ಪಾರ್ಶ್ವವಾಯು (ಸ್ಟ್ರೋಕ್) ಗಂಭೀರ ಆರೋಗ್ಯ ಸಮಸ್ಯೆಯಾಗಿದ್ದು, ಇದರ ಆರಂಭಿಕ ಲಕ್ಷಣಗಳನ್ನು ಗುರುತಿಸಿ ನಿಗದಿತ ಸಮಯದಲ್ಲಿ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆದುಕೊಂಡರೆ ಜೀವಹಾನಿ ಹಾಗೂ ಶಾಶ್ವತ ಅಂಗವೈಕಲ್ಯವನ್ನು ತಪ್ಪಿಸಬಹುದು.
ಕನ್ನಡಪ್ರಭ ವಾರ್ತೆ ಗದಗ
ಪಾರ್ಶ್ವವಾಯು (ಸ್ಟ್ರೋಕ್) ಗಂಭೀರ ಆರೋಗ್ಯ ಸಮಸ್ಯೆಯಾಗಿದ್ದು, ಇದರ ಆರಂಭಿಕ ಲಕ್ಷಣಗಳನ್ನು ಗುರುತಿಸಿ ನಿಗದಿತ ಸಮಯದಲ್ಲಿ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆದುಕೊಂಡರೆ ಜೀವಹಾನಿ ಹಾಗೂ ಶಾಶ್ವತ ಅಂಗವೈಕಲ್ಯವನ್ನು ತಪ್ಪಿಸಬಹುದು ಎಂದು ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಹಾಗೂ ಕಭಿ ಕಾರ್ಯಕ್ರಮದ ನೋಡಲ್ ಅಧಿಕಾರಿ ಡಾ. ಜಿ.ಎಸ್. ಪಲ್ಲೇದ ತಿಳಿಸಿದರು.ನಗರದ ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಸ್ಟ್ರೋಕ್ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸಾಮಾನ್ಯವಾಗಿ ವಯಸ್ಸಾದವರಲ್ಲಿ ಕಾಣಿಸಿಕೊಳ್ಳುತ್ತಿದ್ದ ಸ್ಟ್ರೋಕ್ ಇತ್ತೀಚಿನ ದಿನಗಳಲ್ಲಿ ಯುವಪೀಳಿಗೆಯಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ಸಂಗತಿ. ಜಾಗತಿಕವಾಗಿ ಅತಿ ಹೆಚ್ಚು ಸಾವು ಸಂಭವಿಸುವ ಕಾಯಿಲೆಗಳ ಪೈಕಿ ಹೃದಯಾಘಾತದ ನಂತರ ಸ್ಟ್ರೋಕ್ ಎರಡನೇ ಸ್ಥಾನದಲ್ಲಿದೆ. ಯಾವುದೇ ಕಾರಣದಿಂದ ಮೆದುಳಿಗೆ ರಕ್ತ ಸರಬರಾಜು ಕೆಲವೇ ನಿಮಿಷಗಳ ಕಾಲ ಸ್ಥಗಿತಗೊಂಡರೂ ನರಕೋಶಗಳು ನಿರ್ಜೀವಗೊಳ್ಳುತ್ತವೆ. ದೇಹದ ಸಮತೋಲನ ತಪ್ಪುವುದು, ಮುಖ ಒಂದು ಕಡೆ ವಾಲಿಕೊಳ್ಳುವುದು, ತೊದಲಿನ ಮಾತು, ಆಹಾರ ನುಂಗಲು ಕಷ್ಟವಾಗುವುದು ಹಾಗೂ ಕೈ-ಕಾಲುಗಳು ಮರಗಟ್ಟಿದಂತಾಗುವುದು ಇದರ ಪ್ರಮುಖ ಲಕ್ಷಣಗಳಾಗಿವೆ. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಸ್ಟ್ರೋಕ್ ಅಪಾಯವನ್ನು ಬಹುಮಟ್ಟಿಗೆ ತಡೆಗಟ್ಟಬಹುದು ಎಂದರು.ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಬಿ.ಸಿ. ಕರಿಗೌಡ್ರ ಮಾತನಾಡಿ, ಸ್ಟ್ರೋಕ್ ಲಕ್ಷಣಗಳು ಕಂಡುಬಂದ ತಕ್ಷಣ ಸುವರ್ಣಾವಧಿಯೊಳಗೆ (ಗೋಲ್ಡನ್ ಅವರ್) ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ಪಡೆಯುವ ಮಹತ್ವವನ್ನು ವಿವರಿಸಿದರು. ವೈದ್ಯಕೀಯ ವಿಜ್ಞಾನ ಸಂಸ್ಥೆಯ ಜನರಲ್ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ. ಸಂಗಮೇಶ ಅಸೂಟಿ ಮಾತನಾಡಿದರು. ಇದೇ ವೇಳೆ ಸ್ಟ್ರೋಕ್ ಜಾಗೃತಿ ಕರಪತ್ರ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ. ಬೆನ್ನೂರ, ಕಭಿ ಕಾರ್ಯಕ್ರಮದ ಜಿಲ್ಲಾ ಸಂಯೋಜಕ ಪ್ರವೀಣ ರೋಣ, ವೈದ್ಯಕೀಯ ಅಧೀಕ್ಷಕ ಡಾ. ವಿನಾಯಕ ಪಂಚಾಗಾರ, ಎಲುಬು ಕೀಲು ವಿಭಾಗದ ಮುಖ್ಯಸ್ಥ ಡಾ. ಮಹಾಂತೇಶ ಪಾಟೀಲ, ಪಲ್ಮನರಿ ವಿಭಾಗದ ಡಾ. ಇರ್ಫಾನ್, ನ್ಯೂರೋ ಫಿಸಿಶಿಯನ್ ಡಾ. ವಿನಯಕುಮಾರ ಎಸ್.ಎಂ., ಸಂಯೋಜಕ ವಿಶ್ವನಾಥ್, ಜಿಲ್ಲಾ ಆಸ್ಪತ್ರೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.