ಕುದರಗುಂಡಿ ಕಾಲೋನಿಯಲ್ಲಿ ವಾಸವಿರುವ ಪರಿಶಿಷ್ಟ ಜಾತಿಗೆ ಸೇರಿದ ರೈತರಾದ ನಾವು ಗ್ರಾಮ ಅಸ್ತಿತ್ವಕ್ಕೆ ಬಂದ ಸಮಯದಲ್ಲಿ ಬಡ ಕೂಲಿಕಾರರು, ದಲಿತರು ವಲಸೆ ಬಂದಾಗ ಸರ್ಕಾರ ಅವರಿಗೆ ಜೀವನ ಮಾಡುವ ಉದ್ದೇಶಕ್ಕಾಗಿ ಮತ್ತು ಪುನರ್ವಸತಿಗಾಗಿ ಸರ್ಕಾರ ಜಮೀನನ್ನು ನೀಡಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮದ್ದೂರು ತಾಲೂಕು ಕುದರಗುಂಡಿ ಸರ್ವೇ ನಂ.೨೪೫ರಲ್ಲಿ ೧೦೯ ಎಕರೆ ಜಮೀನನ್ನು ಕೆಐಎಡಿಬಿ ವಶಪಡಿಸಿಕೊಳ್ಳಲು ಹೊರಟಿರುವ ಕ್ರಮವನ್ನು ಗೆಜ್ಜಲಗೆರೆ, ಕುದರಗುಂಡಿ ಗ್ರಾಮದ ಗ್ರಾಮಸ್ಥರು ವಿರೋಧಿಸಿ ಪ್ರತಿಭಟನೆ ನಡೆಸಿದರು.

ಕುದರಗುಂಡಿ ಕಾಲೋನಿಯಲ್ಲಿ ವಾಸವಿರುವ ಪರಿಶಿಷ್ಟ ಜಾತಿಗೆ ಸೇರಿದ ರೈತರಾದ ನಾವು ಗ್ರಾಮ ಅಸ್ತಿತ್ವಕ್ಕೆ ಬಂದ ಸಮಯದಲ್ಲಿ ಬಡ ಕೂಲಿಕಾರರು, ದಲಿತರು ವಲಸೆ ಬಂದಾಗ ಸರ್ಕಾರ ಅವರಿಗೆ ಜೀವನ ಮಾಡುವ ಉದ್ದೇಶಕ್ಕಾಗಿ ಮತ್ತು ಪುನರ್ವಸತಿಗಾಗಿ ಸರ್ಕಾರ ಜಮೀನನ್ನು ನೀಡಿದೆ. ಈ ಭೂಮಿಯಲ್ಲಿ ಆಹಾರ ಧಾನ್ಯಗಳನ್ನು ಬೆಳೆದು ರೈತರು ಜೀವನ ನಡೆಸುತ್ತಿದ್ದಾರೆ. ಕುಟುಂಬಗಳು ಸಂಪೂರ್ಣವಾಗಿ ಈ ಜಮೀನಿನ ಮೇಲೆ ಅವಲಂಬಿತವಾಗಿದೆ. ಯಾರ ಗಮನಕ್ಕೂ ತರದೆ ಏಕಾಏಕಿ ಅಧಿಸೂಚನೆ ಹೊರಡಿಸಿ ನಮ್ಮ ಬದುಕಿನ ಹಕ್ಕನ್ನು ಕಸಿದು ಸಾವಿನ ದವಡೆಗೆ ನೂಕುವ ಪ್ರಯತ್ನವಾಗಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಶ್ರೀನಿವಾಸ್, ಶಂಕರ್ ಸಿದ್ದಯ್ಯ, ಬಿ.ಕುಮಾರ, ಸಿದ್ದರಾಜು, ಪುನೀತ್, ಬೊಮ್ಮೇಗೌಡ, ಶಿವಣ್ಣ, ಟಿ.ನಾಗೇಂದ್ರ ಇತರರಿದ್ದರು.ಕುದರಗುಂಡಿ ಕಾಲೋನಿಯಲ್ಲಿ ಕೈಗಾರಿಕೆಗೆ ಗುರುತಿಸಿರುವ ಜಾಗದ ಪಕ್ಕದಲ್ಲೇ ಗ್ರಾಮವಿದೆ. ಸರ್ಕಾರಿ ಶಾಲೆ, ದೇವಸ್ಥಾನವೂ ಇದೆ. ಕೈಗಾರಿಕೆ ಸ್ಥಾಪನೆಯಿಂದ ಪರಿಸರ ಮಾಲಿನ್ಯ ಉಂಟಾಗಿ ಜನರಿಗೆ ತೊಂದರೆಯಾಗಲಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದೆ. ಈ ಸಮಯದಲ್ಲಿ ಭೂಮಿ ಕಸಿಯುವ ಪ್ರಯತ್ನ ನಡೆಸಿರುವುದು ನ್ಯಾಯಾಂಗದ ನಿಯಮಗಳ ಉಲ್ಲಂಘನೆಯಾಗಲಿದೆ.

- ಎನ್.ಎಲ್.ಭರತ್‌ರಾಜ್, ಮುಖಂಡರು, ಸಿಐಟಿಯು