ಸಾರಾಂಶ
ಕಾವೇರಿ ನೀರಾವರಿ ನಿಗಮದ ಕೃಷ್ಣರಾಜಸಾಗರ ಆಧುನೀಕರಣ ಮತ್ತು ಮಧ್ಯಮ ನೀರಾವರಿ ಯೋಜನೆಗಳ ವೃತ್ತ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಟಾಸ್ಕ್ ವರ್ಕ್ ದಿನಗೂಲಿ ನೌಕರರಿಗೆ ಕಳೆದ 7 ತಿಂಗಳಿಂದ ವೇತನ ಪಾವತಿಸಿಲ್ಲ.
ಕನ್ನಡಪ್ರಭ ವಾರ್ತೆ ಮಂಡ್ಯ
ಬಾಕಿ ವೇತನ ಪಾವತಿಸುವಂತೆ ಒತ್ತಾಯಿಸಿ ಟಾಸ್ಕ್ ವರ್ಕ್ (ಸವಡೆ) ದಿನಗೂಲಿ ನೌಕರರು ನಗರದಲ್ಲಿ ಸೋಮವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.ನಗರದ ಕಾವೇರಿ ಭವನ (ಕಾವೇರಿ ನೀರಾವರಿ ನಿಗಮ)ದ ಆವರಣದ ಎದುರು ಟಾಸ್ಕ್ ವರ್ಕ್ ದಿನಗೂಲಿ ನೌಕರರ ಸಂಘದ ನೇತೃತ್ವದಲ್ಲಿ ಧರಣಿ ಕುಳಿತ ನೌಕರರು ಸರ್ಕಾರ ಹಾಗೂ ಇಲಾಖೆ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.
ಕಾವೇರಿ ನೀರಾವರಿ ನಿಗಮದ ಕೃಷ್ಣರಾಜಸಾಗರ ಆಧುನೀಕರಣ ಮತ್ತು ಮಧ್ಯಮ ನೀರಾವರಿ ಯೋಜನೆಗಳ ವೃತ್ತ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಟಾಸ್ಕ್ ವರ್ಕ್ ದಿನಗೂಲಿ ನೌಕರರಿಗೆ ಕಳೆದ 7 ತಿಂಗಳಿಂದ ವೇತನ ಪಾವತಿಸಿಲ್ಲ ಎಂದು ದೂರಿದರು.ನಿಗಮದ ವ್ಯಾಪ್ತಿಯಲ್ಲಿ ಸುಮಾರು 650 ಕ್ಕೂ ಹೆಚ್ಚು ನೌಕರರು ಹೊರಗುತ್ತಿಗೆ ಆಧಾರದಡಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಫೆಬ್ರವರಿಯಿಂದ ವೇತನ ಪಾವತಿ ಮಾಡಿಲ್ಲ. ಇದರಿಂದ ವೇತನ ನಂಬಿ ಬದುಕುತ್ತಿರುವ ನಾವು ಕುಟುಂಬ ನಿರ್ವಹಣೆ ಮಾಡುವುದೇ ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡರು.
ಬಾಕಿ ವೇತನ ಪಾವತಿಯಾಗದೇ ಮಕ್ಕಳನ್ನು ಶಾಲಾ-ಕಾಲೇಜಿಗೆ ಸೇರ್ಪಡೆ ಮಾಡಲು ತೊಂದರೆಯಾಗುತ್ತಿದೆ. ಕೂಡಲೇ ಅಧಿಕಾರಿಗಳು ಬಾಕಿ ಇರುವ ವೇತನ ಬಿಡುಗಡೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.ಕೆಆರ್ ಎಸ್ ಅಣೆಕಟ್ಟೆಯಿಂದ ನಾಲೆಗಳಿಗೆ ನೀರು ಬಿಡಲಾಗಿದೆ. ನಾಲಾ ವ್ಯಾಪ್ತಿಯಲ್ಲಿ ಹಗಲು- ರಾತ್ರಿ ವೇಳೆ ಕಾವಲು ಕಾಯುತ್ತಾ ನಾಲೆಯ ನೀರು ನಿರ್ವಹಣೆ ಮಾಡುತ್ತಿದ್ದೇವೆ. ಧರಣಿ ಆರಂಭಿಸಿರುವುದರಿಂದ ನಾಲೆ ನೀರು ನಿರ್ವಹಣೆಗೆ ತೊಂದರೆಯಾಗಲಿದೆ. ಕೂಡಲೇ ಬಾಕಿ ವೇತನ ಪಾವತಿಸಬೇಕು. ಇಲ್ಲದಿದ್ದರೆ ಅನಿರ್ದಿಷ್ಟಾವಧಿ ಧರಣಿ ಕೈ ಬಿಡುವುದಿಲ್ಲ ಎಂದು ನೌಕರರು ಪಟ್ಟು ಹಿಡಿದಿದ್ದಾರೆ.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಶಿವಲಿಂಗಯ್ಯ, ಕಾರ್ಯದರ್ಶಿ ರಾಮೇಗೌಡ, ಮಹೇಶ್, ಎಸ್.ಎಂ. ರವಿ, ವೈರಮುಡಿ, ಸತೀಶ್, ಜೆ. ನಾಗರಾಜ್ ಸೇರಿದಂತೆ ನೂರಾರು ನೌಕರರು ಭಾಗವಹಿಸಿದ್ದರು.