ಇಂದ್ರಧನುಷ್‌ ಅಭಿಯಾನ ಯಶಸ್ಸಿಗೆ ಶ್ರಮಿಸಿ: ಡಿಸಿ

| Published : Oct 08 2023, 12:00 AM IST

ಇಂದ್ರಧನುಷ್‌ ಅಭಿಯಾನ ಯಶಸ್ಸಿಗೆ ಶ್ರಮಿಸಿ: ಡಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಇಂದ್ರಧನುಷ್‌ ಅಭಿಯಾನ ಯಶಸ್ಸಿಗೆ ಶ್ರಮಿಸಿ: ಡಿಸಿ
ವಿಡಿಯೋ ಸಂವಾದದ ಮೂಲಕ ಅಧಿಕಾರಿಗಳು ಮುಂಜಾಗ್ರತೆ ವಹಿಸಲು ಡಿಸಿ ಸೂಚನೆ ಕನ್ನಡಪ್ರಭ ವಾರ್ತೆ ಬೀದರ್ ಮಿಷನ್ ಇಂದ್ರಧನುಷ್‌ 5.0 ಅಭಿಯಾನದ ಮೂರನೆ ಸುತ್ತಿನ ಲಸಿಕಾ ಅಭಿಯಾನ ಕಾರ್ಯಕ್ರಮ ಬೀದರ್‌ ಜಿಲ್ಲೆಯಲ್ಲಿ ಅಕ್ಟೋಬರ್ 9ರಿಂದ 14ರ ವರೆಗೆ ಹಮ್ಮಿಕೊಂಡಿದ್ದು, ಈ ಅಭಿಯಾನದಲ್ಲಿ 0.5 ವರ್ಷದ ಎಲ್ಲಾ ಮಕ್ಕಳಿಗೆ ಲಸಿಕೆ ಹಾಕಿಸಬೇಕು ಮತ್ತು ಯಾವುದೇ ಮಕ್ಕಳು ಬಿಟ್ಟು ಹೋಗದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಮುಂಜಾಗ್ರತೆ ವಹಿಸಬೇಕೆಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು. ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿಡಿಯೋ ಸಂವಾದದ ಮೂಲಕ ಪರಿಣಾಮಕಾರಿ ಮಿಷನ್ ಇಂದ್ರಧನುಷ್‌ 5.0 ಅಭಿಯಾನ 3ನೇ ಸುತ್ತಿನ ಲಸಿಕಾ ಅಭಿಯಾನ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ಮಾತನಾಡಿ, ಗರ್ಭಿಣಿಯರು ಮತ್ತು 0.5 ವರ್ಷದ ಒಳಗಿನ ಮಕ್ಕಳು ಯಾವುದೇ ಲಸಿಕೆ ಪಡೆಯದವರು ಮೂರನೇ ಸುತ್ತಿನಲ್ಲಿ ಲಸಿಕೆಯನ್ನು ತಮ್ಮ ಸಮೀಪದ ಲಸಿಕಾ ಕೇಂದ್ರಗಳಿಗೆ ಹೊಗಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದರು. ತಾಲೂಕು ಮಟ್ಟದಲ್ಲಿ ತಹಸೀಲ್ದಾರ್‌, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳು ಸೇರಿ 3ನೇ ಸುತ್ತಿನ ಲಸಿಕಾ ಅಭಿಯಾನದಲ್ಲಿ ಯಾವುದೇ ಮಗು ಬಿಟ್ಟು ಹೋಗದಂತೆ ಯೋಜನೆ ರೂಪಿಸುವ ಮೂಲಕ ಸರಿಯಾಗಿ ಮೇಲ್ವಿಚಾರಣೆ ಮಾಡಬೇಕೆಂದರು. ಈಗಾಗಲೇ ಒಂದು ಮತ್ತು ಎರಡನೇ ಸುತ್ತಿನ ಲಸಿಕಾ ಅಭಿಯಾನ ಕೈಗೊಂಡಿದ್ದು, ಜಿಲ್ಲೆಯಲ್ಲಿ ಮೂರನೇ ಸುತ್ತಿನಲ್ಲಿ ಯಾವುದೇ ಮಗು ಉಳಿಯದಂತೆ ನೋಡಿಕೊಳ್ಳಬೇಕು. ಆರೋಗ್ಯ ಇಲಾಖೆಯ ಜೊತೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗನವಾಡಿ ಸಹಾಯಕಿಯರು ಮತ್ತು ಇತರೆ ಇಲಾಖೆಯ ಸಹಕಾರದೊಂದಿಗೆ ಈ ಅಭಿಯಾನ ಯಶಸ್ವಿಗೊಳಿಸಬೇಕೆಂದರು. ಹುಮನಾಬಾದ್‌ ಮತ್ತು ಬೀದರ್‌ ತಾಲೂಕುಗಳಲ್ಲಿ ಮಾತ್ರ ಈ ಹಿಂದೆ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ನೀಡಲಾಗಿದ್ದು, ಇನ್ನುಳಿದ ತಾಲೂಕಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. 3ನೇ ಸುತ್ತಿನಲ್ಲಿ ಎಲ್ಲಾ ತಾಲೂಕುಗಳಲ್ಲಿ ಮಕ್ಕಳಿಗೆ ಹೆಚ್ಚಿನ ಲಸಿಕೆ ಹಾಕುವಂತಾಗಬೇಕು ಮತ್ತು ತಮಗೆ ಸಿಬ್ಬಂದಿ ಕೊರತೆ ಇದ್ದರೆ ಲಸಿಕಾ ಅಭಿಯಾನದ ಸಂದರ್ಭದಲ್ಲಿ ಹೆಚ್ಚುವರಿಯಾಗಿ ಹೊರ ಗುತ್ತಿಗೆಯಲ್ಲಿ ನಿಯೋಜಿಸಬೇಕೆಂದರು. ಜಿಪಂ ಸಿಇಓ ಶಿಲ್ಪಾ ಎಂ. ಮಾತನಾಡಿ, ಲಸಿಕಾ ಅಭಿಯಾನದ ಸಂದರ್ಭದಲ್ಲಿ ವೈದ್ಯಕೀಯ ಅಧಿಕಾರಿಗಳು ಎಲ್ಲಾ ಕಡೆಗೆ ಲಸಿಕಾ ಕೇಂದ್ರಗಳಿಗೆ ಭೇಟಿ ನೀಡಿ, ಲಸಿಕೆ ಹೇಗೆ ನಡೆಯುತ್ತಿದೆ ಎಂಬ ಮಾಹಿತಿಯನ್ನು ಪಡೆಯುವದರ ಜೊತೆಗೆ ಸ್ಥಳೀಯವಾಗಿಯು ಮೇಲ್ವಿಚಾರಣೆ ಸರಿಯಾಗಿ ಮಾಡಬೇಕೆಂದರು. ಸಭೆಯಲ್ಲಿ ಜಿಲ್ಲಾ ಅರ್‌ಸಿಎಚ್ ಅಧಿಕಾರಿ ಡಾ. ಶಿವಶಂಕರ ಬಿ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೆಶಕ ಪ್ರಭಾಕರ್, ಎಸ್.ಎಮ್, ಡಾ.ಅನಿಲಕುಮಾರ ತಾಳಿಕೋಟಿ, ಡಾ.ರಾಜಶೇಖರ ಪಾಟೀಲ, ಡಾ. ಕಿರಣ ಪಾಟೀಲ್, ಡಾ.ಅನೀಲ ಚಿಂತಾಮಣಿ, ಡಾ.ದೀಪಾ ಖಂಡ್ರೆ, ಡಾ. ರಾಜಶೇಖರ ಪಾಟೀಲ್, ತಹಶಿಲ್ದಾರರು, ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ತಾಲೂಕು ವೈದ್ಯಾಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.