ರೈತರಿಗೆ ಬೆಳೆ ವಿಮೆಯಲ್ಲಿ ಸೂಕ್ತ ನ್ಯಾಯ ದೊರಕದಿದ್ದರೆ ಅಂಬಾನಿ ಒಡೆತನದ (ಹಿಂದುಜಾ ಗ್ರೂಪ್) ಇಂಡಸ್ ಇಂಡ್ ಕಂಪನಿಯ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಆಳಂದದ ಶಾಸಕ ಬಿಆರ್ ಪಾಟೀಲ್ ಕಲಬುರಗಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕಲಬುರಗಿ
ರೈತರಿಗೆ ಬೆಳೆ ವಿಮೆಯಲ್ಲಿ ಸೂಕ್ತ ನ್ಯಾಯ ದೊರಕದಿದ್ದರೆ ಅಂಬಾನಿ ಒಡೆತನದ (ಹಿಂದುಜಾ ಗ್ರೂಪ್) ಇಂಡಸ್ ಇಂಡ್ ಕಂಪನಿಯ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಆಳಂದದ ಶಾಸಕ ಬಿಆರ್ ಪಾಟೀಲ್ ಕಲಬುರಗಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.ಡಿಸಿಗೆ ಸಲ್ಲಿಸಿದ ಪತ್ರದ ಪ್ರತಿಯನ್ನು ಮಾಧ್ಯಮಗಳಿಗೆ ಬಿಡುಗಡೆಗೊಳಿಸಿ ಮಾತನಾಡಿದ ಪಾಟೀಲರು, ರೈತರಿಗೆ ಅನ್ಯಾಯ ಮಾಡುತ್ತಿರುವ ಈ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಇಲ್ಲವಾದಲ್ಲಿ, ರೈತರಿಗೆ ನ್ಯಾಯ ದೊರಕಿಸಲು ನ್ಯಾಯಾಲಯದ ಬಾಗಿಲನ್ನು ತಟ್ಟಲು ನಾವು ಬದ್ಧರಾಗಿದ್ದೇವೆಂದು ಗುಡುಗಿದರು. ಈ ವರ್ಷ ರಾಜ್ಯವು ಭೀಕರ ಬರಗಾಲವನ್ನು ಎದುರಿಸುತ್ತಿದ್ದು, ಬೆಳೆಗಳು ಸಂಪೂರ್ಣ ನಾಶವಾಗಿವೆ. ಈ ಹಿನ್ನೆಲೆಯಲ್ಲಿ ಪರಿಹಾರ ಕೋರಿ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. ಈ ಮಧ್ಯೆ, ಇಂಡಸ್ ಇಂಡ್ (INDUSIND) ವಿಮಾ ಕಂಪನಿಯು ಕಲಬುರಗಿ ಜಿಲ್ಲೆಯ ಬೆಳೆ ವಿಮೆ ವಿತರಣೆ ಜವಾಬ್ದಾರಿ ವಹಿಸಿಕೊಂಡಿದೆ ಎಂದರು. ಇತ್ತೀಚೆಗಿನ ವರದಿಗಳ ಪ್ರಕಾರ, ಮುಂಗಾರು ಹಾಗೂ ಹಿಂಗಾರು ಬೆಳೆಗಳು ಶೇಕಡಾ 90ರಿಂದ 100ರಷ್ಟು ಹಾನಿಯಾಗಿದ್ದರೂ ಕಂಪನಿಯು ಸೂಕ್ತ ಪರಿಹಾರ ನೀಡಲು ಒಪ್ಪುತ್ತಿಲ್ಲ ಎಂಬುದು ನಮಗೆ ತಿಳಿದು ಬಂದಿದೆ. ಕೇವಲ ಶೇ. 