ಸಾರಾಂಶ
ಬಾಗಲಕೋಟೆಯಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಕೇಂದ್ರ, ರಾಷ್ಟ್ರೀಯ ಬಸವದಳ, ಶರಣ ಸಾಹಿತ್ಯ ಪರಿಷತ್ತು ಹಾಗೂ ಲಿಂಗಾಯತ ಸಂಘಟನೆಗಳ ಸಹಯೋಗದಲ್ಲಿ ಸೆ.10ರಂದು ಜರುಗಲಿರುವ ಬಸವ ಸಂಸ್ಕೃತಿ ಅಭಿಯಾನಕ್ಕೆ ಇಲ್ಲಿನ ವೀರಶೈವ ಲಿಂಗಾಯತ ಮಹಾಸಭಾ ಮಠಾಧೀಶರು, ಸ್ಥಳೀಯ ಮುಖಂಡರು ಹಾಗೂ ಭಕ್ತರು ವಿರೋಧಿಸಿದ್ದು, ಈ ಕಾರ್ಯಕ್ರಮಕ್ಕೆ ಹೋಗದಿರಲು ನಿರ್ಧರಿಸಿದರು.
ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಬಾಗಲಕೋಟೆಯಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಕೇಂದ್ರ, ರಾಷ್ಟ್ರೀಯ ಬಸವದಳ, ಶರಣ ಸಾಹಿತ್ಯ ಪರಿಷತ್ತು ಹಾಗೂ ಲಿಂಗಾಯತ ಸಂಘಟನೆಗಳ ಸಹಯೋಗದಲ್ಲಿ ಸೆ.10ರಂದು ಜರುಗಲಿರುವ ಬಸವ ಸಂಸ್ಕೃತಿ ಅಭಿಯಾನಕ್ಕೆ ಇಲ್ಲಿನ ವೀರಶೈವ ಲಿಂಗಾಯತ ಮಹಾಸಭಾ ಮಠಾಧೀಶರು, ಸ್ಥಳೀಯ ಮುಖಂಡರು ಹಾಗೂ ಭಕ್ತರು ವಿರೋಧಿಸಿದ್ದು, ಈ ಕಾರ್ಯಕ್ರಮಕ್ಕೆ ಹೋಗದಿರಲು ನಿರ್ಧರಿಸಿದರು.ಪಟ್ಟಣದ ಮುರುಘಾಮಠದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಮುರುಘಾಮಠದ ಕಾಶೀನಾಥ ಶ್ರೀಗಳು, ಬಾಗಲಕೋಟೆಯಲ್ಲಿ ಸೆ.10ರಂದು ನಡೆಯುವ ಅಭಿಯಾನ ಇಡೀ ವೀರಶೈವ ಲಿಂಗಾಯತ ಸಮುದಾಯ ಒಡೆಯುವ ಹುನ್ನಾರ, ಪಿತೂರಿ ನಡೆದಿದೆ. ಇದರ ಹಿಂದೆ ಕಾಣದ ಕೈಗಳ ಕೈವಾಡ ಇದೆ. ವೀರಶೈವ ಎನ್ನುವ ಪದ ಬಳಸದೇ ಕೇವಲ ಲಿಂಗಾಯತ ಪದ ಬಳಸಿ ಎಲ್ಲರಲ್ಲಿ ಸಂಕುಚಿತ ಮನೋಭಾವ ಮೂಡಿಸುವುದು ಸರಿಯಲ್ಲ. ಕೇಂದ್ರ ಮಟ್ಟದ ವೀರಶೈವ ಲಿಂಗಾಯತ ಮಹಾಸಭಾ ಆದೇಶವಾಗಿದ್ದು, ಯಾರೊಬ್ಬರು ಬಾಗಲಕೋಟೆಯಲ್ಲಿ ಜರುಗುವ ಅಭಿಯಾನಕ್ಕೆ ಹೋಗಬಾರದೆಂದು ಸಭೆಯಲ್ಲಿ ಭಕ್ತರಿಗೆ ಕರೆ ನೀಡಿದರು.
ಮರಡಿಮಠದ ಅಭಿನವ ಕಾಡಸಿದ್ದೇಶ್ವರ ಶ್ರೀಗಳು ಮಾತನಾಡಿ, ವೀರಶೈವ ಲಿಂಗಾಯತ ಸಂಘಟನೆ ಒಡೆಯುವ ಹುನ್ನಾರ ನಡೆದಿದೆ. ಬಾಗೇವಾಡಿಯಲ್ಲಿ ನಡೆದ ಸಭೆಯೂ ಸಹ ವೀರಶೈವ ಮಠಾಧೀಶರನ್ನು ಅವಹೇಳನ ಮಾಡಿದ್ದನ್ನ ನೋಡಿದರೆ ಈ ಸಂಘಟನೆ ಬೇರೆ ದಿಕ್ಕಿನ ಕಡೆ ನಡೆದಿದ್ದು ಸ್ಪಷ್ಟವಾಗುತ್ತದೆ. ವೀರಶೈವರು ಬೇರೆ ಅಲ್ಲ ಲಿಂಗಾಯತರು ಬೇರೆ ಅಲ್ಲ. ಆದರೆ ಕೆಲ ಬುದ್ಧಿಜೀವಿಗಳೆಂದುಕೊಂಡಿರುವ ಹಾಗೂ ಕೆಲ ಮಠಾಧೀಶರಿಂದ ಸಂಘಟನೆ ಒಡೆಯುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.ಮಾಜಿ ಶಾಸಕ ರಾಜಶೇಖರ ಶೀಲವಂತ ಮಾತನಾಡಿ, ನಾವು ಸಂಕುಚಿತ ಮನೋಭಾವನೆಯಿಂದ ಅಲ್ಪಸಂಖ್ಯಾತರಾಗುವುದು ಬೇಡ. ವಿಶಾಲ ಮನೋಭಾವನೆಯಿಂದ ಬಹುಸಂಖ್ಯಾತರಾಗೋಣ. ವೀರಶೈವ ಲಿಂಗಾಯತ ಎನ್ನುವ ಪದದಲ್ಲಿ ವಿಶಾಲವಾದ ಅರ್ಥವಿದೆ. ಕೇವಲ ಲಿಂಗಾಯತ ಅಂದಾಗ ವೀರಶೈವ ಬಳಸುವವರು ಹೊರಗುಳಿದಂತಾಗುತ್ತದೆ ಎಂದರು.
ಶಿವಾನಂದ ಮಳಿಮಠ, ಪ್ರಕಾಶ ಮುರಗೋಡ, ಮಹಾಂತಯ್ಯ ಸರಗಣಾಚಾರಿ, ರವಿ ಅಂಗಡಿ, ರವಿ ಗೌಡರ, ಶ್ರೀಕಾಂತ ಹುನಗುಂದ, ಸೇರಿದಂತೆ ವೀರಶೈವ ಲಿಂಗಾಯತ ಸಮಾಜಗಳ ವಿವಿಧ ಒಳ ಪಂಗಡಗಳ ಮುಖಂಡರು ಹಾಜರಿದ್ದರು.