ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತರುತ್ತಿರುವ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ ವಿರೋಧಿಸಿ ತಾಲೂಕು ಬಿಜೆಪಿ ಮಂಡಲದಿಂದ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತರುತ್ತಿರುವ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ ವಿರೋಧಿಸಿ ತಾಲೂಕು ಬಿಜೆಪಿ ಮಂಡಲದಿಂದ ಬುಧವಾರ ಪ್ರತಿಭಟಿಸಿ, ತಹಸೀಲ್ದಾರ್‌ ಕೀರ್ತಿ ಚಾಲಕ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.ಈ ವಿಧೇಯಕಯು ಭಾರತ ಸಂವಿಧಾನಕ್ಕೆ ವಿರುದ್ಧವಾಗಿದ್ದು, ಜಾರಿಗೊಳಿಸುವುದನ್ನು ಈ ಕೂಡಲೇ ಕೈ ಬಿಡಬೇಕು. ಇದು ಸಂವಿದಾನದ 19 (1) ಮತ್ತು (2)ರಡಿಯ ವಾಕ್‌ ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯ ಹಕ್ಕಿನ ಉಲ್ಲಂಘನೆಯಾಗಿದೆ. ಡಾ.ಅಂಬೇಡ್ಕರ್‌ರು ನೀಡಿದ ಸಂವಿಧಾನದಡಿಯ ಹಕ್ಕನ್ನು ಕಾಂಗ್ರೆಸ್ ಸರ್ಕಾರ ಕಿತ್ತುಕೊಳ್ಳುತ್ತಿದೆ. ಸರ್ಕಾರದ ವಿರುದ್ಧ ಮಾತನಾಡುವವರ ಬಾಯಿ ಮುಚ್ಚಿಸುವ ಸಾಧನವಾಗಿದೆ. ಇದರಡಿ ದ್ವೇಷ ಭಾಷಣಕ್ಕೆ ನೀಡಿರುವ ವ್ಯಾಖ್ಯಾನವೇ ಅಸ್ಪಷ್ಟವಾಗಿದೆ. ಸರ್ಕಾರದ ನೀತಿಗಳ ವಿರುದ್ಧ ಟೀಕೆ, ಸಾಮಾಜಿಕ ಚರ್ಚೆ, ವ್ಯಂಗ್ಯ ಮಾಡುವುದು ಅಥವಾ ಸತ್ಯ ಹೇಳುವುದನ್ನೂ ಕೂಡ ದ್ವೇಷ ಎಂದು ಪರಿಗಣಿಸುವ ಅಪಾಯವಿದೆ. ಜನರು ಭಯದಿಂದ ಮಾತನಾಡದೆ ಇರುವುದು ಸರ್ಕಾರದ ಉದ್ದೇಶವೇ ಎಂಬ ಪ್ರಶ್ನೆ ಮೂಡುತ್ತಿದೆ. ಪ್ರಜಾಪ್ರಭುತ್ವದ ಮೂಲತತ್ವಕ್ಕೆ ಹಾನಿ, ಮಾತ್ರವಲ್ಲ ಪ್ರಜಾಪ್ರಭುತ್ವದ ಕತ್ತು ಹಿಸುಕುವ ಯತ್ನವಾಗಿದೆ. ಈ ಕಾನೂನು ಪೊಲೀಸರಿಗೆ ಮತ್ತು ಸರ್ಕಾರಕ್ಕೆ ನಿರಂಕುಶ ಅಧಿಕಾರ ನೀಡುತ್ತದೆ. ಕಾಯ್ದೆ ಹೇಳುವಂತೆ ಇಲ್ಲಿನ ಅಪರಾಧಗಳಿಗೆ ಜಾಮೀನುಇಲ್ಲ. ಜನಸಾಮಾನ್ಯರನ್ನು ಅಪರಾಧಿಗಳಾಗಿ ಮಾಡುವ ಈ ಕೀಳು ಮಟ್ಟದ ವಿಧೇಯಕ ಜಾರಗೊಳಿಸಬಾರದು ಎಂದು ಒತ್ತಾಯಿಸಿದರು.

ಪೊಲೀಸರು ಅಥವಾ ಅಧಿಕಾರಿಗಳು ಸಂಭಾವ್ಯ ಅಪರಾಧ ಎಂದು ಭಾವಿಸಿ ಮುಂಚಿತವಾಗಿ ಕ್ರಮ ಕೈಗೊಳ್ಳಬಹುದು. ಇದರಿಂದ ಪ್ರತಿಭಟನೆಗಳು ಸಭೆಗಳು ಅಥವಾ ಸಾಮಾಜಿಕ ಚಳವಳಿಗಳನ್ನು ತಡೆಯುವ ಉದ್ದೇಶ ಇದ್ದಂತಿದೆ. ಈ ವಿಧೇಯಕದಿಂದ ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು, ಸಾಮಾಜಿಕ ಮಾಧ್ಯಮ ಬಳಸುವವರು ಹೆಚ್ಚು ತೊಂದರೆಗೆ ಸಿಲುಕುತ್ತಾರೆ. ಪ್ರಜಾಪ್ರಭುತ್ವದಲ್ಲಿ ಮಾಧ್ಯಮ ಮತ್ತು ಜನರ ಧ್ವನಿಯನ್ನು ನಾಶಪಡಿಸುವ ಇಂತಹ ವಿಧೇಯಕ ಯಾವ ಕಾರಣಕ್ಕೂ ಜಾರಿಯಾಗಬಾರದು ಎಂದು ಆಗ್ರಹಿಸಿದರು.

