ಸಹಕಾರ ಕ್ಷೇತ್ರ ಮತ್ತಷ್ಟು ಬಲವರ್ಧನೆಗೆ ಶ್ರಮಿಸಿ: ಮನುಮುತ್ತಪ್ಪ

| Published : Dec 27 2023, 01:32 AM IST

ಸಹಕಾರ ಕ್ಷೇತ್ರ ಮತ್ತಷ್ಟು ಬಲವರ್ಧನೆಗೆ ಶ್ರಮಿಸಿ: ಮನುಮುತ್ತಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯರ್ ಸಂಯುಕ್ತಾಶ್ರಯದಲ್ಲಿ ಕೊಡಗು ಜಿಲ್ಲೆಯ ಕೃಷಿಯೇತರ ಮತ್ತು ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರಿಗೆ ಆದಾಯ ತೆರಿಗೆ, ಜಿಎಸ್‌ಟಿ ಮತ್ತು ಸಹಕಾರ ಸಂಘಗಳ ಆಡಳಿತ ನಿರ್ವಹಣೆ ಕುರಿತು ಮಡಿಕೇರಿಯಲ್ಲಿ ರಾಜ್ಯಮಟ್ಟದ ವಿಶೇಷ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ ಸರ್ಕಾರ ಸಹಕಾರ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿದ್ದು, ಆ ನಿಟ್ಟಿನಲ್ಲಿ ಹೊಸ ಹೊಸ ಯೋಜನೆ ಅಳವಡಿಸಿಕೊಂಡು ಸಹಕಾರ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಲು ಮತ್ತು ಆಡಳಿತ ವ್ಯವಸ್ಥೆಯನ್ನು ಸುಧಾರಿಸಲು ಅಗತ್ಯ ಕ್ರಮವಹಿಸಬೇಕಿದೆ ಎಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ ಅಧ್ಯಕ್ಷರು ಹಾಗೂ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ನಿರ್ದೇಶಕ ಎ.ಕೆ.ಮನುಮುತ್ತಪ್ಪ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯರ್ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಕೃಷಿಯೇತರ ಮತ್ತು ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರಿಗೆ ಆದಾಯ ತೆರಿಗೆ, ಜಿಎಸ್‌ಟಿ ಮತ್ತು ಸಹಕಾರ ಸಂಘಗಳ ಆಡಳಿತ ನಿರ್ವಹಣೆ ಕುರಿತು ನಗರದ ಮಯೂರ ವ್ಯಾಲಿ ವ್ಯೂ ಹೋಟೆಲ್‌ನಲ್ಲಿ ಮಂಗಳವಾರ ನಡೆದ ರಾಜ್ಯಮಟ್ಟದ ವಿಶೇಷ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರ ಸಹಕಾರ ಕ್ಷೇತ್ರಕ್ಕೆ ಪ್ರತ್ಯೇಕ ಸಚಿವಾಲಯವನ್ನೇ ಸ್ಥಾಪಿಸಿ ಸಹಕಾರ ಕ್ಷೇತ್ರದ ಮಹತ್ವವನ್ನು ತಿಳಿದು ಸಹಕಾರ ಕ್ಷೇತ್ರಕ್ಕೆ ಪ್ರಥಮ ಆದ್ಯತೆ ನೀಡಿದೆ. ಆ ನಿಟ್ಟಿನಲ್ಲಿ ಸಹಕಾರ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಮನುಮುತ್ತಪ್ಪ ಮನವಿ ಮಾಡಿದರು.

ರಾಷ್ಟ್ರದ ಅಭಿವೃದ್ಧಿಗೆ ಸಹಕಾರ ಕ್ಷೇತ್ರಗಳು ಸಹ ಪ್ರಮುಖ ಪಾತ್ರ ವಹಿಸುತ್ತಿದ್ದು, ಸಹಕಾರ ಕ್ಷೇತ್ರಗಳು ಕೃಷಿ, ತೋಟಗಾರಿಕೆ, ಪಶುಪಾಲನೆ ಸೇರಿದಂತೆ ಹಲವು ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿದೆ ಎಂದು ಮನುಮುತ್ತಪ್ಪ ವಿವರಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಕೌಶಲ್ಯವನ್ನು ಹೆಚ್ಚಿಸಿಕೊಂಡು ಸಹಕಾರ ಸಂಘಗಳನ್ನು ಅಭಿವೃದ್ಧಿ ಪಡಿಸಲು ಮುಂದಾಗಬೇಕಿದೆ ಎಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರು ಹೇಳಿದರು.

