ಸಾರಾಂಶ
ಕನ್ನಡಪ್ರಭ ವಾರ್ತೆ ಜಗಳೂರು
ತಾಲೂಕಿನಲ್ಲಿ ಉತ್ತಮ ಮಳೆಯಾಗುವ ಮೂಲಕ ಕೆರೆ- ಕಟ್ಟೆಗಳು ತುಂಬುತ್ತಿವೆ. ಈ ಹಿನ್ನೆಲೆ ಎಲ್ಲ ಇಲಾಖೆಗಳ ಅನುಷ್ಠಾನಾಧಿಕಾರಿಗಳು ರೈತರ ಬೆಳೆ ಹಾನಿ, ರಸ್ತೆ ದುರಸ್ತಿ ಸೇರಿದಂತೆ ರೈತರಿಗೆ ಬೇಕಾಗುವ ಅಗತ್ಯ ಸೌಲಭ್ಯಗಳು ಒದಗಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಬೇಕೆಂದು ಶಾಸಕ ಬಿ.ದೇವೇಂದ್ರಪ್ಪ ಸೂಚಿಸಿದರು.ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ 2024- 2025ನೇ ಸಾಲಿನ ಮೊದಲನೇ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ, ಅಧಿಕಾರಿಗಳ ಮಾಹಿತಿ ಪಡೆದು ಅವರು ಮಾತನಾಡಿದರು.
57 ಕೆರೆಗಳಿಗೆ ನೀರು ತುಂಬಿಸುವ ಮಹತ್ವದ ಯೋಜನೆ ಕಾಮಗಾರಿಗೆ ಆಯಾ ಭಾಗದ ಎಲ್ಲ ರೈತರೇ ಸಹಕರಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಅರಣ್ಯ ವ್ಯಾಪ್ತಿಯಲ್ಲಿ ಅನುಮೋದನೆ ನೀಡದೇ ಕಾಮಗಾರಿ ಕುಂಠಿತಕೊಂಡಿರುವುದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಶಾಸಕರು ಹರಿಹಾಯ್ದರು. ಕೂಡಲೇ ಕಾಮಗಾರಿ ಮಾಡಲು ಅನುವು ಮಾಡಿಕೊಡುವಂತೆ ಸೂಚನೆ ನೀಡಿದರು.ರಸ್ತೆ ಅಗಲೀಕರಣಕ್ಕೆ ಸೂಚನೆ:
ಪಟ್ಟಣದಲ್ಲಿ ಈಚೆಗೆ ಬಸ್ ಅಪಘಾತದಲ್ಲಿ ಇಬ್ಬರು ರೈತರು ಮರಣ ಹೊಂದಿದರು. ಆದರೆ, ಅರ್ಧ ಗಂಟೆಯಾದರೂ ಅಪಘಾತದ ಸ್ಥಳದಲ್ಲಿ ಪೊಲೀಸ್ ಇಲಾಖೆ ಸುಳಿವೇ ಇರಲಿಲ್ಲ. ನಾನೇ ಖುದ್ದಾಗಿ ಜನರನ್ನು ದೂರ ಕಳಿಸಲು ಪ್ರಯತ್ನಿಸಿದೆ. ಇಂತಹ ನಿರ್ಲಕ್ಷದ ಪೊಲೀಸ್ ಇಲಾಖೆಗೆ ಧಿಕ್ಕಾರ ಹೇಳಲು ಬಯಸುತ್ತೇನೆ. ಮುಂದೆ ಇಂಥ ನಿರ್ಲಕ್ಷ್ಯ ಆಗದಿರಲಿ ಎಂದು ಎಚ್ಚರಿಕೆ ನೀಡಿದರು.ಪಟ್ಟಣದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪಟ್ಟಣದ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಗುರ್ತಿಸುವಿಕೆ ಪ್ರಕ್ರಿಯೆ ಮಾಡಿಲ್ಲ. ಟೆಂಡರ್ ಪ್ರಕ್ರಿಯೆ ವಿಳಂಬವಾಗುತ್ತಿದೆ. ಕೂಡಲೇ ಕಾರ್ಯಪ್ರವೃತ್ತರಾಗಬೇಕೆಂದು ಸೂಚಿಸಿದರು.
