ರಾಜ್ಯದಲ್ಲಿ ತೀವ್ರ ಮಳೆ ಕೊರತೆಯಿಂದಾಗಿ ಸರ್ಕಾರ ಮೋಡ ಬಿತ್ತನೆಗೆ ಮುಂದಾಗಿದ್ದು, ಜಿಲ್ಲೆಯಲ್ಲಿ ಮೋಡ ಬಿತ್ತನೆಗೆ ತೀವ್ರ ವಿರೋಧ ವ್ಯಕ್ತಗೊಂಡಿದ್ದು, ಹೆಚ್ಚು ಮಳೆಯಾಗಿ ಕಾಫಿಗೆ ಹಾನಿಯಾದರೆ ಸರ್ಕಾರವೇ ಪರಿಹಾರ ನೀಡಬೇಕೆಂಬ ಆಗ್ರಹಗಳು ಕೇಳಿಬಂದಿದೆ.
ವಿಘ್ನೇಶ್ ಎಂ. ಭೂತನಕಾಡು
ಕನ್ನಡಪ್ರಭ ವಾರ್ತೆ ಮಡಿಕೇರಿರಾಜ್ಯದಲ್ಲಿ ತೀವ್ರ ಮಳೆ ಕೊರತೆಯಿಂದಾಗಿ ಸರ್ಕಾರ ಮೋಡ ಬಿತ್ತನೆಗೆ ಮುಂದಾಗಿದ್ದು, ಜಿಲ್ಲೆಯಲ್ಲಿ ಮೋಡ ಬಿತ್ತನೆಗೆ ತೀವ್ರ ವಿರೋಧ ವ್ಯಕ್ತಗೊಂಡಿದ್ದು, ಹೆಚ್ಚು ಮಳೆಯಾಗಿ ಕಾಫಿಗೆ ಹಾನಿಯಾದರೆ ಸರ್ಕಾರವೇ ಪರಿಹಾರ ನೀಡಬೇಕೆಂಬ ಆಗ್ರಹಗಳು ಕೇಳಿಬಂದಿದೆ.
ಪ್ರಸಕ್ತ ವರ್ಷದಲ್ಲಿ ಮಳೆ ಕೊರತೆ ಹಿನ್ನೆಲೆ ರಾಜ್ಯದಲ್ಲಿ ಮೋಡ ಬಿತ್ತನೆ ಕಾರ್ಯಕ್ರಮ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ಈ ಹಿಂದೆ ಮುಖ್ಯಮಂತ್ರಿ ಡಿ.ಕೆ.ಶಿವಕು ಮಾರ್ ಅವರು ವಿಭಾಗವಾರು ನಡೆಸಿದ ಸಭೆಯಲ್ಲಿ ಜನಪ್ರತಿನಿಧಿಗಳು ಮೋಡ ಬಿತ್ತನೆಗಾಗಿ ಆಗ್ರಹಿಸಿದ್ದರು. ಅದಕ್ಕೆ ಪೂರಕವಾಗಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮೋಡ ಬಿತ್ತನೆ ಪ್ರಸ್ತಾವ ಸಲ್ಲಿಸಿತ್ತು.ಜೂನ್ ತಿಂಗಳ ಅಂತ್ಯಕ್ಕೆ ಶೇ.42 ಹಾಗೂ ಜುಲೈ ಅಂತ್ಯಕ್ಕೆ ಶೇ.29ರಷ್ಟು ಮಳೆ ಕೊರತೆ ಕಾಣಿಸಿಕೊಂಡಿತ್ತು. ಇನ್ನು, ಆ.13ರ ವೇಳೆಗೆ ರಾಜ್ಯದ 31 ಜಿಲ್ಲೆಗಳ ಪೈಕಿ 27 ಜಿಲ್ಲೆಗಳ 178 ತಾಲೂಕುಗಳಲ್ಲಿ ಮಳೆ ಕೊರತೆಯುಂಟಾಗಿದೆ.
