ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕೇರಳ ಸೇರಿದಂತೆ ಇತರೆ ರಾಜ್ಯಗಳು ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿವೆ. ಇದೇ ಮಾದರಿಯಲ್ಲಿ ರಾಜ್ಯದಲ್ಲೂ ಪ್ರವಾಸೋದ್ಯಮ ಬೆಳೆಯಬೇಕು. ಚಿತ್ರದುರ್ಗ ಪ್ರಮುಖ ಐತಿಹಾಸಿಕ ತಾಣವಾಗಿದೆ. ಇಲ್ಲಿನ ಪ್ರತಿಯೊಂದು ಕಲ್ಲು ಇತಿಹಾಸದ ದ್ಯೋತಕವಾಗಿವೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶವಿದ್ದು, ಇದರ ಅಭಿವೃದ್ಧಿಗೆ ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಕರೆ ನೀಡಿದರು.ನಗರದ ಕಾಮನಬಾವಿ ಬಡಾವಣೆಯ ಮಯೂರ ದುರ್ಗ ಹೋಟೆಲ್‌ನಲ್ಲಿ ಆಯೋಜಿಸಲಾದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮ ಹಾಗೂ ಚಿತ್ರಕಲಾ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ, ಕೋಟೆಯ ಇತಿಹಾಸ ಸಾರುವಲ್ಲಿ ಪ್ರವಾಸಿ ಮಾರ್ಗದರ್ಶಿ ಕೆಲಸ ಬಹುಮುಖ್ಯವಾದದು. ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಇಂದಿನ ಮಕ್ಕಳು ಪರಿಕ್ಷೆಗೆ ಪೂರಕವಾಗಿ ಅಧ್ಯಯನ ಮಾಡುತ್ತಾರೆ. ಆದರೆ ಜಿಲ್ಲೆಯ ಇತಿಹಾಸ ತಿಳಿದುಕೊಳ್ಳುವುದಿಲ್ಲ. ಮರೆತು ಹೋದ ಇತಿಹಾಸ ಕಟ್ಟಿಕೊಡುವ ಕೆಲಸವಾಗಬೇಕು ಎಂದರು.
ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಬಿ.ಹೆಚ್.ಶಶಿಕುಮಾರ್ ಮಾತನಾಡಿ, ಪ್ರವಾಸೋದ್ಯಮವು ಜಿಲ್ಲೆಯನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಹಾಗೂ ರಾಜಕೀಯವಾಗಿ ಸದೃಢಗೊಳಿಸಲು ಬಹುಮುಖ್ಯ ಪಾತ್ರವಹಿಸುತ್ತದೆ ಎಂದು ತಿಳಿಸಿ, ಪ್ರವಾಸಿ ಮಿತ್ರರು ಹಾಗೂ ಪ್ರವಾಸಿ ಗೈಡ್‌ಗಳ ಕೆಲಸವನ್ನು ಶ್ಲಾಘಿಸಿದರು.ಇದೇ ಸಂದರ್ಭದಲ್ಲಿ ಪ್ರವಾಸಿ ಮಾರ್ಗದರ್ಶಿ ಜನಾರ್ಧನ್ ಅವರ ಶ್ರೀ ರಾಮಾಯಣ ಕಥಾನಕಗಳು ಪುಸ್ತಕ ಮತ್ತು ಮದಕರಿ ನಾಯಕರ ಸಂದೇಶ ಸಾರುವ ಹಾಡಿನ ಪೋಸ್ಟರ್‌ಅನ್ನು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಗೃಹರಕ್ಷಕದಳ ಕಮಾಂಡೆಂಟ್ ಸಿ.ಕೆ.ಸಂಧ್ಯಾ, ಕೆಎಸ್‌ಟಿಡಿಸಿ ವ್ಯವಸ್ಥಾಪಕ ಚೇತನ್ ಸೇರಿದಂತೆ ಪ್ರವಾಸಿ ಮಿತ್ರರು ಹಾಗೂ ಪ್ರವಾಸಿ ಮಾರ್ಗದರ್ಶಿಗಳು, ಪ್ರವಾಸೋದ್ಯಮ ಇಲಾಖೆ ಸಿಬ್ಬಂದಿ ಇದ್ದರು.