ಕಂಪ್ಲಿ: ಶಾಲೆಗಳಲ್ಲಿ ಬಿಸಿಯೂಟ ತಯಾರಿಕೆಯಲ್ಲಿ ಸರ್ಕಾರ ಹಾಗೂ ಇಲಾಖೆಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಬಳ್ಳಾರಿ ಜಿಲ್ಲಾ ಬಿಸಿಯೂಟ ಸಹಾಯಕ ನಿರ್ದೇಶಕ ಶಿವನನಾಯ್ಕ ತಿಳಿಸಿದರು.
ಪಟ್ಟಣದ ಎಸ್.ಎನ್. ಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಅಡುಗೆ ಸಹಾಯಕರಿಗೆ ವಾರ್ಷಿಕ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ನೀಡುವ ಆಹಾರ ಪೌಷ್ಟಿಕವಾಗಿರುವುದರ ಜೊತೆಗೆ ಸ್ವಚ್ಛತೆಯೂ ಅತ್ಯಂತ ಮುಖ್ಯವಾಗಿದ್ದು, ಅಡುಗೆ ಸಹಾಯಕರು ಕರ್ತವ್ಯನಿಷ್ಠೆ, ಸಮಯಪಾಲನೆ ಹಾಗೂ ಶಿಸ್ತು ಪಾಲಿಸುವಲ್ಲಿ ಜಾಗೃತಿ ವಹಿಸಬೇಕು. ಆಹಾರ ಪದಾರ್ಥಗಳ ಬಳಕೆಯಲ್ಲಿ ಮಿತವ್ಯಯ ಸಾಧಿಸುವುದರ ಜೊತೆಗೆ ಯಾವುದೇ ವ್ಯರ್ಥತೆಯನ್ನು ತಪ್ಪಿಸುವುದು ಅಗತ್ಯ ಎಂದು ಹೇಳಿದರು.ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಎನ್. ಚನ್ನಬಸವರಾಜ ಮಾತನಾಡಿ, ಅಡುಗೆ ಸಹಾಯಕರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ದಿನನಿತ್ಯ ಸ್ನಾನ ಮಾಡಿ ದೈಹಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ತರಕಾರಿ ಹಾಗೂ ಪಡಿತರ ಸಾಮಗ್ರಿಗಳನ್ನು ಬಳಸುವಾಗ ಸ್ವಚ್ಛತೆಯತ್ತ ಹೆಚ್ಚಿನ ಗಮನ ನೀಡಬೇಕು. ಆಹಾರ ತಯಾರಿಕೆ ಹಾಗೂ ಬಡಿಸುವ ಸಂದರ್ಭದಲ್ಲಿ ಶುದ್ಧತೆ ಮತ್ತು ಆರೋಗ್ಯದ ನಿಯಮಗಳನ್ನು ಪಾಲಿಸಿದರೆ ವಿದ್ಯಾರ್ಥಿಗಳ ಆರೋಗ್ಯ ಕಾಪಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಅಡುಗೆ ಮಾಡುವ ಸ್ಥಳವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಹಾಗೂ ಮಾನಸಿಕ ಸದೃಢತೆಯೊಂದಿಗೆ ಕರ್ತವ್ಯ ನಿರ್ವಹಿಸುವುದು ಮುಖ್ಯ ಎಂದು ಹೇಳಿದರು.ಕಂಪ್ಲಿಯ ಶರತ್ ಗ್ಯಾಸ್ ಏಜೆನ್ಸಿಯ ಮಾಲೀಕ ಎಚ್. ಶ್ರೀನಿವಾಸ ಗ್ಯಾಸ್ ಸಿಲಿಂಡರ್ ಸುರಕ್ಷಿತ ಬಳಕೆ ಕುರಿತು ವಿವರವಾಗಿ ತಿಳಿಸಿದರು. ಅಡುಗೆ ಮಾಡುವಾಗ ಗ್ಯಾಸ್ ಸಿಲಿಂಡರ್ ಹಾಗೂ ಸ್ಟೌವ್ ಬಳಕೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು. ಅನಿಲದ ಮಿತವ್ಯಯ ಬಳಕೆ ಮತ್ತು ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಅಪಘಾತಗಳನ್ನು ತಪ್ಪಿಸಬಹುದು ಎಂದು ಸಲಹೆ ನೀಡಿದರು.
ಕಾರ್ಯಾಗಾರದಲ್ಲಿ ತಾಲೂಕಿನ ವಿವಿಧ ಶಾಲೆಗಳಿಂದ ಬಂದಿದ್ದ 180ಕ್ಕೂ ಹೆಚ್ಚು ಅಡುಗೆ ಸಹಾಯಕಿಯರು ಭಾಗವಹಿಸಿದ್ದರು. ಮಧ್ಯಾಹ್ನ ಬಿಸಿಯೂಟ ಯೋಜನೆಯ ಎಫ್‌ಡಿಎ ನರಸಿಂಹಮೂರ್ತಿ, ಸಿಆರ್‌ಪಿಗಳಾದ ಎ.ಎಸ್. ಭೂಮೇಶ್ವರ, ಎನ್.ಬಿ. ಪಂಡಿತಾರಾಧ್ಯ, ಮುಖ್ಯಶಿಕ್ಷಕರಾದ ಹನುಮನಗೌಡ, ಎಚ್.ಪಿ. ಸೋಮಶೇಖರ, ಜೋಗಿನಾಯ್ಕ ರುದ್ರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.