ಬೂತ್ ಮಟ್ಟದಿಂದ ಬಿಜೆಪಿಗೆ ಶಕ್ತಿ ತುಂಬಲು ಶ್ರಮಿಸಿ: ಬಿವೈಆರ್‌

| Published : Feb 26 2024, 01:33 AM IST

ಸಾರಾಂಶ

ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಿಂದಾಗಿ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ. ಇದರಿಂದ, ಸಮಾಜವನ್ನು ಎಚ್ಚರಿಸುವ ಕಾರ್ಯ ಆಗಬೇಕಿದೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇಲ್ಲಿ ಬೂತ್ ಮಟ್ಟದಿಂದ ಪಕ್ಷಕ್ಕೆ ಶಕ್ತಿ ತುಂಬಲು ಶ್ರಮಿಸಬೇಕು. ಇದಕ್ಕೆ ಮೋರ್ಚಾಗಳ ಪದಾಧಿಕಾರಿಗಳ ಶ್ರಮ ಅಗತ್ಯ. ಆದ್ದರಿಂದ ಪಕ್ಷ ಸಂಘಟನೆಗೆ ಒಗ್ಗೂಡಬೇಕು ಎಂದು ಸಂಸದ ಬಿ‌.ವೈ.ರಾಘವೇಂದ್ರ ಶಿವಮೊಗ್ಗದಲ್ಲಿ ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಿಂದಾಗಿ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ. ಇದರಿಂದ, ಸಮಾಜವನ್ನು ಎಚ್ಚರಿಸುವ ಕಾರ್ಯ ಆಗಬೇಕಿದೆ ಎಂದು ಸಂಸದ ಬಿ‌.ವೈ.ರಾಘವೇಂದ್ರ ಹೇಳಿದರು.

ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಭಾನುವಾರ ಬಿಜೆಪಿ ನಗರ ಘಟಕ ವತಿಯಿಂದ ಆಯೋಜಿಸಿದ್ದ ವಿವಿಧ ಮೋರ್ಚಾಗಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇಲ್ಲಿ ಬೂತ್ ಮಟ್ಟದಿಂದ ಪಕ್ಷಕ್ಕೆ ಶಕ್ತಿ ತುಂಬಲು ಶ್ರಮಿಸಬೇಕು. ಇದಕ್ಕೆ ಮೋರ್ಚಾಗಳ ಪದಾಧಿಕಾರಿಗಳ ಶ್ರಮ ಅಗತ್ಯ. ಆದ್ದರಿಂದ ಪಕ್ಷ ಸಂಘಟನೆಗೆ ಒಗ್ಗೂಡಬೇಕು ಎಂದು ಕರೆ ನೀಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಿಜೆಪಿ ಎಲ್ಲ ವರ್ಗದವರಿಗೆ ನ್ಯಾಯ ಒದಗಿಸಲು ಶ್ರಮಿಸುತ್ತಿದೆ. ಮತದಾರರನ್ನು ದೇವರ ಸ್ಥಾನದಲ್ಲಿ ನೋಡಬೇಕು. ಆದ್ದರಿಂದ, ಕೇಂದ್ರ ಸರ್ಕಾರದ ಯೋಜನೆಗಳ ಕುರಿತ ಮತದಾರರಲ್ಲಿ ಅರಿವು ಮೂಡಿಸಬೇಕು ಎಂದರು.

ವಿಧಾನ ಪರಿಷತ್ತು ಮಾಜಿ ಸದಸ್ಯ ಎಂ.ಬಿ. ಭಾನುಪ್ರಕಾಶ್ ಮಾತನಾಡಿ, ದೇಶದ ಜನರು ಸ್ವಾತಂತ್ರ್ಯಹೋರಾಟಗಾರರಿಗೆ ತಮ್ಮ ಮನೆಗಳಲ್ಲಿ ರಕ್ಷಣೆ ನೀಡದೇ ಇದ್ದಿದ್ದರೆ, 1947ರ ಸ್ವಾತಂತ್ರ್ಯ ಹೋರಾಟ ಯಶಸ್ವಿಗೊಳ್ಳುತ್ತಿರಲಿಲ್ಲ. ಆದರೆ,‌ ಇದನ್ನು ಮರೆಮಾಚಿದ ಅಂದಿನ ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟದ ಕಿರೀಟ ಮೂಡಿಗೇರಿಸಿಕೊಂಡಿತು ಎಂದರು.