ಈ ಕಾರಣದಿಂದಾಗಿ ಸರ್ಕಾರ ಮಳೆ ಕೊರತೆ ಪ್ರದೇಶದಲ್ಲಿ ಮೋಡ ಬಿತ್ತನೆ ಮೂಲಕ ಮುಂದಾಗಿದೆ. ಮಳೆ ಕೊರತೆ ಪ್ರದೇಶ ಗುರುತಿಸಿ ಅಲ್ಲಿ 60 ದಿನಗಳಲ್ಲಿ 200 ಗಂಟೆಗಳ ವೈಮಾನಿಕ ಹಾರಾಟ ಮೂಲಕ ಮೋಡ ಬಿತ್ತನೆ ಮಾಡಲು ಆದೇಶಿಸಲಾಗಿದೆ. ಇದಕ್ಕಾಗಿ ಸರ್ಕಾರ ಒಟ್ಟು 28.52 ಕೋಟಿ ರು. ವ್ಯಯಿ ಸುತ್ತಿದೆ.ಕೊಡಗು ಮಳೆ ಆಧಾರಿತ ಕೃಷಿ ಪ್ರದೇಶವಾಗಿದ್ದು, ವಿಶೇಷವಾಗಿ ಕಾಫಿ ಬೆಳೆಗಾರರ ಜೀವನೋಪಾಯವು ಮಳೆಯ ಪ್ರಮಾಣ, ಸಮಯ ಮತ್ತು ತೇವಾಂಶದ ಸಮತೋಲನದ ಮೇಲೆ ಬಹಳಷ್ಟು ಅವಲಂಬಿತವಾಗಿದೆ.
ಮೋಡ ಬಿತ್ತನೆ ನಡೆಸುವ ಪ್ರದೇಶಗಳ ಹವಾಮಾನ ಮಾದರಿ, ಗಾಳಿಯ ದಿಕ್ಕು ಮತ್ತು ಮೋಡಗಳ ಚಲನೆಯ ಆಧಾರದ ಮೇಲೆ ಕೊಡಗಿನ ಮೇಲೆ ಸಂಭವಿಸಬಹುದಾದ ಪರಿಣಾಮವನ್ನು ಅಧ್ಯಯನ ಮಾಡಲಾಗಿದೆಯೇ ಎಂದು ಕೆಲವರು ಪ್ರಶ್ನಿಸಿದಿದ್ದಾರೆ.ಮೋಡ ಬಿತ್ತನೆಯಿಂದ ಕೊಡಗಿನ ಕಾಫಿ ಬೆಳೆ ಮೇಲೆ ಅದರ ಪರಿಣಾಮವನ್ನು ಸರ್ಕಾರ ಹೇಗೆ ಮೇಲ್ವಿಚಾರಣೆ ಮಾಡಲಿದೆ. ಮೋಡ ಬಿತ್ತನೆಯ ನಂತರ ಅತಿಯಾದ ಮಳೆಯಿಂದ ಕಾಫಿ ಹಣ್ಣು ಉದುರುವಿಕೆ ಹೆಚ್ಚಾದರೆ ಕೊಳೆರೋಗ, ಕಾಫಿ ಉತ್ಪಾದನೆ ಕಡಿಮೆಯಾದರೆ, ಬೆಳೆ ಗುಣಮಟ್ಟ ಮತ್ತು ರೈತರ ಆದಾಯಕ್ಕೆ ನಷ್ಟವಾದರೆ ಕೊಡಗಿನ ಬೆಳೆಗಾರರ ಪರಿಸ್ಥಿತಿ ಏನೆಂದು ಪ್ರಶ್ನಿಸಿದ್ದಾರೆ.
