ಅಸ್ಪೃಶ್ಯತೆ ನಿವಾರಣಗೆ ಶ್ರಮಿಸಿ

| Published : Mar 03 2024, 01:30 AM IST

ಸಾರಾಂಶ

ಗ್ರಾಮೀಣ ಪ್ರದೇಶದಲ್ಲಿ ಕೆಲವು ಕಡೆಗಳಲ್ಲಿ ಜಾರಿ ಇರುವ ಅಸ್ಪೃಶ್ಯತೆ ನಿವಾರಣೆಗೆ ಇಲಾಖೆಗಳು ಶ್ರಮಿಸುವುದಕ್ಕಿಂತ ಗ್ರಾಮದ ಜನರೇ ನಿವಾರಿಸಲು ಯತ್ನಿಸಬೇಕು. ಅಂದಾಗ ಮಾತ್ರ ಜಾತಿ ಪದ್ಧತಿಯನ್ನು ಬೇರು ಮಟ್ಟದಿಂದ ನಾಶ ಮಾಡಬಹುದು ಎಂದು ಡಿವೈಎಸ್ಪಿ ಎಂ. ಪಾಂಡುರಂಗಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗ

ಗ್ರಾಮೀಣ ಪ್ರದೇಶದಲ್ಲಿ ಕೆಲವು ಕಡೆಗಳಲ್ಲಿ ಜಾರಿ ಇರುವ ಅಸ್ಪೃಶ್ಯತೆ ನಿವಾರಣೆಗೆ ಇಲಾಖೆಗಳು ಶ್ರಮಿಸುವುದಕ್ಕಿಂತ ಗ್ರಾಮದ ಜನರೇ ನಿವಾರಿಸಲು ಯತ್ನಿಸಬೇಕು. ಅಂದಾಗ ಮಾತ್ರ ಜಾತಿ ಪದ್ಧತಿಯನ್ನು ಬೇರು ಮಟ್ಟದಿಂದ ನಾಶ ಮಾಡಬಹುದು ಎಂದು ಡಿವೈಎಸ್‌ಪಿ ಎಂ. ಪಾಂಡುರಂಗಯ್ಯ ಹೇಳಿದರು.

ತಾಲೂಕಿನ ಸುರೇಬಾನ ಪೊಲೀಸ್‌ ಠಾಣೆಯಲ್ಲಿ ರಾಮದುರ್ಗ ವಿಭಾಗಮಟ್ಟದ ಅನುಸೂಚಿತ ಜಾತಿ; ಜನಾಂಗದವರ ಸಭೆಯಲ್ಲಿ ಮಾತನಾಡಿದ ಅವರು, ಮೊದಲಿಗೆ ಮನಪರಿವರ್ತನೆಯಿಂದ ಅಸ್ಪೃಶ್ಯತೆ ನಿವಾರಿಸಲು ಯತ್ನಿಸಿ ಕೊನೆಗೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.

ಪರಿಶಿಷ್ಟರ ಉದ್ಧಾರಕ್ಕಾಗಿ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಸರ್ಕಾರಿ ಸೌಲಭ್ಯಗಳನ್ನು ಪರಿಶಿಷ್ಟ ಜಾತಿಯಲ್ಲಿಯೇ ಸುಶಿಕ್ಷಿತರು ಗ್ರಾಮದಲ್ಲಿ ಇರುವ ಜನರಿಗೆ ಸರಿಯಾಗಿ ತಲುಪಿಸಲು ಯತ್ನಿಸಬೇಕು. ಅಂದಾಗ ಮಾತ್ರ ಯೋಜನೆಯ ಅನುಷ್ಠಾನ ಸಮರ್ಪಕವಾಗಿ ಜರುಗಲಿದೆ ಎಂದು ಹೇಳಿದರು.

ಪ್ರತಿ ತಿಂಗಳಿಗೊಮ್ಮೆ ಪೊಲೀಸ್‌ಠಾಣೆ ಮಟ್ಟದಲ್ಲಿ ಪರಿಶಿಷ್ಟರ ಕುಂದುಕೊರತೆ ಸಭೆ ಜರುಗುತ್ತದೆ. ಮೂರು ತಿಂಗಳಿಗೊಮ್ಮೆ ಜಿಲ್ಲಾಮಟ್ಟದಲ್ಲಿ ಸಭೆ ಜರುಗುತ್ತದೆ. ಅಲ್ಲದೇ ಗ್ರಾಮಗಳ ಬೀಟ್‌ಪೊಲೀಸರು ಗ್ರಾಮಗಳಿಗೆ ತೆರಳಿ ಅಲ್ಲಿನವರ ತೊಂದರೆಗಳನ್ನು ಆಲಿಸಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತಾರೆ. ಇಷ್ಟಾಗಿಯೂ ದೌರ್ಜನ್ಯ ಪ್ರಕರಣಗಳು ಜರುಗಿದರೆ ನೇರವಾಗಿ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಬೇಕು ಎಂದು ತಿಳಿಸಿದರು.

ಮನೆಯ ಯಜಮಾನ ತೀರಿಕೊಂಡರೆ ಇಡೀ ಕುಟುಂಬವೇ ಬೀದಿ ಪಾಲಾಗುತ್ತದೆ. ಬೈಕ್‌ ಓಡಿಸುವ ಮುನ್ನ ಎಲ್ಲರೂ ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು. ಬಾಲ್ಯವಸ್ಥೆಯ ಮಕ್ಕಳಿಗೆ ಬೈಕ್‌ನೀಡಬಾರದು. ಬೈಕ್‌ ಖರೀದಿಸಿ ಓಡಿಸುವಷ್ಟು ಅನುಕೂಲ ಇರುವವರು ಮೊದಲಿಗೆ ಹೆಲ್ಮೆಟ್‌ ಖರೀದಿಗೆ ಆದ್ಯತೆ ನೀಡಬೇಕು ಎಂದು ಸೂಚಿಸಿದರು.

ಸಿಪಿಐ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಕಾನೂನು ಬಳಕೆ ಮಾಡಿ ಹೆಲ್ಮೆಟ್ ಧರಿಸಲು ಸಾರ್ವಜನಿಕರಿಗೆ ಹೊರೆ ಮಾಡುವುದಕ್ಕಿಂತ ಸವಾರರ ಮನ ಪರಿವರ್ತನೆ ಮಾಡುವ ಮೂಲಕ ಹೆಲ್ಮೆಟ್‌ ಖರೀದಿಗೆ ಪ್ರೇರಣೆ ನೀಡುವುದು ಇಲಾಖೆಯ ಮುಖ್ಯ ಉದ್ದೆಶವಾಗಿದೆ ಎಂದು ಹೇಳಿದರು.

ಸುರೇಬಾನ ಪೊಲೀಸ್‌ ಠಾಣೆ ವ್ಯಾಪ್ತಿಯ 32 ಗ್ರಾಮಗಳ ಸಾರ್ವಜನಿಕರು, ಪರಿಶಿಷ್ಠ ಜನಾಂಗದ ಮುಖಂಡರು, ಪೊಲೀಸ್‌ಸಿಬ್ಬಂದಿ ಸಭೆಯಲ್ಲಿ ಪಾಲ್ಗೊಂಡಿದ್ದರು.