ದಸ್ತಾವೇಜುಗಳ ನೋಂದಣಿ ಪ್ರಕ್ರಿಯೆಯಲ್ಲಿ ಆಗುತ್ತಿರುವ ತೊಂದರೆಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ಪರವಾನಗಿ ಪಡೆದ ಪತ್ರ ಬರಹಗಾರರ ಒಕ್ಕೂಟದ ಸದಸ್ಯರು ಮಂಗಳವಾರ ಮುಷ್ಕರ ನಡೆಸಿದರು.

ಹರಪನಹಳ್ಳಿ: ದಸ್ತಾವೇಜುಗಳ ನೋಂದಣಿ ಪ್ರಕ್ರಿಯೆಯಲ್ಲಿ ಆಗುತ್ತಿರುವ ತೊಂದರೆಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ಇಲ್ಲಿಯ ಕರ್ನಾಟಕ ರಾಜ್ಯ ನೋಂದಣಿ ಮುದ್ರಾಂಕ ಇಲಾಖೆಯಿಂದ ಪರವಾನಗಿ ಪಡೆದ ಪತ್ರ ಬರಹಗಾರರ ಒಕ್ಕೂಟದ ಸದಸ್ಯರು ಮಂಗಳವಾರ ಮುಷ್ಕರ ನಡೆಸಿದರು.

ಈ ಸಂಬಂಧ ಮಂಗಳವಾರ ಇಲ್ಲಿಯ ಉಪನೋಂದಣಿ ಕಚೇರಿಯಲ್ಲಿ ನೋಂದಣಿಯ ಎಲ್ಲ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸಿ ಸಬ್‌ ರಿಜಿಸ್ಟ್ರಾರ್‌ ಲಿಂಗರಾಜು ಅವರಿಗೆ ಮನವಿ ಸಲ್ಲಿಸಿದರು.

ಡಿ. 3, 2025ರಿಂದ ಕಾವೇರಿ -2 ನೋಂದಣಿ ಪ್ರಕ್ರಿಯೆಯಲ್ಲಿ ಕೆಲವು ಬದಲಾವಣೆಗಳಾಗಿ ಎಲ್ಲ ಉಪನೋಂದಣಿ ಕಚೇರಿಗಳಲ್ಲಿ ನೋಂದಣಿ ಕಾರ್ಯಗಳು ಕುಂಠಿತಗೊಂಡಿವೆ. ನೋಂದಣಿ ಪ್ರಕ್ರಿಯೆಯಲ್ಲಿ ಅಂದರೆ ಸ್ವತ್ತಿನ ವಿವರಣೆಯಲ್ಲಿ ಸ್ವತ್ತಿನ ವಿಳಾಸ, ಸ್ವತ್ತಿನ ನಂಬರ್, ಸ್ವತ್ತಿನ ವಿಸ್ತೀರ್ಣ ಸರಿಯಾಗಿ ನಮೂದಾಗದೆ ನೋಂದಣಿ ಪ್ರಕ್ರಿಯೆ 100ಕ್ಕೆ ಶೇ. 95 ಸ್ಥಗಿತಗೊಂಡಿರುತ್ತದೆ.ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಆಗುತ್ತಿದೆ. ಆದ್ದರಿಂದ ಕಾವೇರಿ 2 ತಂತ್ರಾಂಶದಲ್ಲಿ ಆಗುತ್ತಿರುವ ತೊಂದರೆಗಳನ್ನು ಆದಷ್ಟು ಬೇಗನೆ ಸರಿಪಡಿಸಿ ನೋಂದಣಿ ಪ್ರಕ್ರಿಯೆ ಸುಗಮಗೊಳಿಸುವುದರ ಮೂಲಕ ಸಾರ್ವಜನಿಕರಿಗೆ ನೋಂದಣಿ ಮಾಡಿಸಿಕೊಳ್ಳಲು ಅನುಕೂಲ ಮಾಡಿ ಕೊಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಪತ್ರ ಬರಹಗಾರರ ಒಕ್ಕೂಟದ ಅಧ್ಯಕ್ಷ ಡಂಕಿ ಇಮ್ರಾನ್‌ ಭಾಷ, ಸದಸ್ಯರಾದ ಕೆ.ಎಂ. ಮಂಜುನಾಥ, ಕೆ.ಎಂ. ರೇವಣಸಿದ್ದಯ್ಯ, ಎಂ.ಬಿ. ಸಿದ್ದು, ಡಂಕಿ ಮೆಹಬೂಬ್‌ ಬಾಷ, ಕೆ.ಎಂ. ಲಿಂಗರಾಜು, ವೆಂಕಟೇಶ, ಎಸ್.ಎಂ. ಮಂಜುನಾಥ ಇತರರು ಪಾಲ್ಗೊಂಡಿದ್ದರು.