ಅನ್ಯಾಯ ಅಥವಾ ಸರ್ಕಾರದ ತಪ್ಪುಗಳ ಬಗ್ಗೆ ಮಾತನಾಡಿದರೆ ಭಾವನಾತ್ಮಕ ಹಾನಿ ಎಂದು ಆರೋಪಿಸಿ ಬಂಧನ ಮಾಡಲು ಇದು ಪೊಲೀಸರಿಗೆ ಅಧಿಕಾರ ನೀಡುತ್ತದೆ. ಪತ್ರಕರ್ತರ ತನಿಖಾ ವರದಿಗಳು ಕೇಸಿನ ತೂಗುಗತ್ತಿ ಎದುರಿಸಬೇಕಾಗುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ಹಾಸ್ಯ ಅಥವಾ ಟೀಕೆಯನ್ನು ದ್ವೇಷ ಎಂದು ಕರೆದು ಬ್ಲಾಕ್ ಮಾಡಬಹುದು, ಕಾನೂನು ಕ್ರಮ ಕೈಗೊಳ್ಳಬಹುದು. ಸಾಮಾಜಿಕ ಸಾಮರಸ್ಯದ ಹೆಸರಿನಲ್ಲಿ ಅಭಿವ್ಯಕ್ತಿಯನ್ನು ನಿರ್ಬಂಧಿಸುವ ಮೂಲಕ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತದೆ. ಈ ದೇಶದ ನಾಗರಿಕರ ಸಂವಿಧಾನದ ಹಕ್ಕುಗಳನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಈ ಕಾನೂನು ನಾಗರಿಕರ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತದೆ; ಹೀಗಾಗಿ ಇದನ್ನು ಜಾರಿಯಾಗಲು ಅವಕಾಶ ನೀಡಬಾರದು ಎಂದು ತಿಳಿಸಿದ್ದಾರೆ.

ಈ ವಿಧೇಯಕದ ಮೂಲಕ ಕಾಂಗ್ರೆಸ್ ಸರ್ಕಾರವು ಪ್ರತಿಪಕ್ಷಗಳು, ಮಾಧ್ಯಮದವರ ಮೇಲೆ ನಿಯಂತ್ರಣ ಹೇರುವುದು, ಹೆದರಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ನಮ್ಮನ್ನು (ಬಿಜೆಪಿ), ನಮ್ಮ ಸಂಘ ಸಂಸ್ಥೆ, ಕನ್ನಡ ಸಂಘಟನೆಗಳನ್ನು ದಮನ ಮಾಡಲು ಸರ್ಕಾರ ಹೊರಟಿದೆ. ಇದರ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರಥಮ ಹಂತದ ಹೋರಾಟ ನಡೆಸಲಾಗುತ್ತಿದೆ. ಈ ಕೂಡಲೇ ಅಸಂವಿಧಾನಿಕವಾದ ಕಾಯ್ದೆಯನ್ನು ಈ ಕೂಡಲೇ ಕೈ ಬಿಡಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.

ತಾಲೂಕು ಮಂಡಲದ ಅಧ್ಯಕ್ಷ ಜಗದೀಶ ಪಂಪಣ್ಣವರ, ಪ್ರಧಾನ ಕಾರ್ಯದರ್ಶಿಗಳಾದ ಸಂಜು ಬಾಗೇವಾಡಿ, ಗೀರೀಶಗೌಡ ಪಾಟೀಲ, ಸಿದ್ದರಾಜ ಹೊಳಿ, ಎಸ್‌.ಎಚ್ ಲೋಟಗೇರಿ, ಸಂಗಣ್ಣ ಹತ್ತಿ, ಮುತ್ತಣ್ಣ ಹುಗ್ಗಿ, ಶಂಕರಗೌಡ ಶಿವಣಿಗಿ, ಹುಲಗಪ್ಪಖಿಲಾರಟ್ಟಿ, ನಾಶಗಪ್ಪ ಹಣಮಕಟ್ಟಿ, ಪುನಿತ ಹಿಪ್ಪರಗಿ, ಅಶೊಕ ಚಿನಿವಾಲರ, ಅಶೊಕ ರಾಠೋಡ, ಭೀಮಣ್ಣ ಕೋಳೂರ, ಗುರನಾಥ ಕಡಕೋಳ, ಸಂಗಮ್ಮ ದೇವರಳ್ಳಿ, ಪ್ರೀತಿ ಕಂಬಾರ, ಕಾವೇರಿ ಕಂಬಾರ, ನೀಖಿಲ ಮಲಗಲದಿನ್ನಿ ಸೇರಿದಂತೆ ಹಲವರಿದ್ದರು.