ಬಾಲ್ಯವಿವಾಹ ಮುಕ್ತ ಸಮಾಜಕ್ಕೆ ಶ್ರಮಿಸಿ: ಜಯಶ್ರೀ

| Published : Jul 08 2024, 12:32 AM IST

ಸಾರಾಂಶ

ಬಾಲ್ಯ ವಿವಾಹವನ್ನು ತೊಡೆದು ಹಾಕುವುದು ಎಲ್ಲರ ಕರ್ತವ್ಯವಾಗಿದೆ. ಯಾರೇ ಇಂತಹ ಪ್ರಕರಣಗಳು ನಡೆದಲ್ಲಿ ಕೂಡಲೇ ಜಾಗೃತರಾಗಿ.

ಕನ್ನಡಪ್ರಭ ವಾರ್ತೆ ಸುರಪುರ

ಆಧುನಿಕ ಸಮಾಜಕ್ಕೆ ಕಾಲಿಟ್ಟಿದ್ದರೂ ಇನ್ನೂ ಕೆಲ ಭಾಗದಲ್ಲಿ ಬಾಲ್ಯವಿವಾಹ ನಡೆಯುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದ್ದು, ಇಂತಹ ಘಟನೆಗಳು ನಡೆದರೆ ಕೂಡಲೇ ಪೊಲೀಸರಿಗೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು ಮಾಹಿತಿ ನೀಡಿ ಬಾಲ್ಯ ವಿವಾಹ ಮುಕ್ತ ಸಮಾಜಕ್ಕೆ ಶ್ರಮಿಸಬೇಕು ಎಂದು ಮೊರಾರ್ಜಿ ವಸತಿ ಶಾಲೆ ಪ್ರಾಂಶುಪಾಲರಾದ ಜಯಶ್ರೀ ಗಣಾಚಾರಿ ಹೇಳಿದರು.

ನಗರ ಸಮೀಪದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಮೊರಾರ್ಜಿ ವಸತಿ ಶಾಲೆಯ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಬಾಲ್ಯ ವಿವಾಹ ಪದ್ಧತಿ ನಿರ್ಮೂಲನೆ ಮತ್ತು ಜಾಗೃತಿಗಾಗಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಬಾಲ್ಯ ವಿವಾಹ ಪದ್ಧತಿ ಸಮಾಜಕ್ಕೆ ಅಂಟಿದ ಪಿಡುಗಾಗಿದೆ. ತಾಂತ್ರಿಕವಾಗಿ ಮುಂದುವರಿದಿದ್ದರೂ ಹಲವು ಗ್ರಾಮಗಳಲ್ಲಿ ಇನ್ನೂ ಜೀವಂತವಾಗಿರುವುದು ಆಗಾಗ ಸುದ್ದಿ ಆಗುತ್ತವೆ. ಆದ್ದರಿಂದ ಪ್ರತಿಯೊಬ್ಬರೂ ಬಾಲ್ಯ ವಿವಾಹ ಪದ್ಧತಿ ನಿರ್ಮೂಲನೆಗೆ ಕಾರ್ಯನಿರ್ವಹಿಸಬೇಕು ಎಂದರು.

ಸರಕಾರಿ ಆಸ್ಪತ್ರೆಯ ಗೋಪಾಲಕೃಷ್ಣ ಅವರು ಮಾತನಾಡಿ, ಬಾಲ್ಯ ವಿವಾಹವನ್ನು ತೊಡೆದು ಹಾಕುವುದು ಎಲ್ಲರ ಕರ್ತವ್ಯವಾಗಿದೆ. ಯಾರೇ ಇಂತಹ ಪ್ರಕರಣಗಳು ನಡೆದಲ್ಲಿ ಕೂಡಲೇ ಜಾಗೃತರಾಗಿ ದೂರವಾಣಿ ಕರೆ ಮಾಡಿ ತಿಳಿಸಿ ಬಾಲ್ಯ ವಿವಾಹ ತಡೆಯಬೇಕು. ಬಾಲ್ಯವಿವಾಹ ನಿಷೇಧ ಕಾಯ್ದೆ-2006ರ ಪ್ರಕಾರ ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧವಾಗಿರುವುದರಿಂದ ನಮ್ಮ ರಾಜ್ಯವನ್ನು ಬಾಲ್ಯವಿವಾಹ ಮುಕ್ತ ರಾಜ್ಯವನ್ನಾಗಿಸಲು ಶ್ರಮಿಸಲಾಗುತ್ತಿದೆ. ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ವಿವಾಹ ಮಾಡದೆ ಶಿಕ್ಷಣ ನೀಡಿ ಜೀವನದ ಅಭಿವೃದ್ಧಿಗೆ ನಾವೆಲ್ಲ ಶ್ರಮಿಸಬೇಕು ಎಂದು ಕರೆ ನೀಡಿದರು.

ಮೊರಾರ್ಜಿ ವಸತಿ ಶಾಲೆಯ ಶಿಕ್ಷಕರು, ಆರೋಗ್ಯ ಇಲಾಖೆ ಹಾಗೂ ಸಿಬ್ಬಂದಿಗಳು ಬಾಲ್ಯ ವಿವಾಹ ಪದ್ಧತಿ ನಿರ್ಮೂಲನೆ ಕುರಿತಂತೆ ಪ್ರತಿಜ್ಞೆ ಮಾಡಿದರು. ಆರೋಗ್ಯ ಇಲಾಖೆಯ ಸಿಬ್ಬಂದಿ, ಮೊರಾರ್ಜಿ ಶಾಲೆಯ ಶಿಕ್ಷಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಇದ್ದರು.