ದೇಶದಲ್ಲಿ ಅಧಿಕೃತ 1951ರಲ್ಲಿ ಮೊದಲ ಚುನಾವಣೆ ನಡೆಯಿತು. ಅದಕ್ಕೂ ಮುನ್ನ ಜವಾಹರ ಲಾಲ್ ನೆಹರು ಅವರು ದೇಶಕ್ಕೆ ಪ್ರಧಾನಮಂತ್ರಿ ಆಗಿದ್ದರು. ಅಂದು ದೇಶಕ್ಕಾಗಿ ಹೋರಾಟ ನಡೆಸಿದ ಕಾಂಗ್ರೆಸ್ ಬೇರೆ, ಅಧಿಕಾರಕ್ಕಾಗಿ ಹೋರಾಟ ನಡೆಸಿದ ಕಾಂಗ್ರೆಸ್ ಪಕ್ಷವೇ ಬೇರೆ. ಅಂದು ನೆಹರು ಅವರು, ಆರ್‌ಎಸ್ಎಸ್ ಸಂಘಟನೆಯನ್ನು ಹತ್ತಿಕ್ಕಲು ಹೊರಟರು. ಇದರ ವಿರುದ್ಧ ದ್ವನಿ ಎತ್ತಲು ಜನಸಂಘ ಸ್ಥಾಪನೆಗೊಂಡಿತು. ಅಂದಿನಿಂದ, ಇಂದಿನವರೆಗೆ ದೇಶದ ಜನಸಾಮಾನ್ಯರ ಪರವಾದ ನಿಲುವು ರೂಢಿಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.

ಬಿಜೆಪಿ ನಗರ ಘಟಕ ಅಧ್ಯಕ್ಷ ಮೋಹನ್ ರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ಪಕ್ಷಕ್ಕೆ ಶಕ್ತಿ ತುಂಬುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ. ಅದೇ ರೀತಿ, ಕಾರ್ಯಕರ್ತರನ್ನು ಮುನ್ನೆಲೆಗೆ ತರುವಲ್ಲಿ ಪಕ್ಷದ ಪ್ರಮುಖರು ಶ್ರಮಿಸುತ್ತಿದ್ದಾರೆ. ಬೂತ್ ಮಟ್ಟದಿಂದ ಪಕ್ಷವನ್ನು ಸದೃಢಪಡಿಸುವ ಕಾರ್ಯ ಎಲ್ಲ ಪದಾಧಿಕಾರಿಗಳು ಮಾಡಬೇಕು ಎಂದರು.

ಶಾಸಕ ಎಸ್.ಎನ್.ಚನ್ನಬಸಪ್ಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಜಿಲ್ಲಾ ಉಪಾಧ್ಯಕ್ಷ ಧನಂಜಯ್ ಸರ್ಜಿ, ವಿಧಾನ ಪರಿಷತ್ತು ಸದಸ್ಯ ಡಿ.ಎಸ್.ಅರುಣ್, ಮಾಜಿ ಸದಸ್ಯ ಆರ್.ಕೆ.ಸಿದ್ದರಾಮಣ್ಣ, ವಿಭಾಗದ ಪ್ರಭಾರ ಗಿರೀಶ್ ಪಟೇಲ್, ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಸ್.ದತ್ತಾತ್ರಿ, ಎನ್.ಜಿ.ನಾಗರಾಜ್, ಎನ್.ಕೆ.ಜಗದೀಶ್, ಎಸ್.ಜ್ಞಾನೇಶ್, ರೇಣುಕಾ ನಾಗರಾಜ್, ಕಾಂತೇಶ್, ಗಾಯತ್ರಿ ಮಲ್ಲಪ್ಪ, ಅಣ್ಣಪ್ಪ ಇದ್ದರು.

- - - -25ಎಸ್ಎಂಜಿಕೆಪಿ01:

ಶಿವಮೊಗ್ಗ ನಗರ ಬಿಜೆಪಿ ಘಟಕ ವತಿಯಿಂದ ಇಲ್ಲಿನ ದೈವಜ್ಞ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ವಿವಿಧ ಮೋರ್ಚಾಗಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಶಾಸಕ ಎಸ್‌.ಎನ್.ಚನ್ನಬಸಪ್ಪ ಉದ್ಘಾಟಿಸಿದರು.