ತುಮಕೂರು ಮಹಾನಗರಪಾಲಿಕೆಗೆ ಹಳ್ಳಿಗಳ ಸೇರ್ಪಡೆಗೆ ತೀವ್ರ ವಿರೋಧ

| Published : Oct 29 2025, 01:00 AM IST

ತುಮಕೂರು ಮಹಾನಗರಪಾಲಿಕೆಗೆ ಹಳ್ಳಿಗಳ ಸೇರ್ಪಡೆಗೆ ತೀವ್ರ ವಿರೋಧ
Share this Article
  • FB
  • TW
  • Linkdin
  • Email

ಸಾರಾಂಶ

ನಗರಸಭೆ, ಟೂಡಾದ ಮಾಜಿ ಸದಸ್ಯ ಹಕ್ಕೊತ್ತಾಯ ಬಸವರಾಜು, ಮಲ್ಲಸಂದ್ರ ಗ್ರಾಮ ಪಂಚಾಯ್ತಿ ಸದಸ್ಯರಾದ ಮಂಜುನಾಥ್, ರತ್ನಮ್ಮ, ಹೆಗ್ಗೆರೆ ಗ್ರಾಪಂ ಮಾಜಿ ಅಧ್ಯಕ್ಷ ನಾಗರಾಜು, ಗೂಳೂರು ಗ್ರಾಪಂ ಮಾಜಿ ಸದಸ್ಯ ಲಿಂಗರಾಜು, ಇಂಜಿನಿಯರ್ ಸುಬ್ರಹ್ಮಣ್ಯ ಮೊದಲಾದವರು ಮಾತನಾಡಿ, ನಗರಪಾಲಿಕೆಗೆ ಹಳ್ಳಿಗಳ ಸೇರ್ಪಡೆ ಪ್ರಸ್ತಾವನೆಯನ್ನು ವಿರೋಧಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರು

ತುಮಕೂರು ಮಹಾನಗರಪಾಲಿಕೆ ವ್ಯಾಪ್ತಿಗೆ ಸುತ್ತಮುತ್ತಲ 14 ಗ್ರಾಮ ಪಂಚಾಯ್ತಿಗಳ 54 ಹಳ್ಳಿಗಳ ಸೇರ್ಪಡೆ ಪ್ರಸ್ತಾವನೆಯನ್ನು ತೀವ್ರವಾಗಿ ವಿರೋಧಿಸಿದ ಗ್ರಾಮ ಪಂಚಾಯ್ತಿ ಚುನಾಯಿತ ಪ್ರತಿನಿಧಿಗಳು ಹಾಗೂ ವಿವಿಧ ಮುಖಂಡರು ಪ್ರಸ್ತಾವನೆಯನ್ನು ಕೈಬಿಡುವಂತೆ ಒತ್ತಾಯಿಸಿದರು.

ಮಂಗಳವಾರ ನಗರದಲ್ಲಿ ನಡೆದ ಮಹಾನಗರ ಪಾಲಿಕೆ ವಿಸ್ತರಣಾ ವಿರೋಧಿ ಸಭೆಯಲ್ಲಿ ಮಾತನಾಡಿದ ರಾಜ್ಯ ಗ್ರಾಮ ಪಂಚಾಯಿತಿ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ಕಾಡಶೆಟ್ಟಿಹಳ್ಳಿ ಸತೀಶ್, ಹಳ್ಳಿಗಳನ್ನು ನಗರೀಕರಣ ಮಾಡಲು ಹೊರಟಿರುವುದು ದೊಡ್ಡ ಸಾಮಾಜಿಕ ಅನ್ಯಾಯ. ಪ್ರಸ್ತಾಪಿತ ವಿಚಾರದ ಬಗ್ಗೆ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಸಭೆ ನಡೆಸಿ ವಿರೋಧಿ ನಿರ್ಣಯ ಕೈಗೊಳ್ಳಬೇಕು. ಹಳ್ಳಿಗರ ಬದುಕು ನಾಶ ಮಾಡುತ್ತಿರುವ ಈ ಪ್ರಯತ್ನದ ವಿರುದ್ಧ ರಾಜಕೀಯ ಪಕ್ಷಗಳ ನಾಯಕರು ಧ್ವನಿ ಎತ್ತಬೇಕು ಎಂದು ಮನವಿ ಮಾಡಿದರು.