ರೈತರಿಗೆ ಸರ್ಕಾರ ಯಾವ ರೀತಿಯ ತಾಂತ್ರಿಕ ನೆರವು, ರೋಗ ನಿಯಂತ್ರಣ ಸಹಾಯ, ಬೆಳೆ ನಷ್ಟ ಪರಿಹಾರ ಅಥವಾ ಆರ್ಥಿಕ ಭದ್ರತೆಯನ್ನು ಒದಗಿಸಲಿದೆ ಎಂದು ಪ್ರಶ್ನಿಸಿದ್ದಾರೆ.ಇಂದಿನ ಪರಿಸ್ಥಿತಿಯಲ್ಲಿ ಕೊಡಗಿನಲ್ಲಿ ಮೋಡ ಬಿತ್ತನೆ ಮಾಡಿದರೆ ರೈತರ ಬೆಳೆಗೆ ಹಾನಿಯಾಗಲಿದೆ, ಕೊಳೆ ರೋಗ ಕಾಡಲಿದೆ. ಅತಿಯಾದ ಮಳೆಯಿಂದ ಕೊಡಗಿನ ರಸ್ತೆಗಳು ಮತ್ತಷ್ಟು ಹದಗೆಡಲಿವೆ, ಅಲ್ಲದೆ ಗುಡ್ಡ ಕುಸಿಯುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಹಿತದೃಷ್ಟಿಯಿಂದ ಮೋಡ ಬಿತ್ತನೆ ಕಾರ್ಯಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ ಕೊಡಗಿನ ಜನರ ಹಿತದೃಷ್ಟಿಯನ್ನು ಮೊದಲು ಗಮನದಲ್ಲಿಟ್ಟುಕೊಳ್ಳಬೇಕು. ಮೋಡ ಬಿತ್ತನೆಯಿಂದ ಕೊಡಗಿಗೆ ನಷ್ಟವಾದರೆ ಅದಕ್ಕೆ ಸರ್ಕಾರವೇ ನೇರ ಹೊಣೆ ಎಂದು ಹೇಳಿದ್ದಾರೆ.ಮೋಡ ಬಿತ್ತನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಚರ್ಚೆಯಾಗುತ್ತಿದ್ದು, ಕೊಡಗಿನಲ್ಲಿ ಯಾವುದೇ ಕಾರಣಕ್ಕೆ ಮೋಡ ಬಿತ್ತನೆ ಮಾಡದಂತೆ ಒತ್ತಾಯಿಸಿದ್ದಾರೆ.ಮೋಡ ಬಿತ್ತನೆ ಮಾಡುವ ಚಿಂತನೆ ನಡೆಸಲಾಗುತ್ತಿದೆ ಎಂಬ ಹೇಳಿಕೆ ಕೇಳಿ ಇಡೀ ಕೊಡಗು ಜಿಲ್ಲೆಯೇ ಆತಂಕ ಮತ್ತು ಆಘಾತದಲ್ಲಿದೆ. ಮೋಡ ಬಿತ್ತನೆ ಬೇರೆ ಎಲ್ಲಿ ಬೇಕಾದರೂ ಮಾಡಿಕೊಳ್ಳಿ, ನಮ್ಮ ಕೊಡಗು ಜಿಲ್ಲೆಯಲ್ಲಿ ಮಾತ್ರ ಬೇಡ. ಮೋಡ ಬಿತ್ತನೆಯಿಂದ ಜಿಲ್ಲೆಗೆ ಹೆಚ್ಚುವರಿ ಮಳೆ ಬೇಡವೇ ಬೇಡ.
-ಕಾಯಪಂಡ ವಿಷ್ಣು ನಾಚಪ್ಪ , ಬಿರುನಾಣಿಮೋಡ ಬಿತ್ತನೆಯಿಂದ ಕೊಡಗು ಜಿಲ್ಲೆಗೆ ಹಾಗೂ ಇಲ್ಲಿನ ಜನರಿಗೆ ಪ್ರಯೋಜನಗಿಂತ ನಷ್ಟವೇ ಹೆಚ್ಚು ಆಗುವುದರಿಂದ ಕೊಡಗಿನಲ್ಲಿ ಮೋಡ ಬಿತ್ತನೆ ಮಾಡುವುದನ್ನು ನಾವು ವಿರೋಧಿಸುತ್ತೇವೆ. ಅಲ್ಲದೆ ಮೋಡ ಬಿತ್ತನೆಯಿಂದ ಕಾಫಿ ಕೃಷಿಗೆ ಆಗುವ ನಷ್ಟವನ್ನು ಸರ್ಕಾರವೇ ತುಂಬಬೇಕು.
-ಚೆಪ್ಪುಡಿರ ರಾಕೇಶ್ ದೇವಯ್ಯ, ವಿರಾಜಪೇಟೆ ಬಿಜೆಪಿ ಮಂಡಲದ ವಕ್ತಾರ