ರಾಹುಲ್ ಗಾಂಧಿ ಹೇಳಿಕೆಗೆ ತೀವ್ರ ವಿರೋಧ

| Published : Sep 19 2024, 01:53 AM IST

ಸಾರಾಂಶ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ದಲಿತರ ಮೀಸಲಾತಿ ನಿಲ್ಲಿಸುವ ವಿಚಾರವಾಗಿ ಹೇಳಿಕೆ ನೀಡಿ, ದಲಿತ ವಿರೋಧಿ ಧೋರಣೆ ತೋರಿದ್ದಾರೆ ಎಂದು ಅವರ ಹೇಳಿಕೆ ಖಂಡಿಸಿ ಬುಧವಾರ ಜಿಲ್ಲಾ ಬಿಜೆಪಿ ಎಸ್.ಸಿ. ಮತ್ತು ಎಸ್.ಟಿ. ಮೋರ್ಚಾದಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಮುಖಂಡರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ, ತುಮಕೂರುಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ದಲಿತರ ಮೀಸಲಾತಿ ನಿಲ್ಲಿಸುವ ವಿಚಾರವಾಗಿ ಹೇಳಿಕೆ ನೀಡಿ, ದಲಿತ ವಿರೋಧಿ ಧೋರಣೆ ತೋರಿದ್ದಾರೆ ಎಂದು ಅವರ ಹೇಳಿಕೆ ಖಂಡಿಸಿ ಬುಧವಾರ ಜಿಲ್ಲಾ ಬಿಜೆಪಿ ಎಸ್.ಸಿ. ಮತ್ತು ಎಸ್.ಟಿ. ಮೋರ್ಚಾದಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಮುಖಂಡರು ಪ್ರತಿಭಟನೆ ನಡೆಸಿದರು.ಎಸ್.ಟಿ.ಮೋರ್ಚಾ ರಾಜ್ಯ ಕಾರ್ಯದರ್ಶಿ ಮಹಂತೇಶ ನಾಯಕ ಮಾತನಾಡಿ, ರಾಹುಲ್ ಗಾಂಧಿಯವರು ಅಮೆರಿಕ ಪ್ರವಾಸದಲ್ಲಿದ್ದ ವೇಳೆ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮೀಸಲಾತಿಯನ್ನು ರದ್ದು ಮಾಡುತ್ತೇವೆ, ಮೀಸಲಾತಿಯನ್ನು ತೆಗೆದುಹಾಕಿದರೆ ಮಾತ್ರ ದೇಶ ಉದ್ಧಾರ ಹೊಂದಲು ಸಾಧ್ಯ ಎಂಬ ದಲಿತ ವಿರೋಧಿ ಹೇಳಿಕೆ ನೀಡಿರುವುದು ಖಂಡನಾರ್ಹ ಎಂದರು.ಇದರೊಂದಿಗೆ ಕಾಂಗ್ರೆಸ್ ನಾಯಕರ ನಿಜಬಣ್ಣವನ್ನು ರಾಹುಲ್ ಗಾಂಧಿ ಬಯಲು ಮಾಡಿದ್ದಾರೆ. ಇದುವರೆಗೆ ಕಾಂಗ್ರೆಸ್ ಪಕ್ಷ ದಲಿತರನ್ನು ಮತ ಬ್ಯಾಂಕ್ ಆಗಿ ಬಳಸಿಕೊಂಡಿತೇ ಹೊರತು, ದಲಿತರ ಏಳಿಗೆಗೆ ಕಾಳಜಿವಹಿಸಲಿಲ್ಲ, ಇಷ್ಟು ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್ ಆಡಳಿತದಲ್ಲಿ ದಲಿತ ವರ್ಗದ ಪರಿಸ್ಥಿತಿ ಸುಧಾರಣೆ ಆಗಲಿಲ್ಲ, ಮುಂದಿನ ಚುನಾವಣೆಗಳಲ್ಲಿ ದಲಿತರು ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.ರಾಹುಲ್ ಗಾಂಧಿಯವರು ಸಂವಿಧಾನದ ಪುಸ್ತಕ ಹಿಡಿದುಕೊಂಡು ನಾವು ಸಂವಿಧಾನ ರಕ್ಷಕರು, ಬಿಜೆಪಿಯವರು ಸಂವಿಧಾನ, ದಲಿತ ವಿರೋಧಿಗಳು ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ, ದಲಿತ ಸಮುದಾಯದವರು ಈಗ ಪ್ರಜ್ಞಾವಂತರಾಗಿದ್ದಾರೆ. ಕಾಂಗ್ರೆಸ್ ನಾಯಕರ ಸುಳ್ಳು ಮಾತುಗಳನ್ನು ನಂಬುವುದಿಲ್ಲ ಎಂದರು.ಜಿಲ್ಲಾ ಬಿಜೆಪಿ ಹಿರಿಯ ಉಪಾಧ್ಯಕ್ಷ ವೈ.ಎಚ್. ಹುಚ್ಚಯ್ಯ ಮಾತನಾಡಿ, ದಲಿತರ ಉದ್ಧಾರ ಮಾಡುತ್ತೇವೆ ಎಂದು ಹೇಳಿಕೊಳ್ಳುವ ಕಾಂಗ್ರೆಸ್‌ನವರು ದಲಿತರ ಅಭಿವೃದ್ಧಿಗೆ ಮೀಸಲಾದ ಕೋಟ್ಯಂತರ ರು. ಹಣ ಲೂಟಿ ಮಾಡಿದ್ದಾರೆ. ಮಹರ್ಷಿ ವಾಲ್ಮೀಕಿ ನಿಗಮದ ಹಣವನ್ನು ಚುನಾವಣೆಗಾಗಿ ಬಳಸಿಕೊಂಡು ಈ ಸಮುದಾಯಕ್ಕೆ ದ್ರೋಹ ಮಾಡಿದ್ದಾರೆ. ಪರಿಶಿಷ್ಟ ಜಾತಿಯ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಂಡು ದ್ರೋಹ ಮಾಡಿದ್ದಾರೆ ಎಂದು ಟೀಕಿಸಿದರು. ಕಾಂಗ್ರೆಸ್ ಸರ್ಕಾರ ದಲಿತರ ಅಭಿವೃದ್ಧಿಗಾಗಿ ಯಾವುದೇ ಸಮರ್ಪಕವಾದ ಯೋಜನೆ ಜಾರಿಗೆ ತಂದಿಲ್ಲ, ಕೇವಲ ದಲಿತರನ್ನು ಕೇವಲ ಮತ ಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಂಡಿದ್ದಾರೆ. ಈಗ ದಲಿತರ ಮೀಸಲಾತಿ ಸ್ಥಗಿತಗೊಳಿಸುವ ಬಗ್ಗೆ ರಾಹುಲ್ ಗಾಂಧಿ ಮಾತನಾಡಿದ್ದಾರೆ. ಹಾಗೆ ಮಾಡಲು ದಲಿತರು ಅವಕಾಶ ಮಾಡಿಕೊಡುವುದಿಲ್ಲ ಎಂದು ಎಚ್ಚರಿಸಿದರು. ಕಾಂಗ್ರೆಸ್ ರಾಜ್ಯದಲ್ಲಿಯೂ ಸಹ ದಲಿತರಿಗೆ ಅನ್ಯಾಯ ಮಾಡಿದೆ. ಈ ಹಿಂದೆ ನಡೆದ ಚುನಾವಣೆಗಳಲ್ಲಿ ದಲಿತ ನಾಯಕರು ಗೆದ್ದರೂ ಸಹ ಅವರನ್ನು ಅಧಿಕಾರದಿಂದ ದೂರ ಇಡಲಾಗಿದೆ. ಆದರೆ ಬಿಜೆಪಿ ಮಾತ್ರವೇ ದಲಿತ ನಾಯಕರಿಗೆ ಉನ್ನತ ಹುದ್ದೆ ನೀಡುವ ಮೂಲಕ ಸಮುದಾಯಕ್ಕೆ ಅವಕಾಶ ಮಾಡಿಕೊಟ್ಟಿದೆ. ಹಿಂದಿನ ಬಿಜೆಪಿ ಸರ್ಕಾರಗಳಲ್ಲಿ ಮಂಡಿಸಿದ ಬಜೆಟ್‌ಗಳಲ್ಲಿ ಅತಿ ಹೆಚ್ಚಿನ ಅನುದಾನ ನೀಡುವ ಮೂಲಕ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ ಏಕೈಕ ಪಕ್ಷ ಬಿಜೆಪಿ. ಆದರೆ ಸದಾ ಭಾಷಣಗಳಲ್ಲಿ ದಲಿತರನ್ನು ಎತ್ತಿಕೊಳ್ಳುವ ಕಾಂಗ್ರೆಸ್ ನಾಯಕರು ಮಾತ್ರ ದಲಿತರ ಹಣ ಗ್ಯಾರಂಟಿಗೆ ಬಳಿಸಿದ್ದಾರೆ. ಆ ಮೂಲಕ ತನ್ನ ದಲಿತ ವಿರೋಧಿ ನೀತಿ ಬಹಿರಂಗವಾಗಿಯೇ ತೋರ್ಪಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಎಸ್.ಸಿ.ಮೋರ್ಚಾ ಜಿಲ್ಲಾಧ್ಯಕ್ಷ ಆಂಜನಪ್ಪ, ಎಸ್.ಟಿ.ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ನವಚೇತನ್, ಮುಖಂಡರಾದ ಎಸ್.ಶಿವಪ್ರಸಾದ್, ಬಂಬೂ ಮೋಹನ್, ಹನುಮಂತರಾಯಪ್ಪ, ರಾಕೇಶ್, ಧನುಷ್ ನಾಯಕ್, ಸತ್ಯಮಂಗಲ ಜಗದೀಶ್, ಬೆಳಗುಂಬ ವೆಂಕಟೇಶ್, ಕೆ.ಎಸ್.ಕುಮಾರ್, ಜಿ.ಗಂಗಾಧರ್, ವೀರಣ್ಣ, ವೆಂಕಟೇಶಾಚಾರ್, ಸಣ್ಣರಂಗಯ್ಯ, ದಿಲೀಪ್ ಮೊದಲಾದವರು ಭಾಗವಹಿಸಿದ್ದರು. ನಂತರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.