ಸಾರಾಂಶ
ಕೊಡವ ನ್ಯಾಷನಲ್ ಸಂಘಟನೆ ಮಡಿಕೇರಿಯಲ್ಲಿ ಧರಣಿ ಸತ್ಯಾಗ್ರಹ ನಡೆಸಿತು. ಪ್ರಮುಖರು ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡವ ಲ್ಯಾಂಡ್ ಭೌಗೋಳಿಕ- ರಾಜಕೀಯ ಸ್ವಾಯತ್ತತೆ ಮತ್ತು ಕೊಡವ ಕ್ವೆಸ್ಟ್‌ನ ಕಾನೂನುಬದ್ಧ ಆಕಾಂಕ್ಷೆಗಳನ್ನು ಪರಿಹರಿಸಲು 2ನೇ ರಾಜ್ಯಗಳ ಮರು- ಸಂಘಟನೆ ಆಯೋಗವನ್ನು ರಚಿಸಬೇಕೆಂದು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಮಡಿಕೇರಿಯಲ್ಲಿ ಧರಣಿ ಸತ್ಯಾಗ್ರಹ ನಡೆಸಿತು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಧರಣಿ ನಡೆಸಿದ ಪ್ರಮುಖರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ಹಿರಿಯ ಆರ್ಥಿಕ ತಜ್ಞ, ಕೇಂದ್ರದ ಮಾಜಿ ಕಾನೂನು ಸಚಿವ ಡಾ.ಸುಬ್ರಮಣಿಯನ್ ಸ್ವಾಮಿ ಪ್ರತಿಪಾದಿಸಿರುವಂತೆ 2ನೇ ರಾಜ್ಯಗಳ ಮರು-ಸಂಘಟನೆಯ ಆಯೋಗ ರಚನೆಗೆ ಕ್ರಮ ಕೈಗೊಳ್ಳಬೇಕು. ಕೊಡವರ ಹಿತಾಸಕ್ತಿ ರಕ್ಷಿಸಲು ಸಂವಿಧಾನದ 7ನೇ ತಿದ್ದುಪಡಿಯಲ್ಲಿ ಪ್ರತಿಪಾದಿಸಲಾದ ರಾಜ್ಯಗಳ ಮರು-ಸಂಘಟನೆ ಕಾಯಿದೆ 1956ರ ಅಂಡರ್ ಟೇಕಿಂಗ್‌ಗಳಿಗೆ ರಾಜ್ಯವು ಬದ್ಧವಾಗಿಲ್ಲ. ಅವಿಭಾಜ್ಯ ಮತ್ತು ಸಾಂಪ್ರದಾಯಿಕ ತಾಯ್ನಾಡು ಭಾಗ ‘ಸಿ’ ಕೂರ್ಗ್ ರಾಜ್ಯವು 1956 ರ ನವೆಂಬರ್ 1 ರಂದು ಈಗ ಕರ್ನಾಟಕ ರಾಜ್ಯವಾಗಿರುವ ಅಂದಿನ ವಿಶಾಲ ಮೈಸೂರಿನಲ್ಲಿ ವಿಲೀನವಾದಾಗಿನಿಂದಲೂ ಕೊಡವರನ್ನು 2ನೇ ದರ್ಜೆಯ ನಾಗರೀಕರಂತೆ ಪರಿಗಣಿಸಲಾಗಿದೆ. ಇದು ಗಂಭೀರವಾದ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಎನ್.ಯು.ನಾಚಪ್ಪ ಆರೋಪಿಸಿದರು.ಸಿಎನ್‌ಸಿಯ ನ್ಯಾಯಸಮ್ಮತ ಬೇಡಿಕೆಗಳ ಪರವಾಗಿ ಧರಣಿಯಲ್ಲಿ ಪಾಲ್ಗೊಂಡವರು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳು, ಕೇಂದ್ರ ಸರ್ಕಾರದ ಪ್ರತಿನಿಧಿಗಳು ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸತ್ಯಾಗ್ರಹದಲ್ಲಿ ಕಲಿಯಂಡ ಮೀನಾ, ಚೋಳಪಂಡ ಜ್ಯೋತಿ, ಕಲಿಯಂಡ ಪ್ರಕಾಶ್, ಅಳ್ಮಂಡ ಜೈ, ಪಟ್ಟಮಾಡ ಕುಶ, ಕಿರಿಯಮಾಡ ಶೆರಿನ್, ಮಂದಪಂಡ ಮನೋಜ್, ಮಣೋಟೀರ ಚಿಣ್ಣಪ್ಪ, ಪುಲ್ಲೇರ ಕಾಳಪ್ಪ, ಚಂಙಂಡ ಚಾಮಿ, ಪುಟ್ಟಿಚಂಡ ದೇವಯ್ಯ, ಪುದಿಯೊಕ್ಕಡ ಕಾಶಿ, ನಂದಿನೆರವಂಡ ಅಪ್ಪಯ್ಯ, ನಂದಿನೆರವಂಡ ಅಯ್ಯಣ್ಣ, ಚಂಬಂಡ ಜನತ್, ಅಪ್ಪೆಂಗಡ ಮಾಲೆ, ಕಾಂಡೇರ ಸುರೇಶ್, ಪಾರ್ವಂಗಡ ನವೀನ್, ಕಾಟುಮಣಿಯಂಡ ಉಮೇಶ್, ಚೋಳಪಂಡ ನಾಣಯ್ಯ, ನಂದಿನೆರವಂಡ ವಿಜು, ಮೇದುರ ಕಂಠಿ, ಕಾಟುಮಣಿಯಂಡ ಲೇಯರ್, ಸಾದೆರ ರಮೇಶ್, ಮಣೋಟೀರ ನಂದ ಭಾಗವಹಿಸಿದ್ದರು.