ಕನ್ನಡಪ್ರಭ ವಾರ್ತೆ ಸಕಲೇಶಪುರ
ತಾಲೂಕಿನ ಅರಣ್ಯಭೂಮಿಯಲ್ಲಿ ಅಕ್ರಮವಾಗಿ ಗುಡಿಸಲುಗಳನ್ನು ನಿರ್ಮಿಸಿರುವ ಕುರಿತು ಪಾರದರ್ಶಕ ತನಿಖೆ ನಡೆಸಿ ಕ್ರಮ ಕೈಗೊಳ್ಳದಿದ್ದರೆ ಸೋಮವಾರದಿಂದ ಉಪವಿಭಾಗಾಧಿಕಾರಿ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ತಾಲೂಕು ಅಧ್ಯಕ್ಷ ಗಗನ್ ಹಾಡ್ಲಹಳ್ಳಿ ಎಚ್ಚರಿಕೆ ನೀಡಿದರು.ಪಟ್ಟಣದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಾಲೂಕು ಅವರು, ದೇವಾಲದಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಡಚಹಳ್ಳಿ ಗ್ರಾಮದ ಸರ್ವೇ ನಂ. 28ರ ಅರಣ್ಯ ಜಾಗದಲ್ಲಿ ತಮಿಳುನಾಡು ಮೂಲದ ಕೆಲವರು ಅಕ್ರಮವಾಗಿ ನೆಲೆಸಿದ್ದಾರೆ. ಇವರಿಗೆ ಜಲ್ ಜೀವನ್ ಮಿಷನ್ ಅಡಿ ನೀರು ಹಾಗೂ ಚೆಸ್ಕಾಂ ಮೂಲಕ ವಿದ್ಯುತ್ ಸಂಪರ್ಕವನ್ನೂ ಕಲ್ಪಿಸಲಾಗಿದೆ. ಇದರ ಹಿಂದೆ ಸ್ಥಳೀಯ ಪ್ರಭಾವಿಗಳು ಹಾಗೂ ಅರಣ್ಯ ಇಲಾಖೆಯ ಗುತ್ತಿಗೆ ಸಿಬ್ಬಂದಿಯ ಕೈವಾಡವಿರುವ ಶಂಕೆ ಇದೆ ಎಂದು ಆರೋಪಿಸಿದರು.
ಜಿಲ್ಲಾ ಕರವೇ ಪ್ರಧಾನ ಕಾರ್ಯದರ್ಶಿ ರಘು ಪಾಳ್ಯ ಮಾತನಾಡಿ, ಒಂದು ಕಡೆ ಡೀಮ್ಡ್ ಫಾರೆಸ್ಟ್ ಹೆಸರಿನಲ್ಲಿ ಮೂಲ ನಿವಾಸಿ ರೈತರಿಗೆ ತೆರವು ನೋಟಿಸ್ ನೀಡುತ್ತಿರುವ ಅರಣ್ಯ ಇಲಾಖೆ, ಮತ್ತೊಂದೆಡೆ ಹೊರರಾಜ್ಯದವರಿಗೆ ಅರಣ್ಯದೊಳಗೆ ಅಕ್ರಮ ವಾಸಕ್ಕೆ ಅವಕಾಶ ನೀಡುತ್ತಿರುವುದು ದ್ವಂದ್ವ ನೀತಿಯಾಗಿದೆ ಎಂದು ಟೀಕಿಸಿದರು. ತಾಲೂಕು ರೈತ ಘಟಕದ ಅಧ್ಯಕ್ಷ ಬೊಮ್ಮನಕೆರೆ ವಸಂತ್ ಅವರು ಮಾತನಾಡಿ, ಈ ಅಕ್ರಮಕ್ಕೆ ಸಹಕರಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಚೆಸ್ಕಾಂ ಹಾಗೂ ಜಲ್ ಜೀವನ್ ಮಿಷನ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಅರಣ್ಯ ವೀಕ್ಷಕನನ್ನು ಕೂಡಲೇ ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.ತಾಲೂಕು ಕಾರ್ಮಿಕ ಘಟಕದ ಅಧ್ಯಕ್ಷ ಸಂಗ್ರಾಮ್ ಹೊಡಚಹಳ್ಳಿ ಅವರು ಮಾತನಾಡಿ, ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾದ ಮೇಲೆ ಕೇವಲ ಎರಡು ಗುಡಿಸಲುಗಳನ್ನು ತೆರವುಗೊಳಿಸಿರುವುದು ಕಣ್ಣೊರೆಸುವ ತಂತ್ರವಾಗಿದೆ ಎಂದು ದೂರಿದರು. ಈ ಗಂಭೀರ ಪ್ರಕರಣದ ಕುರಿತು ಸಮಗ್ರ ತನಿಖೆಯಾಗದಿದ್ದಲ್ಲಿ ಪ್ರತಿಭಟನೆ ತೀವ್ರಗೊಳಿಸುವುದಾಗಿ ಸಂಘಟನೆಯ ಪದಾಧಿಕಾರಿಗಳು ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕರವೇ ಉಪಾಧ್ಯಕ್ಷ ಸುನಿಲ್, ಕಾರ್ಯದರ್ಶಿ ನವೀನ್ ಹಾಗೂ ರಾಹುಲ್ ಉಪಸ್ಥಿತರಿದ್ದರು.