ಡಂಬಳ ಗ್ರಾಮದ ಜಗದ್ಗುರು ತೋಂಟದಾರ್ಯ ಸಂಯುಕ್ತ ಪದವಿಪೂರ್ವ ಕಾಲೇಜು ಹಾಗೂ ಜಗದ್ಗುರು ತೋಂಟದಾರ್ಯ ಬಾಲಕರ ಪ್ರೌಢ ಶಾಲೆ, ಜಗದ್ಗುರು ತೋಂಟದಾರ್ಯ ವಿದ್ಯಾಪೀಠ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿಗಳ ದ್ವಿತೀಯ ಪಿಯುಸಿ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಡಂಬಳ: ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಜ್ಞಾನ ಸಂಪಾದನೆಗೆ ಶ್ರಮಿಸಿದರೆ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ ಎಂದು ಜಗದ್ಗುರು ತೋಂಟದಾರ್ಯ ಮಠದ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟರ್ ಹೇಳಿದರು.

ಡಂಬಳ ಗ್ರಾಮದ ಜಗದ್ಗುರು ತೋಂಟದಾರ್ಯ ಸಂಯುಕ್ತ ಪದವಿಪೂರ್ವ ಕಾಲೇಜು ಹಾಗೂ ಜಗದ್ಗುರು ತೋಂಟದಾರ್ಯ ಬಾಲಕರ ಪ್ರೌಢ ಶಾಲೆ, ಜಗದ್ಗುರು ತೋಂಟದಾರ್ಯ ವಿದ್ಯಾಪೀಠ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿಗಳ ದ್ವಿತೀಯ ಪಿಯುಸಿ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮತ್ತು ಸೇವಾ ನಿವೃತ್ತಿ ಹೊಂದಿದ ದೈಹಿಕ ಶಿಕ್ಷಕ ಬಿ.ಎಸ್. ಕಣವಿ ಅವರಿಗೆ ಸನ್ಮಾನಿಸಿ ಮಾತನಾಡಿದ ಅವರು, ವಿದ್ಯೆ ಯಾರ ಸ್ವತ್ತು ಅಲ್ಲ, ವಿದ್ಯಾರ್ಥಿಗಳು ದೃಢ ನಿರ್ಧಾರ ಹಾಗೂ ನಿರಂತರ ಪ್ರಯತ್ನದಿಂದ ಅಸಾಧ್ಯವಾದದ್ದನ್ನು ಸಾಧಿಸಬಹುದು ಎಂದು ಹೇಳಿದರು.

ಸಮಾಜ ಸೇವಕ ಗೋಣಿಬಸಪ್ಪ ಕೊರ್ಲಹಳ್ಳಿ ಮಾತನಾಡಿ, ಮೌಢ್ಯ, ಕಂದಾಚಾರ, ಬಡತನ ನಿರ್ಮೂಲನೆಗೆ ಏಕೈಕ ಶಕ್ತಿ ಶಿಕ್ಷಣ, ಅನಿಷ್ಟ ಪದ್ಧತಿ ಹೋಗಲಾಡಿಸುವ ದೂರದೃಷ್ಟಿಯಿಂದ ಗ್ರಾಮೀಣ ಭಾಗದಲ್ಲಿ ನೂರಾರು ಸಂಸ್ಥೆ ಕಟ್ಟಿ ಗ್ರಾಮೀಣ ವಿದ್ಯಾರ್ಥಿಗಳ ಬದುಕು ಕಟ್ಟಿದ ಶ್ರೇಯಸ್ಸು ಲಿಂ. ಡಾ. ತೋಂಟದ ಸಿದ್ಧಲಿಂಗ ಶ್ರೀಗಳಿಗೆ ಸಲ್ಲುತ್ತದೆ. ಕಡುಬಡತನದ ಮಧ್ಯೆಯೇ ಕಷ್ಟಪಟ್ಟು ತಂದೆ-ತಾಯಂದಿರು ಮಕ್ಕಳ ಉತ್ತಮ ಸಂಸ್ಕಾರದ ಜತೆಗೆ ಶಿಕ್ಷಣಕ್ಕೆ ಒತ್ತು ಕೊಡಬೇಕು ಎಂದು ಹೇಳಿದರು.

ಪ್ರಾಚಾರ್ಯರ ಎಸ್.ಎನ್. ಕಲ್ಲಿಗನೂರ, ಎಂ.ಬಿ. ಮಡಿವಾಳರ ಮಾತನಾಡಿ, ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ತಮ್ಮ ಜೀವನದ ಮುಖ್ಯ ಘಟ್ಟವಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿ ಭವಿಷ್ಯ ಉತ್ತಮವಾಗಿಸಿಕೊಳ್ಳಲು ನಿರಂತರವಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕನ್ನಡಪ್ರಭ ಯುವ ಆವೃತ್ತಿ ಕೊಡಮಾಡಿದ ಗೋಣಿಬಸಪ್ಪ ಕೊರ್ಲಹಳ್ಳಿ ಅವರನ್ನು ಸನ್ಮಾನಿಸಲಾಯಿತು. ಸಂಕಲ್ಪ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಮತ್ತು ಎಸ್‌ಬಿಐಎಫ್ ಗ್ರಾಮ ಸಕ್ಷಂ ಯೋಜನೆಯಡಿ ಎಸ್ ಆರ್ ಎಸ್ ಡಿ ಸಂಸ್ಥಾಪಕ ಶಿಕಂದರ ಮೀರಾನಾಯಕ ಅವರಿಗೆ ಪ್ರೌಢಶಾಲಾ ಮತ್ತು ಕನ್ನಡಪ್ರಭ ಪತ್ರಿಕೆಯಿಂದ ಅಭಿನಂದನೆ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಪತ್ರಕರ್ತ ರಿಯಾಜಅಹ್ಮದ ದೊಡ್ಡಮನಿ, ಲಕ್ಷ್ಮಣ ದೊಡ್ಡಮನಿ, ಬಾಲಕರ ಪ್ರೌಢಶಾಲೆಯ ಮುಖ್ಯೋಪಾಧ್ಯಯ ಸಂಜೋತಾ ಸಂಕಣ್ಣವರ, ಜ್ಯೋತಿ ಶಿರೂರ, ಮೃತ್ಯುಂಜಯ ಹಿರೇಮಠ, ಎ.ವಿ. ಹಿರೇಮಠ, ಎ.ಬಿ. ಬೇವಿನಕಟ್ಟಿ, ವಿ.ಎಸ್. ಹಿರೇಮಠ, ಎಸ್.ಎಂ. ಹಂಚಿನಾಳ, ಡಿ.ಎಂ. ರಾಠೋಡ, ಬಿ.ಎಸ್. ಕಣವಿ, ಬಿ.ಎನ್.ಅಂಗಡಿ, ಪಿ.ಕೆ. ತಳವಾರ, ಎಂ.ಕೆ.ಹರಿಜನ್, ಆರ್.ಎಸ್. ಪಾಟೀಲ, ಶ್ವೇತಾ, ರಾಮಜಿ, ಸುನೀಲ್, ಮಾರುತಿ, ಈರಣ್ಣ ವಿಭೂತಿ, ದೇವಮ್ಮ ಕರದಾನಿ, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಇದ್ದರು.