ಸರ್ಕಾರದ ವಿವಿಧ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಸಹಕಾರ ಸಂಘಗಳ ಪಾತ್ರವೂ ಇದೆ ಎಂಬುದನ್ನು ಮರೆಯುವಂತಿಲ್ಲ. ಆ ನಿಟ್ಟಿನಲ್ಲಿ ಗ್ರಾಮೀಣ ಸಹಕಾರ ಸಂಘಗಳು ಆರ್ಥಿಕ ಶಕ್ತಿ ಕೇಂದ್ರಗಳಾಗಿ ಅಭಿವೃದ್ಧಿ ಸಾಧಿಸಬೇಕು ಎಂದು ಹೇಳಿದರು.

ಮೈಸೂರಿನ ಎಂಸಿಪಿಸಿಎಸ್ ಸಹಕಾರ ಸಂಘ ಅಭಿವೃದ್ಧಿಗೆ ಭೋಸ್ ದೇವಯ್ಯ ಅವರ ಕೊಡುಗೆ ಅಪಾರವಾಗಿದೆ ಎಂದು ಇದೇ ಸಂದರ್ಭದಲ್ಲಿ ಸ್ಮರಿಸಿದರು.

ಮೈಸೂರಿನಲ್ಲಿರುವ ಎಂಸಿಪಿಸಿಎಸ್ ಸಹಕಾರ ಸಂಘವು ಅಂತರ್ ಜಿಲ್ಲಾ ಕಾಯ್ದೆಯಡಿ ಸಹಕಾರ ಸಂಘ ಸ್ಥಾಪನೆಯಾಗಿದ್ದು, ಈ ಸಂಘದ ಪುನಃಶ್ಚೇತನಕ್ಕೆ ಭೋಸ್ ದೇವಯ್ಯ ಅವರು ಶ್ರಮಿಸಿದ್ದಾರೆ ಎಂದು ತಿಳಿಸಿದರು.

ಡಿಸಿಸಿ ಬ್ಯಾಂಕ್‌ನ ನಿರ್ದೇಶಕರಾದ ಜಲಜಾ ಶೇಖರ್ ಮಾತನಾಡಿ, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಕಾಲ ಕಾಲಕ್ಕೆ ಅಪ್‌ಡೇಟ್ ಮಾಹಿತಿ ನೀಡುವ ಮೂಲಕ ಸಹಕಾರ ಸಂಘಗಳ ಬೆಳವಣಿಗೆಗೆ ಕೈಜೋಡಿಸಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು.

ಹಾಸನ ಜಿಲ್ಲೆಯ ಸನ್ನದು ಲೆಕ್ಕಿಗರಾದ ಎಸ್.ವಿ.ಶಂಭುಲಿಂಗಪ್ಪ, ಆದಾಯ ತೆರಿಗೆ ಹಾಗೂ ಜಿಎಸ್‌ಟಿ ಕಟಾವಣೆ ಸಂಬಂಧಿಸಿದಂತೆ ಮಾಹಿತಿ ನೀಡಿದರು. ಜಿಡಿಸಿ ತರಬೇತಿ ಕೇಂದ್ರದ ನಿವೃತ್ತ ಪ್ರಾಂಶುಪಾಲರಾದ ಶ್ಯಾಮಲಾ ಅವರು ಸಿಬ್ಬಂದಿ ನೇಮಕಾತಿ ಬಗ್ಗೆ ಮಾತನಾಡಿದರು.

ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ ಉಪಾಧ್ಯಕ್ಷ ಪಿ.ಸಿ.ಮನು ರಾಮಚಂದ್ರ, ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ನ ನಿರ್ದೇಶಕರಾದ ರಮೇಶ್ ಚಂಗಪ್ಪ, ರವಿಬಸಪ್ಪ, ಪ್ರೇಮ ಸೋಮಯ್ಯ, ಪಿ.ಸಿ.ಅಚ್ಚಯ್ಯ, ಉಮೇಶ್ ಉತ್ತಪ್ಪ, ಕೃಷ್ಣಗಣಪತಿ, ಪಿ.ಬಿ.ಭರತ್, ಪಿ.ಬಿ.ಯತೀಶ್, ಕನ್ನಂಡ ಸಂಪತ್, ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್, ಮಂಜುಳಾ ಇತರರು ಇದ್ದರು.