14 ಗ್ರಾಮ ಪಂಚಾಯ್ತಿಗಳ 54 ಹಳ್ಳಿಗಳನ್ನು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿಸಿ ಎಂದು ಯಾರು ಹೇಳಿದ್ದರು? ಯಾರ ಹಿತಕ್ಕಾಗಿ ಪ್ರಯತ್ನ ನಡೆದಿದೆ? ಇದರ ಹಿಂದೆ ದುರುದ್ದೇಶದ ಷಡ್ಯಂತರವಿದೆ. ನಗರಪಾಲಿಕೆ ವ್ಯಾಪ್ತಿಗೆ ಹಳ್ಳಿಗಳನ್ನು ಸೇರಿಸುವುದರಿಂದ ರೈತರ ಜಮೀನಿನ ಬೆಲೆ ಹೆಚ್ಚಾಗುತ್ತದೆ. ಸಾಮಾನ್ಯ ಜನ ನಿವೇಶನ ಕೊಳ್ಳಲಾಗುವುದಿಲ್ಲ. ನಿವೇಶನ ಕೊಳ್ಳಲು, ಮನೆ ಕಟ್ಟಲು ನಗರಪಾಲಿಕೆಗೆ ದುಬಾರಿ ತೆರಿಗೆ ಕಟ್ಟಬೇಕಾಗುತ್ತದೆ. ಹೊರತಾಗಿ ಇನ್ಯಾವುದೇ ಪ್ರಯೋಜನವಿಲ್ಲ. ಬಲಾಢ್ಯರು ಹಳ್ಳಿಗಳ ಜಮೀನು ಖರೀದಿಸಿ ಹಳ್ಳಿಯ ಬಡವರನ್ನು ಬಾಳಲು ಬಿಡದೆ ಒಕ್ಕಲೆಬ್ಬಿಸುತ್ತಾರೆ. ಈ ಮೂಲಕ ಹಳ್ಳಿಗಳ ಮೂಲವನ್ನೇ ನಾಶ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.

ಉದ್ದೇಶಿತ 54 ಹಳ್ಳಿಗಳು ಒಳಗೊಂಡ ಗ್ರಾಮ ಪಂಚಾಯಿತಿಗಳಲ್ಲಿ ಸುಮಾರು 290 ಗ್ರಾಮ ಪಂಚಾಯ್ತಿ ಸದಸ್ಯರಿದ್ದಾರೆ. ತಾಲೂಕು ಹಾಗೂ ಜಿಲ್ಲಾ ಪಂಚಾಯ್ತಿ ಸದಸ್ಯರಾಗುವ ಅವಕಾಶವಿದೆ. ಆದರೆ ನಗರಪಾಲಿಕೆಗೆ ಸೇರ್ಪಡೆಯಾದರೆ 7- 8 ಮಂದಿ ಸದಸ್ಯರಾಗಬಹುದಷ್ಟೇ. ಗ್ರಾಮ ಪಂಚಾಯ್ತಿ, ತಾಲೂಕು ಪಂಚಾಯ್ತಿಗಳಲ್ಲಿ ಶೇಕಡ 50 ರಷ್ಟು ಹೆಣ್ಣುಮಕ್ಕಳು, ಎಲ್ಲಾ ವರ್ಗದವರು ರಾಜಕೀಯ ಅಧಿಕಾರ ಹೊಂದುವ ಅವಕಾಶವಿದೆ. ಆದರೆ ನಗರಪಾಲಿಕೆಗೆ ಸೇರ್ಪಡೆಯಾದರೆ ಇಷ್ಟು ಜನರ ರಾಜಕೀಯ ಪ್ರಾತಿನಿಧ್ಯವನ್ನು ವಂಚಿಸಿದಂತಾಗುತ್ತದೆ. ಇದಲ್ಲದೆ, ಹಳ್ಳಿಗಳಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳು, ವ್ಯವಸಾಯ ಸೇವಾ ಸಹಕಾರ ಸಂಘಗಳಲ್ಲಿ ಸ್ಥಳೀಯ ಪ್ರತಿನಿಧಿಗಳಿರುತ್ತಾರೆ. ಇವರೂ ಸ್ಥಾನಮಾನ ಕಳೆದುಕೊಳ್ಳುತ್ತಾರೆ ಎಂದು ಕಾಡಶೆಟ್ಟಿಹಳ್ಳಿ ಸತೀಶ್ ಹೇಳಿದರು.

ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷ ದೊಡ್ಡೇರಿ ವಿಜಯಪ್ರಕಾಶ್ ಮಾತನಾಡಿ, ಹಳ್ಳಿಗಳನ್ನು ನಗರಪಾಲಿಕೆಗೆ ಸೇರ್ಪಡೆ ಮಾಡಿ ತೆರಿಗೆ, ಕಂದಾಯದ ಹೊರೆ ಹೊರಿಸಲಾಗುತ್ತದೆ ಹೊರತು ಅವರಿಗೆ ಯಾವುದೇ ಅನುಕೂಲ ಆಗಲಾರದು. ಹಳ್ಳಿಗಳಲ್ಲಿ 500 ರು. ಇರುವ ಕಂದಾಯ ತುಮಕೂರು ನಗರಕ್ಕೆ ಸೇರ್ಪಡೆಯಾದರೆ ಸಾವಿರಗಟ್ಟಲೆಯಾಗುತ್ತದೆ. ನಿವೇಶನ ಖರೀದಿಸಲು, ಮನೆ ಕಟ್ಟಲು ತೆರಿಗೆ, ಪರವಾನಗಿಗೇ ಸಾವಿರಾರು ರುಪಾಯಿ ತೆರಬೇಕಾಗುತ್ತದೆ. ಸಂವಿಧಾನಾತ್ಮಕವಾಗಿ ದೊರೆತಿರುವ ಗ್ರಾಮ ಪಂಚಾಯ್ತಿಯ ರಾಜಕೀಯ ಪ್ರಾತಿನಿಧ್ಯದಿಂದಲೂ ಗ್ರಾಮೀಣ ಜನರು ವಂಚಿತರಾಗುತ್ತಾರೆ. ಯಾವುದೇ ಪ್ರಯೋಜನವಿಲ್ಲದ ನಗರೀಕರಣವನ್ನುಎಲ್ಲಾ ಗ್ರಾಮದವರೂ ತೀವ್ರವಾಗಿ ವಿರೋಧಿಸಬೇಕು ಎಂದು ಮನವಿ ಮಾಡಿದರು.

