂ ಇಂತಹ ಘಟನೆ ನಡೆದಿರಲಿಲ್ಲ, ಈ ಬಾರಿ ಕೆಲ ಕಿಡಿಗೇಡಿಗಳಿಂದ ನಡೆದಿದೆ, ತಪ್ಪು ಯಾರೇ ಮಾಡಿದರೂ ಸಹಿಸಲ್ಲ ಎಂದು ಎಚ್ಚರಿಕೆ ನೀಡಿದರು. ಅವರವರ ಹಬ್ಬಗಳನ್ನು ಶಾಂತಿಯಿಂದ ಯಾರ ಭಾವನೆಗಳಿಗೂ ಧಕ್ಕೆಯಾಗದಂತೆ ಆಚರಿಸಬೇಕು, ಅದು ಬಿಟ್ಟು ಕೋಮುಗಲಭೆ ಸೃಷ್ಟಿಸುವಂತೆ ನಡೆದುಕೊಂಡರೆ ಪೊಲೀಸರು ಕಠಿಣ ಕ್ರಮಕೈಗೊಳ್ಳುವರು. ಶಾಸಕನಾಗಿ ೧೨ ವರ್ಷಗಳ ಅಧಿಕಾರದ ಅವಧಿಯಲ್ಲಿ ಎಂದೂ ಇಂತಹ ಪ್ರಕರಣ ನಡೆಯಲು ಬಿಟ್ಟಿಲ್ಲ, ನಾನು ಕ್ಷೇತ್ರದ ಕಾವಲುಗಾರನಾಗಿದ್ದು ಅಹಿತರಕರ ಘಟನೆಗಳಿಗೆ ಅವಕಾಶ ನೀಡದಂತೆ ಕಾವಲು ಕಾಯುತ್ತಿರುವೆ. ಈದ್ ಮಿಲಾದ್ ವೇಳೆ ನಡೆದ ಘಟನೆಗೆ ಸಂಬಂಧಿಸಿದಂತೆ ಹಿಂದೂ- ಮುಸ್ಲಿಂ ಸಮುದಾಯದ ಮುಖಂಡರ ಸಭೆಯನ್ನು ಪೊಲೀಸರ ಸಮ್ಮುಖದಲ್ಲಿ ನಡೆಸಿ, ಎರಡೂ ಧರ್ಮೀಯರ ನಡುವೆ ಶಾಂತಿ- ಸೌಹಾರ್ದತೆ ಮೂಡಿಸುವೆ ಎಂದರು.

ಪಟ್ಟಣ ಸೌಹಾರ್ದತೆಗೆ ಹೆಸರುವಾಸಿಯಾಗಿದ್ದು, ಈ ಹೆಸರಿಗೆ ಮಸಿಯನ್ನು ಯಾರೂ ಬಳಿಯದಂತೆ ಕಾಪಾಡಬೇಕೆಂದು ಮನವಿ ಮಾಡಿದರು.