ಉತ್ತಮ ಮಳೆಯಾಗುತ್ತಿದ್ದು, ಸಣ್ಣ ನೀರಾವರಿ ಇಲಾಖೆಯವರು, ಜಿಪಂ ಅಧಿಕಾರಿಗಳು ಸೇರಿ ತಮ್ಮ ಇಲಾಖೆಗಳ ವ್ಯಾಪ್ತಿ ಬರುವ ಕೆರೆಗಳ ಸಂರಕ್ಷಣೆಗೆ ಒತ್ತು ನೀಡಬೇಕು. ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಿಕ್ಷಣಕ್ಕೆ ಒತ್ತು ನೀಡುವ ಜೊತೆಗೆ ಶಿಥಿಲಗೊಂಡ ಶಾಲೆಗಳಿಗೆ ತಕ್ಷಣವೇ ರಿಪೇರಿ, ಅವಶ್ಯವಾದ ಕಡೆ ಶಾಲಾ ಕೊಠಡಿ ನಿರ್ಮಾಣ ಮಾಡೋಣ. ಎಲ್ಲ ಗ್ರಾಮ ಪಂಚಾಯಿತಿಗಳು, ಇಲಾಖೆಗಳ ವ್ಯಾಪ್ತಿಗಳಲ್ಲಿ ಅಂಗವಿಕಲರು, ವೃದ್ಧರಿಗಾಗಿ ರ್ಯಾಂಪ್ ಅಳವಡಿಸಬೇಕು. ದೂರುಗಳು ಬಂದಲ್ಲಿ ಅಂತಹ ಇಲಾಖೆಗೆ ನಾನೇ ಖುದ್ದು ಬಂದು ಕಿವಿ ಹಿಂಡುವ ಕೆಲಸ ಮಾಡುವೆ ಎಂದೂ ಸಹ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಕಾಲು ದಾರಿ ಬಿಡಿ:
ತಹಸೀಲ್ದಾರ್ ಸಯಿದ್ ಕಲೀಂ ಉಲ್ಲಾ ಮಾತನಾಡಿ, ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಸೇರಿದಂತೆ ತಮ್ಮ ತಮ್ಮ ಇಲಾಖೆಗಳ ವ್ಯಾಪ್ತಿಯಲ್ಲೇ ಅಧಿಕಾರವಿರುತ್ತದೆ. ಅಲ್ಲೇ ಅಧಿಕಾರ ಚಲಾಯಿಸಿ ಕೆಲಸ ನಿರ್ವಹಿಸುವ ಕೆಲಸ ಮಾಡಬೇಕು. ಅದನ್ನು ಬಿಟ್ಟು ತಹಸೀಲ್ದಾರ್ ಕಡೆ ಬೊಟ್ಟು ಮಾಡುವ ಕೆಲಸ ಬಿಡಬೇಕು. ಅತಿ ಅವಶ್ಯವಿದ್ದಲ್ಲಿ ಮಾತ್ರ ತಹಸೀಲ್ದಾರ್ ಸಹಾಯ ಬಳಸಿಕೊಳ್ಳಬೇಕು ಎಂದರು.ಪಶು ಇಲಾಖೆ ಸಹಾಯಕ ನಿರ್ದೇಶಕ ಲಿಂಗರಾಜು, ಸಾಮಾಜಿಕ ವಲಯ ಅರಣ್ಯ ಇಲಾಖಾಧಿಕಾರಿ ಶ್ರೀನಿವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ಹಾಲಮೂರ್ತಿ ಸೇರಿದಂತೆ ತಾಲೂಕಿನ ವಿವಿಧ ಇಲಾಖೆ ಅನುಷ್ಠಾನಾಧಿಕಾರಿಗಳು ತಮ್ಮ ತಮ್ಮ ಇಲಾಖೆಗಳ ವರದಿ ಮಂಡಿಸಿದರು.
ಈ ಸಂದರ್ಭ ದಾವಣಗೆರೆ ಜಿಲ್ಲಾ ಡಿಡಿಪಿಐ ಕೊಟ್ರೇಶ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ಕೆಂಚಪ್ಪ, ತಾಲೂಕುಮಟ್ಟದ ವಿವಿಧ ಇಲಾಖೆಗಳ ಎಲ್ಲ ಅನುಷ್ಠಾನಾಧಿಕಾರಿಗಳು, ತಾ.ಪಂ. ವ್ಯವಸ್ಥಾಪಕ ರವಿಕುಮಾರ್, ಸಿಬ್ಬಂದಿ, ಪಿಡಿಒಗಳು ಸಭೆಯಲ್ಲಿ ಉಪಸ್ಥಿತರಿದ್ದರು.* ಕಾನೂನು ಬಳಸಿ ಹೊಲಕ್ಕೆ ದಾರಿ ಅನೇಕ ರೈತರು ನಮಗೆ ಹೊಲಕ್ಕೆ ಓಡಾಡಲು ತೊಂದರೆ ಕೊಡುತ್ತಾರೆ. ನಕಾಶೆ ದಾರಿಗಳನ್ನು ಕೆಲ ರೈತರು ಒತ್ತುವರಿ ಮಾಡಿಕೊಂಡಿದ್ದಾರೆ. ರೂಢಿ ದಾರಿ ಮೊದಲು ಇತ್ತು. ಈಗ ಬಿಡುತ್ತಿಲ್ಲ ಎಂಬ ದೂರುಗಳು ಬಂದಿವೆ. ಓಡಾಡಲು ರೂಢಿ ದಾರಿಗೆ 8 ಅಡಿ, ನಕಾಶೆ ಬಂಡಿದಾರಿಗೆ 20 ಅಡಿ ಅವಕಾಶವಿರುತ್ತದೆ. ಸ್ಥಳ ಮಹಜರು ಮಾಡಿ, ತಡೆಹಿಡಿದ ರೈತರಿಗೆ ಮನವರಿಕೆ ಮಾಡಿ, ದಾರಿ ಬಿಡಿಸಲು ಪ್ರತ್ನಿಸುತ್ತೇವೆ. ಇಲ್ಲವಾದರೆ ಕಾನೂನಿನ ಪ್ರಕಾರವೇ ಪೊಲೀಸ್ ಇಲಾಖೆ ಮೂಲಕ ದಾರಿ ಬಿಡಿಸಿಕೊಡಲಾಗುತ್ತದೆ ಎಂದು ರೈತರಿಗೆ ಶಾಸಕ ದೇವೇಂದ್ರಪ್ಪ ಭರವಸೆ ನೀಡಿದರು.