40 ರಿಂದ 50ರಷ್ಟು ಬೆಳೆ ಹಾನಿಯನ್ನು ಮಾತ್ರ ಪರಿಗಣಿಸುವಂತೆ ಕಂಪನಿಯು ಅಗ್ರಿಕಲ್ಚರಲ್ ಇನ್ಶ್ಯೂರನ್ಸ್ ಕಾರ್ಪೋರೇಷನ್ ಆಫ್ ಇಂಡಿಯಾಗೆ ಶಿಫಾರಸು ಮಾಡಿದೆ ಎಂದು ವರದಿಯಾಗಿದೆ. ಕೇಂದ್ರ ಸರ್ಕಾರದ ಬರ ಅಧ್ಯಯನ ತಂಡವು ರಾಜ್ಯಕ್ಕೆ ಖುದ್ದಾಗಿ ಭೇಟಿ ನೀಡಿ ಸಮೀಕ್ಷೆ ನಡೆಸಿದೆ. ರಾಜ್ಯ ಸರ್ಕಾರವೂ ಬರ ಘೋಷಣೆ ಮಾಡಿದ್ದು, ಅದರಂತೆ ರಾಜ್ಯ ವಿಪತ್ತು ನಿರ್ವಹಣೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣೆ ನಿಯಮದಂತೆ ₹22,458 ಕೋಟಿ ಪರಿಹಾರ ಕೋರಿ ಅ.10ರಂದು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಮನವಿ ಸಲ್ಲಿಸಿದೆ ಎಂದು ಬಿ.ಆರ್ ಪಾಟೀಲ್ ಹೇಳಿದರು.ರಾಜ್ಯ ಸರ್ಕಾರವು ಯಾವುದೇ ಕಾರಣಕ್ಕೂ ಇಂಡಸ್ ಇಂಡ್ ಕಂಪನಿಯ ಇಂತಹ ನಡೆಯನ್ನು ಒಪ್ಪಿಕೊಳ್ಳಬಾರದು ಹಾಗೂ ಅಗ್ರಿಕಲ್ಚರಲ್ ಇನ್ಶ್ಯೂರನ್ಸ್ ಕಾಪ್ರೋರೇಷನ್ ಆಫ್ ಇಂಡಿಯಾಕೂಡ ಈ ಶಿಫಾರಸಿಗೆ ಒಪ್ಪಿಗೆ ನೀಡಬಾರದು ಎಂದು ಶಾಸಕ ಬಿಆರ್ ಪಾಟೀಲ್ ಆಗ್ರಹಿಸಿದ್ದಾರೆ.ಬೆಳೆ ವಿಮೆ ವಿಚಾರದಲ್ಲಿ ಕಲಬುರಗಿ ಜಿಲ್ಲಾಧಿಕಾರಿಗಳು ತಿಳಿಸಿರುವಂತೆ ₹375 ಕೋಟಿ ಮಧ್ಯಂತರ ಪರಿಹಾರ ಒದಗಿಸುತ್ತಿರುವುದು ಸ್ವಾಗತಾರ್ಹ. ಒಂದು ವೇಳೆ ರೈತರಿಗೆ ಸೂಕ್ತ ಪರಿಹಾರ ದೊರೆಯದಿದ್ದಲ್ಲಿ, ಅಂಬಾನಿ ಒಡೆತನದ ಇಂಡಸ್ ಇಂಡ್ ಕಂಪನಿಯ ವಿರುದ್ಧ ಬೀದಿಗಿಳಿದು ಹೋರಾಟ ನಡೆಸುತ್ತೇವೆಂದೂ ಎಚ್ಚರಿಕೆ ನೀಡಿದ್ದಾರೆ.ರೈತರಿಗೆ ಬೆಳೆವಿಮೆ ವಿಚಾರದಲ್ಲಿ ಯಾವುದೇ ಕಾಣಕ್ಕೂ ಇಂಡಸ್ ಇಂಡ್ ಕಂಪನಿಯಿಂದ ಅಯ್ಯಾಯವಾಗದಂತೆ, ಈ ವಿಷಯವನ್ನು ಕಲಬುರಗಿ ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಕಂಪನಿಯ ಇಂತಹ ನಡೆಯನ್ನು ಪರಿಗಣಿಸದೆ, ರೈತರಿಗೆ ನ್ಯಾಯಯುತ ಪರಿಹಾರ ದೊರಕಿಸಿಕೊಡಬೇಕೆಂದು ಶಾಸಕ ಬಿಆರ್ ಪಾಟೀಲ್ ಆಗ್ರಹಿಸಿದ್ದಾರೆ.