ಸಾರಾಂಶ
ಕೊಪ್ಪಳ:
ಕೇಂದ್ರ ಪುರಸ್ಕೃತ ಯೋಜನೆ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಹಾಗೂ ಫಲಾನುಭವಿಗಳಿಗೆ ತೊಂದರೆಯಾಗದಂತೆ ತಲುಪಿಸಬೇಕೆಂದು ಸಂಸದ ರಾಜಶೇಖರ ಹಿಟ್ನಾಳ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.ಜಿಲ್ಲಾ ಪಂಚಾಯಿತಿಯಲ್ಲಿ ಗುರುವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ (ದಿಶಾ) 2024-25ನೇ ಸಾಲಿನ 3ನೇ ತ್ರೈಮಾಸಿಕದ ಕೇಂದ್ರ ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಫಸಲ್ ಬಿಮಾ ಯೋಜನೆ 2016ರಲ್ಲಿ ಆರಂಭವಾಗಿದ್ದು, ಈ ವರೆಗೆ ಜಿಲ್ಲೆಯಲ್ಲಿ ಎಷ್ಟು ರೈತರು ನೋಂದಣಿ ಮಾಡಿಸಿದ್ದಾರೆ ಮತ್ತು ವಿಮಾ ಕಂಪನಿ ಈ ವರೆಗೆ ಎಷ್ಟು ರೈತರಿಗೆ ಬೆಳೆ ಪರಿಹಾರ ನೀಡಿದೆ ಎಂದು ಪ್ರಶ್ನಿಸಿದ ಸಂಸದರು, ಇದರಲ್ಲಿ ರೈತರಿಗಿಂತ ವಿಮಾ ಕಂಪನಿಗೆ ಹೆಚ್ಚು ಲಾಭವಾದರೆ ಹೇಗೆ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ರೈತರಿಗೆ ಹೆಚ್ಚು ಅನುಕೂಲವಾಗಬೇಕು ಮತ್ತು ಪರಿಹಾರ ದೊರೆಯಬೇಕು. ಇದಕ್ಕಾಗಿ ರೈತರಿಗೂ ಸಹ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಾತನಾಡಿ, 2023-24ನೇ ಸಾಲಿನಲ್ಲಿ ಕುಟುಂಬ ಕಲ್ಯಾಣ ಕಾರ್ಯಕ್ರಮ ಪಿಪಿಐಯುಸಿಡಿಯ ಪ್ರಗತಿಯಲ್ಲಿ ಕೊಪ್ಪಳ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ 20 ವಿವಿಧ ತಜ್ಞ ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗಿದ್ದು ಪ್ರಸ್ತುತ 17 ತಜ್ಞ ವೈದ್ಯರು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಆಗ ದಿಶಾ ಸಮಿತಿಯ ಕೆಲ ಸದಸ್ಯರು ಮಾತನಾಡಿ, ಅನೇಕ ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲ, ಅದರಲ್ಲೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿರುವ ವೈದ್ಯರು ಸಂಜೆಯಾಗುತ್ತಿದ್ದಂತೆ ಆಸ್ಪತ್ರೆಯಲ್ಲಿ ಇರುವುದಿಲ್ಲ. ಇದರಿಂದ ತುರ್ತು ಚಿಕಿತ್ಸೆಯೂ ದೊರೆಯುತ್ತಿಲ್ಲ ಎಂದು ಆರೋಪಿಸಿದರು. ವೈದ್ಯರ ಕೊರತೆಯಿಂದ ಸಮಸ್ಯೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸರಿಪಡಿಸಿ ಎಂದು ಸಂಸದ ರಾಜಶೇಖರ ಹಿಟ್ನಾಳ ಸೂಚಿಸಿದರು.ಬೇಸಿಗೆ ಆರಂಭವಾಗಿದ್ದು ಕುಡಿಯುವ ನೀರಿನ ಸಮಸ್ಯೆಯಾಗಬಹುದು. ಆದರಿಂದ ಇಂದಿನಿಂದಲೇ ಮುನ್ನಚ್ಚರಿಕಾ ಕ್ರಮವಹಿಸುವಂತೆ ಸಂಸದರು ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ನಡೆಯುತ್ತಿರುವ ಜಲಜೀವನ ಮಿಷನ್ (ಜೆಜೆಎಂ) ಕಾಮಗಾರಿಗಳು ಎಷ್ಟಿವೆ ಮತ್ತು ಎಷ್ಟು ಕಾಮಗಾರಿ ಮುಗಿಸಿ ಜನರಿಗೆ ನೀರು ಕೋಡುತ್ತಿದ್ದೀರಿ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಸಂಸದರು ಪ್ರಶ್ನಿಸಿದರು. ಆಗ ಒಟ್ಟು 772 ಕಾಮಗಾರಿಗಳಲ್ಲಿ 663 ಕಾಮಗಾರಿ ಮುಗಿದಿವೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು.ಜಿಲ್ಲೆಯಲ್ಲಿ ಹಲವಾರು ಪ್ರವಾಸಿ ತಾಣಗಳಿವೆ. ಅಂಜನಾದ್ರಿ, ಆನೆಗೊಂದಿ, ಹುಲಗಿ ಸೇರಿದಂತೆ ಇತರೆ ಪ್ರವಾಸಿ ಸ್ಥಳಗಳಿಗೆ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲು ಜನರು ಹೇಳುತ್ತಿದ್ದಾರೆ. ವಿಶೇಷ ಬಸ್‌ಗಳ ವ್ಯವಸ್ಥೆ ನಿಯಮವಿದ್ದರೆ ಜನರಿಗೆ ಅನುಕೂಲ ಮಾಡಿಕೊಡಲು ಸಾರಿಗೆ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಈ ಸಭೆಯಲ್ಲಿ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೇಯ, ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾವ್ಯ ಚತುರ್ವೇದಿ, ದಿಶಾ ಸಮಿತಿಯ ನಾಮನಿರ್ದೇಶಿತ ಸದಸ್ಯರಾದ ಸರಸ್ವತಿ ಕೃಷ್ಣಪ್ಪ ಇಟ್ಟಂಗಿ, ದೊಡ್ಡಬಸನಗೌಡ ಅಮರೇಗೌಡ ಬಯ್ಯಾಪುರ, ಅಂಬಣ್ಣ ನಾಯಕ, ನಂದಿತಾ ಶಿವನಗೌಡ ದಾನರೆಡ್ಡಿ, ಭಾಗ್ಯನಗರ ಪಪಂ ಅಧ್ಯಕ್ಷ ತುಕಾರಾಮಪ್ಪ ಗಡಾದ, ಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಜಿಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ರೇಷ್ಮಾ ಹಾನಗಲ್, ಜಿಪಂ ಯೋಜನಾ ನಿರ್ದೇಶಕ ಪ್ರಕಾಶ ವಿ., ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್., ಆಹಾರ ಇಲಾಖೆ ಉಪನಿರ್ದೇಶಕ ಸೋಮಶೇಖರ ಬಿರಾದರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಟಿ. ಲಿಂಗರಾಜು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.