ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿಕೇಂದ್ರ ಸರ್ಕಾರ ಪುನಃ ಕಸ್ತೂರಿ ರಂಗನ್ ವರದಿ ಜಾರಿಯ ಬಗ್ಗೆ ರಾಜ್ಯ ಸರ್ಕಾರದಿಂದ ವರದಿ ಕೇಳಿರುವ ಹಿನ್ನೆಲೆಯಲ್ಲಿ ಬೈಂದೂರು ತಾಲೂಕಿನ ಜಡ್ಕಲ್ ಮತ್ತು ಮುದೂರು ಗ್ರಾಮಗಳ ಸಾವಿರಾರು ಮಂದಿ ಗ್ರಾಮಸ್ಥರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.ಕಸ್ತೂರಿ ರಂಗನ್ ವರದಿಯಲ್ಲಿ ಜಡ್ಕಲ್ ಹಾಗೂ ಮುದೂರು ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶಗಳ ಪಟ್ಟಿಯಿಂದ ಕೈಬಿಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿ, ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಈ ಎರಡು ಗ್ರಾ.ಪಂ.ಗಳ 18 ಜನ ವಸತಿ ಪ್ರದೇಶಗಳು ವರದಿಯಲ್ಲಿ ಸೂಕ್ಷ್ಮ ಪ್ರದೇಶಗಳ ವ್ಯಾಪ್ತಿಗೆ ಸೇರಿಸಲಾಗಿವೆ. ಪ್ರದೇಶಗಳಲ್ಲಿ ಸುಮಾರು 20,000ಕ್ಕೂ ಹೆಚ್ಚು ಜನರು ವಾಸವಾಗಿದ್ದಾರೆ. ಅವರಲ್ಲಿ ಬಹುತೇಕ ಮಂದಿ ಆದಿವಾಸಿ, ಬುಡಕಟ್ಟು, ಪರಿಶಿಷ್ಟ ಜಾತಿ ಪಂಗಡದ ಜನರಾಗಿದ್ದಾರೆ. ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರೂ ಕೂಡ ಗರಿಷ್ಠ ಮಟ್ಟದಲ್ಲಿ ಇಲ್ಲಿದ್ದಾರೆ. ಅನಾದಿ ಕಾಲದಿಂದ ಈ ಭಾಗದಲ್ಲಿ ಬದುಕು ಕಟ್ಟಿಕೊಂಡ ಈ ಜನರು, ಕಸ್ತೂರಿ ರಂಗನ್ ವರದಿ ಜಾರಿಯಾದಲ್ಲಿ ನೆಲೆ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಆದ್ದರಿಂದ ಜೀವ ವಿರೋಧಿ ನಿಲುವಿನಿಂದ ಕೂಡಿರುವ ಈ ವರದಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ಪ್ರತಿಭಟನೆಗೆ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಶಾಸಕ ಗೋಪಾಲ ಪೂಜಾರಿ, ಕಲ್ಕುಳಿ ವಿಠಲ ಹೆಗಡೆ ಸೇರಿದಂತೆ ಅನೇಕರು ಬೆಂಬಲ ನೀಡಿ ಭಾಗಿಯಾಗಿದ್ದರು. ಮಂಜುನಾಥ ಭಂಡಾರಿ ಅವರು ಪ್ರತಿಭಟನಾಕಾರರಿಂದ ಮನವಿಯನ್ನು ಸ್ವೀಕರಿಸಿ, ಅದನ್ನು ಸರ್ಕಾರದ ಗಮನಕ್ಕೆ ತಂದು ಜನರಿಗೆ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದರು.