ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರ

| Published : Sep 30 2024, 01:20 AM IST

ಸಾರಾಂಶ

ಕಂದಾಯ ಇಲಾಖೆಯ ಮೂರು ವರ್ಷ ಸೇವೆ ಪರಿಗಣಿಸಿ ಅಂತರ ಜಿಲ್ಲಾ ವರ್ಗಾವಣೆಗೆ ಹೊಸ ಮಾರ್ಗಸೂಚಿ ರಚಿಸಬೇಕು.

ಹೊಸಪೇಟೆ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಯಿತು.

ಇಲಾಖೆಯಿಂದ ಅಭಿವೃದ್ಧಿ ಪಡಿಸಿರುವ ಸುಮಾರು 21ಕ್ಕೂ ಅಧಿಕ ಮೊಬೈಲ್ ವೆಬ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸಲು ಒತ್ತಡ ಹೇರುತ್ತಿದ್ದಾರೆ. ಈ ತಂತ್ರಾಂಶಗಳ ನಿರ್ವಹಣೆಗೆ ಅವಶ್ಯಕವಾಗಿರುವ ಮೊಬೈಲ್ ಸಾಧನ, ಲ್ಯಾಪ್ ಟಾಪ್, ಅದಕ್ಕೆ ಅವಶ್ಯಕ ಇಂಟರ್ನೆಟ್ ಹಾಗೂ ಸ್ಕ್ಯಾನರ್‌ ಒದಗಿಸದೇ ಕರ್ತವ್ಯ ನಿರ್ವಹಿಸಲು ಒತ್ತಡ ಹೇರುತ್ತಿರುವುದರಿಂದ ಕ್ಷೇತ್ರ ಮಟ್ಟದಲ್ಲಿ ಅಧಿಕ ಒತ್ತಡದೊಂದಿಗೆ ಗ್ರಾಮ ಆಡಳಿತ ಅಧಿಕಾರಿಗಳು ನೋವು ಅನುಭವಿಸುತ್ತಿದ್ದಾರೆ ಎಂದು ದೂರಿದರು.

ಕಂದಾಯ ಇಲಾಖೆಯ ಮೂರು ವರ್ಷ ಸೇವೆ ಪರಿಗಣಿಸಿ ಅಂತರ ಜಿಲ್ಲಾ ವರ್ಗಾವಣೆಗೆ ಹೊಸ ಮಾರ್ಗಸೂಚಿ ರಚಿಸಬೇಕು. ಆಯುಕ್ತಾಲಯದಡಿ ಗ್ರಾಮ ಆಡಳಿತ ಅಧಿಕಾರಿಗಳ ಜ್ಯೇಷ್ಠತೆಯನ್ನು ರಾಜ್ಯ ಮಟ್ಟದ ಜ್ಯೇಷ್ಠತೆಯನ್ನಾಗಿ ಪರಿಗಣಿಸಬೇಕು. ಮೊಬೈಲ್ ತಂತ್ರಾಂಶಗಳ ಕೆಲಸದ ವಿಚಾರವಾಗಿ ಇದುವರೆಗೆ ಆಗಿರುವ ಎಲ್ಲ ಅಮಾನತುಗಳನ್ನು ತಕ್ಷಣವೇ ರದ್ದುಪಡಿಸಿ ಆದೇಶ ಹಿಂಪಡೆಯಬೇಕು. ಪ್ರಯಾಣ ಭತ್ಯೆ ದರವನ್ನು ₹500 ಬದಲಾಗಿ ₹3000 ಹೆಚ್ಚಿಸಬೇಕೆಂಬ ಬೇಡಿಕೆ ಸೇರಿದಂತೆ ಇತರೆ ಬೇಡಿಕೆಗಳ ಈಡೇರಿಕೆಗಾಗಿ ಮನವಿ ಪತ್ರ ಸಲ್ಲಿಸಲಾಯಿತು.

ಗ್ರಾಮ ಆಡಳಿತ ಅಧಿಕಾರಿಗಳಿಗೆ ಸುಸಜ್ಜಿತ ಕಚೇರಿ ಕಲ್ಪಿಸಬೇಕು. ಗುಣಮಟ್ಟದ ಪೀಠೋಪಕರಣಗಳು, ಅಂತರ್ಜಾಲ ವ್ಯವಸ್ಥೆ ಒದಗಿಸಬೇಕು. ಸಂಯೋಜನೆ, ಇ-ಆಫೀಸ್, ಗರುಡ, ಭೂಮಿ, ನವೋದಯ, ದಿಶಾಂಕ್‌ ಮತ್ತಿತರ ತಂತ್ರಾಂಶಗಳ ನಿರ್ವಹಣೆಗೆ ಹೆಚ್ಚಿನ ಡೇಟಾ ಸಾಮರ್ಥ್ಯದ ಸ್ಮಾರ್ಟ್‌ ಫೋನ್‌ಗಳನ್ನು ನೀಡಬೇಕು ಎಂದು ಆಗ್ರಹಿಸಿದರು.

ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಯಂಕಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಸಿ.ಗುರುಬಸವರಾಜ, ಉಪಾಧ್ಯಕ್ಷ ವೀರೇಶ್, ತಾಲೂಕು ಅಧ್ಯಕ್ಷ ರವಿಚಂದ್ರ ಗೊಗ್ಗಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜಿ.ಮಲ್ಲಿಕಾರ್ಜುನಗೌಡ, ಗ್ರಾಮ ಸಹಾಯಕರ ಸಂಘದ ಜಿಲ್ಲಾಧ್ಯಕ್ಷ ಟಿ.ಫಕ್ಕೀರಪ್ಪ, ಮುಖಂಡರಾದ ಬಸವರಾಜ, ಮಲ್ಲೇಶ್ ನಾಯ್ಕ, ಶಶಿಕುಮಾರ್, ಜ್ಯೋತಿಬಾಯಿ, ಮರುಳಸಿದ್ದಪ್ಪ, ದೇವೇಂದ್ರಪ್ಪ, ವೀರಭದ್ರೇಶ್ ಇದ್ದರು.

ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದಿಂದ ನಗರದ ಜಿಲ್ಲಾಧಿಕಾರಿ ಎದುರು ಶುಕ್ರವಾರ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿ ಮನವಿ ಸಲ್ಲಿಸಲಾಯಿತು.