ಮಹಾನಗರಪಾಲಿಕೆ ವಿಸ್ತರಣೆ ವಿರೋಧಿ ಹೋರಾಟ ಸಮಿತಿ ಸಂಚಾಲಕ, ನಗರಪಾಲಿಕೆ ಮಾಜಿ ಸದಸ್ಯ ಕೆ.ಪಿ.ಮಹೇಶ್ ಮಾತನಾಡಿ, ಇರುವ ತುಮಕೂರು ನಗರವನ್ನೇ ಅಭಿವೃದ್ಧಿ ಮಾಡಿ ನಾಗರಿಕರಿಗೆ ಸೌಕರ್ಯ ಕೊಡಲಾಗದವರು, ಇನ್ನಷ್ಟು ಹಳ್ಳಿಗಳನ್ನು ಸೇರ್ಪಡೆ ಮಾಡಿ ನಗರವನ್ನು ನರಕ ಮಾಡಲು ಹೊರಟಿರುವುದು ನಾಚಿಕೆಗೇಡು. ಕಳೆದ ಬಾರಿ ನಗರಕ್ಕೆ ಸೇರಿಸಿಕೊಂಡ 22 ಹಳ್ಳಿಗಳ ಸ್ಥಿತಿಗತಿ ಬದಲಾಗಿಲ್ಲ. ಆ ಪ್ರದೇಶಗಳಲ್ಲಿ ಸಮರ್ಪಕವಾದ ರಸ್ತೆ, ಚರಂಡಿ, ಒಳಚರಂಡಿ, ಕುಡಿಯುವ ನೀರು, ಸಾರ್ವಜನಿಕ ಸಂಚಾರ ವ್ಯವಸ್ಥೆ ಇಲ್ಲ. ಮೊದಲು ಈ ಪ್ರದೇಶಗಳನ್ನು ಅಭಿವೃದ್ಧಿ ಮಾಡಿ ತೋರಿಸಿ ಎಂದರು.

ನಗರಸಭೆ, ಟೂಡಾದ ಮಾಜಿ ಸದಸ್ಯ ಹಕ್ಕೊತ್ತಾಯ ಬಸವರಾಜು, ಮಲ್ಲಸಂದ್ರ ಗ್ರಾಮ ಪಂಚಾಯ್ತಿ ಸದಸ್ಯರಾದ ಮಂಜುನಾಥ್, ರತ್ನಮ್ಮ, ಹೆಗ್ಗೆರೆ ಗ್ರಾಪಂ ಮಾಜಿ ಅಧ್ಯಕ್ಷ ನಾಗರಾಜು, ಗೂಳೂರು ಗ್ರಾಪಂ ಮಾಜಿ ಸದಸ್ಯ ಲಿಂಗರಾಜು, ಇಂಜಿನಿಯರ್ ಸುಬ್ರಹ್ಮಣ್ಯ ಮೊದಲಾದವರು ಮಾತನಾಡಿ, ನಗರಪಾಲಿಕೆಗೆ ಹಳ್ಳಿಗಳ ಸೇರ್ಪಡೆ ಪ್ರಸ್ತಾವನೆಯನ್ನು ವಿರೋಧಿಸಿದರು.

ಸ್ವಾಂದೇನಹಳ್ಳಿ ಗ್ರಾಪಂ ಅಧ್ಯಕ್ಷ ಸೋಮಶೇಖರ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ರಮೇಶ್, ಅಶೋಕ್, ಪ್ರಮುಖರಾದ ಟಿ.ವೈ.ಯಶಸ್, ಶಬ್ಬೀರ್‌ಅಹ್ಮದ್, ಕೆ.ಎಸ್.ನಾಗರತ್ನಮ್ಮ, ರಾಮಯ್ಯ, ಲಿಂಗರಾಜು, ತಿಮ್ಮಯ್ಯ, ಜಿ.ಎನ್.ನಾಗರತ್ನ, ಹುಚ್ಚೀರಪ್ಪ, ಶಿವಮ್ಮ, ವಿನಯ್, ಸತೀಶ್, ಮಂಗಳಮ್ಮ, ಯೋಗೀಶ್, ನಂಜುಂಡಯ್ಯ, ರವೀಶಯ್ಯ, ಕೃಷ್ಣಮೂರ್ತಿ, ರಾಜುಗೌಡ, ದಕ್ಷಿಣಮೂರ್ತಿ, ಮದನ್, ಕಾಂತರಾಜು, ಸದಾನಂದ್ ಸೇರಿ ವಿವಿಧ ಗ್ರಾಮಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿ ಚರ್ಚಿಸಿದರು.