ರಾಮನಗರ: ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ರಸ್ತೆ ಅಪಘಾತಗಳನ್ನು ತಡೆಗಟ್ಟಬಹುದು. ರಸ್ತೆ ಸುರಕ್ಷತೆಯ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಪಿ. ಆರ್.ಸವಿತಾ ಹೇಳಿದರು.
ರಾಮನಗರ: ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ರಸ್ತೆ ಅಪಘಾತಗಳನ್ನು ತಡೆಗಟ್ಟಬಹುದು. ರಸ್ತೆ ಸುರಕ್ಷತೆಯ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಪಿ. ಆರ್.ಸವಿತಾ ಹೇಳಿದರು.
ನಗರದ ಆರ್.ಟಿ.ಓ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್, ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯ ಸಹಯೋಗದಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿ ವತಿಯಿಂದ ನಡೆದ 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಸಮಾರಂಭ ಉದ್ಘಾಟಿಸಿದ ಅವರು, ಎಲ್ಲರೂ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿ ರಸ್ತೆ ಅಪಘಾತಗಳನ್ನು ತಡೆಯಲು ಸಹಕರಿಸಬೇಕು ಎಂದು ಹೇಳಿದರು.ರಸ್ತೆಗಳ ನಿರ್ಮಾಣ ಹೆಚ್ಚಾದಂತೆ ಅಪಘಾತಗಳ ಸಂಖ್ಯೆಯೂ ಹೆಚ್ಚಾಗುತ್ತಿವೆ. ಇತ್ತೀಚಿನ ದಿನಗಳಲ್ಲಿ ಅಪಘಾತದಿಂದ ಅನೇಕ ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ರಸ್ತೆ ನಿಯಮಗಳನ್ನು ಪಾಲಿಸುವುದೊಂದೇ ಜೀವ ರಕ್ಷಣೆಗಿರುವ ಸಾಧನ. ನಮ್ಮನ್ನೇ ನಂಬಿಕೊಂಡಿರುವ ಕುಟುಂಬದ ಕ್ಷೇಮವನ್ನು ವಾಹನ ಸವಾರರು ಸದಾ ನೆನಪಿನಲ್ಲಿಡಬೇಕು ಎಂದು ಕಿವಿಮಾತು ಹೇಳಿದರು.
ಜೀವಕ್ಕಿಂತ ಮುಖ್ಯವಾದದ್ದು ಯಾವುದೂ ಇಲ್ಲ. ಚಿಕ್ಕ ಚಿಕ್ಕ ಅಂಶಗಳು ಜೀವ ರಕ್ಷಣೆ ಮಾಡುತ್ತದೆ. ನಾವೆಷ್ಟೇ ಪ್ರಾವಿಣ್ಯತೆ ಸಾಧಿಸಿದ್ದರೂ ವಾಹನ ಚಾಲನೆ ಮಾಡುವಾಗ ಮೊಬೖೆಲ್ ಬಳಕೆ ಮಾಡಬಾರದು. ವಾಹನಗಳನ್ನು ಸುಸ್ಥಿತಿಯಲ್ಲಿ ಇಡಬೇಕು. ಮದ್ಯ ಸೇವಿಸಿ ವಾಹನ ಚಾಲನೆ ಮಾಡಬಾರದು. ಚಾಲಕರಿಗೆ ತಾಳ್ಮೆ ಮುಖ್ಯವಾಗಿದ್ದು, ಭ್ರಮೆಯಲ್ಲಿ ವಾಹನ ಚಾಲನೆ ಮಾಡಬಾರದು. ರಸ್ತೆ ಸುರಕ್ಷತಾ ಕ್ರಮಗಳಲ್ಲಿ ರಸ್ತೆ ಸಂಚಾರಿ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ತಿಳಿಸಿದರು.ರಸ್ತೆ ಸುರಕ್ಷತೆಯ ಬಗ್ಗೆ ಜನರಿಗೆ ಸಮಗ್ರ ಮಾಹಿತಿ ನೀಡಬೇಕು. ಯುವಜನರಲ್ಲಿ ಕಾನೂನು ಅರಿವಿನ ಕೊರತೆಯಿದ್ದು, ಶಾಲಾ -ಕಾಲೇಜು ಮಕ್ಕಳಿಗೆ ಸಂಚಾರ ನಿಯಮದ ಬಗ್ಗೆ ಅರಿವು ಮೂಡಿಸಬೇಕು. ಅತಿಯಾದ ವೇಗಮತ್ತು ಮದ್ಯ ಸೇವಿಸಿ, ಅಜಾಗರೂಕತೆಯಿಂದ ವಾಹನ ಚಲಾಯಿಸುವುದು ಅಪಘಾತಕ್ಕೆ ಕಾರಣವಾಗುತ್ತಿದೆ ಎಂದು ಸವಿತಾ ಹೇಳಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮಚಂದ್ರಯ್ಯ ಮಾತನಾಡಿ, ಪೊಲೀಸ್ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳು ದಂಡ ವಿಧಿಸಿದರೆ ಸಾರ್ವಜನಿಕರಲ್ಲಿ ಅಸಡ್ಡೆ ಭಾವನೆ ಇದೆ. ನಮ್ಮಗಳ ಉದ್ದೇಶ ಜನರ ಜೀವ ರಕ್ಷಣೆ ಮಾಡುವುದೇ ಹೊರತು ಸರ್ಕಾರಕ್ಕೆ ಹಣ ಸಂಗ್ರಹಿಸಿ ಕೊಡುವುದಲ್ಲ. ಜನರಿಗಾಗಿ ಕಾನೂನಿದ್ದು, ಜನರ ರಕ್ಷಣೆಗಾಗಿ ಇಲಾಖೆ ಇದೆ ಎಂಬ ಅರಿವು ಜನರಲ್ಲಿ ಮೂಡಬೇಕಿದೆ ಎಂದು ತಿಳಿಸಿದರು.ಪೋಷಕರು ತಮ್ಮ ಮಕ್ಕಳು ವಾಹನ ಚಾಲನೆಯನ್ನು ಕಲಿಯಲಿ ಎಂಬ ಉದ್ದೇಶದಿಂದ ಅಪ್ರಾಪ್ತ ಮಕ್ಕಳಿಗೆ ವಾಹನವನ್ನು ನೀಡುತ್ತಿದ್ದಾರೆ. ಇದರಿಂದ ಅದೆಷ್ಟೊ ಅಪ್ರಾಪ್ತ ಮಕ್ಕಳು ಅಪಘಾತಕ್ಕೆ ಬಲಿಯಾಗಿದ್ದಾರೆ. ಇದರ ಬಗ್ಗೆ ಪೋಷಕರು ಜಾಗೃತಿ ವಹಿಸಬೇಕು. ಇಲಾಖೆ ವರದಿಗಳ ಪ್ರಕಾರ ವಾಹನ ಅಪಘಾತದಲ್ಲಿ 438 ಮಂದಿ ಸಾವನ್ನಪ್ಪಿದ್ದು, ಅವರನ್ನೇ ನಂಬಿದ್ದ ಕುಟುಂಬಗಳು ಕಣ್ಣೀರು ಹಾಕುತ್ತಿವೆ. ಇದಕ್ಕೆ ಹೊಣೆ ಯಾರು ಎಂದು ಪ್ರಶ್ನಿಸಿದರು.
ಸಂಚಾರಿ ನಿಯಮಗಳನ್ನು ಪಾಲಿಸುವುದರಿಂದ ಸರ್ಕಾರಕ್ಕೆ ದಂಡವನ್ನು ಕಟ್ಟುವ ಅನಿವಾರ್ಯತೆ ಇರುವುದಿಲ್ಲ. ವಾಹನ ಚಲಾವಣೆ ಮಾಡುವಾಗ ಎಚ್ಚರಿಕೆ ವಹಿಸಿ ಜಾಗೃತವಾಗಿ ವಾಹನ ಚಲಾಯಿಸಿ. ರಸ್ತೆ ಸಂಚಾರಿ ನಿಯಮಗಳನ್ನು ಪಾಲಿಸುವ ಮೂಲಕ ಅಪಘಾತಗಳನ್ನು ಕಡಿಮೆ ಮಾಡೋಣ ಎಂದು ರಾಮಚಂದ್ರಯ್ಯ ಸಲಹೆ ನೀಡಿದರು.ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿ ಟಿ. ಎ. ಸತೀಶ್ ಬಾಬು ಮಾತನಾಡಿದರು. ಈ ಸಂದರ್ಭದಲ್ಲಿ 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಸಂಚಾರಿ ಪ್ರಚಾರ ವಾಹನಕ್ಕೂ ಹಸಿರು ನಿಶಾನೆ ತೋರಿಸಲಾಯಿತು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಚಂದ್ರಯ್ಯ, ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯ ಸದಸ್ಯ ಕಾರ್ಯದರ್ಶಿಯಾದ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಶಂಕರ್, ವಕೀಲರ ಸಂಘ ಅಧ್ಯಕ್ಷ ಕೆಂಪಯ್ಯ, ವಿದ್ಯಾ, ಕುಮಾರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.6ಕೆಆರ್ ಎಂಎನ್ 1,2.ಜೆಪಿಜಿ
1.ರಾಮನಗರದ ಆರ್.ಟಿ.ಓ ಕಚೇರಿ ಆವರಣದಲ್ಲಿ ನಡೆದ 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಸಮಾರಂಭವನ್ನು ಹಿರಿಯ ಸಿವಿಲ್ ನ್ಯಾಯಾಧೀಶರಾದ ಪಿ. ಆರ್.ಸವಿತಾ ಉದ್ಘಾಟಿಸಿದರು.2.ರಾಮನಗರದ ಆರ್.ಟಿ.ಓ ಕಚೇರಿ ಆವರಣದಲ್ಲಿ ನಡೆದ 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಸಮಾರಂಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪಿ. ಆರ್.ಸವಿತಾರವರು ಸಂಚಾರಿ ಪ್ರಚಾರ ವಾಹನಕ್ಕೆ ಹಸಿರು ನಿಶಾನೆ ತೋರಿಸಿದರು.